Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸರ್ವಸಿದ್ಧತೆ

10:20 AM Jun 21, 2020 | sudhir |

ಮಂಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಜೂ. 25ರಿಂದ ಜು. 4ರ ವರೆಗೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪ್ರತಿ ವರ್ಷದಂತೆ ಸಿದ್ಧತೆ ಮಾಡಿಕೊಳ್ಳು ವುದರ ಜತೆಗೆ ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷೆ ದೃಷ್ಟಿಯಿಂದ ಪ್ರತಿ ಕೇಂದ್ರದ ಪ್ರತಿ ಯೊಂದು ಕೊಠಡಿಯನ್ನು ನಿತ್ಯವೂ ಸ್ಯಾನಿಟೈಸೇಶನ್‌ ಮಾಡುವುದು ಕಡ್ಡಾಯವಾಗಿದೆ. ಪರೀಕ್ಷೆ ಕೇಂದ್ರದಲ್ಲಿ ಆರೋಗ್ಯ ಕೌಂಟರ್‌ ಸ್ಥಾಪಿಸಿ ವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕ್ರೀನ್‌ ಮೂಲಕ ಪರೀಕ್ಷಿಸಿ ಅನಂತರ ಕೊಠಡಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕಪಿತಾನಿಯೋ ಪ್ರೌಢ ಶಾಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ಸಿದ್ಧತೆ ಸಭೆಯ ಆಧ್ಯಕ್ಷತೆ ವಹಿಸಿ ಪೂರ್ವಸಿದ್ಧತೆ ಕ್ರಮಗಳ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಮೊಬೈಲ್‌ ನಿಷೇಧ
ಸಂಬಂಧಪಟ್ಟ ಅಧಿಕಾರಿಗಳು ಶಾಲಾ ಕೊಠಡಿಗಳ ವ್ಯವಸ್ಥೆ, ಕೋವಿಡ್ ರೋಗದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಸ್ಕ್ ಧರಿಸದೇ ಬಂದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಬೇಕು. ಎಲ್ಲ ಕೊಠಡಿಗಳಿಗೂ ಜನರೇಟರ್‌, ಸಿಸಿ ಕೆಮರಾ ಅಳವಡಿಕೆ ಮಾಡುವ ಜತೆಗೆ ಶಾಲೆಯಲ್ಲಿ ಶೌಚಾಲಯ ಸ್ವತ್ಛವಾಗಿರಬೇಕು ಎಂದು ಸೂಚಿಸಿದರು. ಪರೀಕ್ಷಾ ಕೇಂದ್ರಗಳಿಗೆ ಕೊಠಡಿ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಗಳು ಮೊಬೈಲ್‌ಗ‌ಳನ್ನು ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಡಿಡಿಪಿಐ, ಎಲ್ಲ ತಾಲೂಕುಗಳ ಬಿಇಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಭಯ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ಹಾಜರಾಗಬೇಕು. ಬರುವಾಗ ಊಟ ಮತ್ತು ನೀರನ್ನು ಕಡ್ಡಾಯ ತೆಗೆದುಕೊಂಡು ಬರಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಪಾಲಿಸುವ ಜತೆಗೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

ಗಡಿ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ
ಮಂಗಳೂರು: ಕೇರಳದ 367 ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಪ್ರೌಢಶಾಲೆಗಳಲ್ಲಿ ಪರೀಕ್ಷೆಗೆ ಹಾಜರಾಗಲಿದ್ದು, ಅವರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರಯಾಣಕ್ಕೆ ನಿರ್ಬಂಧವಿರುವುದರಿಂದ ಹಾಗೂ ವಿದ್ಯಾರ್ಥಿಗಳ ಹೆತ್ತವರು/ ಪೋಷಕರಿಗೆ ತಮ್ಮ ಸ್ವಂತ ವಾಹನದಲ್ಲಿ ಕೂಡ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು ಅವಕಾಶವಿಲ್ಲದಿರುವುದರಿಂದ ಜಿಲ್ಲೆಯ ಖಾಸಗಿ ಶಾಲೆಗಳ ಬಸ್‌ಗಳ ಮೂಲಕ ನಿರ್ದಿಷ್ಟ ಪಡಿಸಿದ ಗಡಿ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಬಂದು ಪರೀಕ್ಷೆ ಮುಗಿದ ತತ್‌ಕ್ಷಣ ವಾಪಸ್‌ ಗಡಿ ಪ್ರದೇಶಕ್ಕೆ ತಲುಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ವ್ಯವಸ್ಥೆ ಮಾಡಲಾಗಿದೆ.

ವಾಟ್ಸ್‌ಆ್ಯಪ್‌ನಲ್ಲಿ ಪ್ರವೇಶಪತ್ರ
ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಪರೀಕ್ಷಾ ಪ್ರವೇಶ ಪತ್ರವನ್ನು ರವಾನಿಸಿದೆ. ಸಿಗದವರಿಗೆ ಪರೀಕ್ಷಾ ದಿನದಂದೇ ನೋಡಲ್‌ ಅಧಿಕಾರಿಗಳ ಮೂಲಕ ನಿರ್ದಿಷ್ಟಪಡಿಸಿದ ಗಡಿ ಪ್ರದೇಶದಲ್ಲೇ ಪ್ರವೇಶ ಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿರುವ ನಿರ್ದಿಷ್ಟ‌ ಗಡಿಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next