Advertisement

ಎಸೆಸೆಲ್ಸಿ  ಪರೀಕ್ಷೆ: ಹೆಚ್ಚಿನ ಅಭ್ಯಾಸಕ್ಕೆ ಅಗತ್ಯ ಕ್ರಮ: ದ.ಕ. ಜಿಲ್ಲಾಧಿಕಾರಿ 

11:31 PM Feb 24, 2022 | Team Udayavani |

ಮಂಗಳೂರು: ಪ್ರಸಕ್ತ ಸಾಲಿನಲ್ಲಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಎದುರಿಸಲಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪರೀಕ್ಷಾ ಪೂರ್ವ ಅಭ್ಯಾಸ ಮಾಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗಳ ಪರಿಶೀಲನೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಕಳಪೆ ಸಾಧನೆಯ ಶಾಲೆಗಳ ಮಾಹಿತಿ ನೀಡಿ :

ಎಸೆಸೆಲ್ಸಿ ಪರೀಕ್ಷೆಯಲ್ಲಿ ಈ ಹಿಂದೆ ಕಳಪೆ ಸಾಧನೆ ಮಾಡಿದ ಶಾಲೆಗಳ ಪಟ್ಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ ಗೈರು ಹಾಜರಾಗುತ್ತಿರುವ ಮಕ್ಕಳ ಶಾಲಾವಾರು ಪಟ್ಟಿ ಒದಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು, ಪ್ರತೀ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವಲಯದಲ್ಲಿ ಎಸೆಸೆಲ್ಸಿ  ವಾರ್ಷಿಕ ಪರೀಕ್ಷೆಗೆ ಪೂರಕವಾಗುವ ವಿಶೇಷ ಚಟುವಟಿಕೆಯ ಮೂಲಕ ಅಭ್ಯಾಸ ಮಾಡಲು ಅಥವಾ ಸಾಹಿತ್ಯ ಅಭಿವೃದ್ಧಿ ಪಡಿಸುವುದಾದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಬರವಣಿಗೆ ಅಭ್ಯಾಸ ಮಾಡಲು ಬಫರ್‌ ಶೀಟ್‌ ಒದಗಿಸಲು ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬಫರ್‌ ಶೀಟ್‌ಗಳ ಸಂಖ್ಯೆ ಹಾಗೂ ಅದಕ್ಕೆ ಬೇಕಾಗುವ ಅನುದಾನದ ಮೊತ್ತದ ಬೇಡಿಕೆ ಸಲ್ಲಿಸುವಂತೆಯೂ ಡಿಡಿಪಿಐಗೆ ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್‌ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಪುತ್ತೂರು ತಾಲೂಕಿನಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯುವ ಬೇಡಿಕೆಗೆ ಎಸೆಸೆಲ್ಸಿ ಬೋರ್ಡ್‌ ಒಪ್ಪಿಗೆ ನೀಡಿದೆ. ಇದರಿಂದಾಗಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 274 ಖಾಸಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಕಲಿಕೆಗೆ ಸ್ಥಳಾವಕಾಶ :

ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಬೇಕು, ಕಲಿಕೆಯನ್ನು ಪ್ರೋತ್ಸಾಹಿಸಲು ಅವರ ವಾಸಸ್ಥಾನದ ಸಮೀಪವಿರುವ ಸಮುದಾಯ ಭವನ ಅಥವಾ ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ಒಬ್ಬರು ಜವಾಬ್ದಾರಿಯುತ ಅಧಿಕಾರಿ ಅಥವಾ ನಿವೃತ್ತ ಶಿಕ್ಷಕರ ನೇತೃತ್ವದಲ್ಲಿ ಹೆಚ್ಚಿನ ಪರೀಕ್ಷಾ ಭ್ಯಾಸಗಳನ್ನು ಆಯೋಜಿಸುವುದಾದಲ್ಲಿ ಅದಕ್ಕೆ ಸೂಕ್ತ ಅವಕಾಶ ಮಾಡಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶಾಲೆ ಕಟ್ಟಡ ದುರಸ್ತಿ :

1.50 ಲಕ್ಷ ರೂ. ಒಳಗೆ, 1.50ರಿಂದ 5 ಲಕ್ಷ ರೂ. ಹಾಗೂ 5 ಲಕ್ಷ ರೂ. ಮೇಲ್ಪಟ್ಟು ದುರಸ್ತಿಗೆ ಅಗತ್ಯವಿರುವ ಶಾಲೆಗಳ ಪಟ್ಟಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಪ್ರತೀ ತಾಲೂಕಿನಲ್ಲಿ ಅತ್ಯಂತ ನಾದುರಸ್ತಿಯಲ್ಲಿರುವ 5 ಶಾಲೆಗಳ ವಿವರವಾದ ಮಾಹಿತಿಯನ್ನು ಮಾ. 2ರೊಳಗೆ ಸಲ್ಲಿಸಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next