Advertisement
ಇನ್ನೊಂದೆಡೆ ಉತ್ತೀರ್ಣ ಅಂಕ ಪಡೆದಿದ್ದ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಿರುವುದೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಉತ್ತರ ಪತ್ರಿಕೆ ಪಡೆದುಕೊಂಡಾಗ ಬೆಳಕಿಗೆ ಬಂದಿದೆ. ಕೋವಿಡ್ ಕಾಲದಲ್ಲಿ ನಡೆದ ಪರೀಕ್ಷೆಯ ಮೌಲ್ಯಮಾಪನವನ್ನು ಕಠಿನಗೊಳಿಸಬಾರದು, ಉದಾರತೆ ಇರಲಿ ಎಂದು ಸ್ವತಃ ಶಿಕ್ಷಣ ಸಚಿವರೇ ಹೇಳಿದ್ದರು. ಹಾಗಿದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಬಹಳ ಬಿಗಿಯಾಗಿ ಮೌಲ್ಯಮಾಪನ ಮಾಡಲಾಗಿದೆ.
Related Articles
ದಕ್ಷಿಣ ಕನ್ನಡ ಜಿಲ್ಲೆಗೆ ಬೇರೆ ಜಿಲ್ಲೆಗಳ ಉತ್ತರ ಪತ್ರಿಕೆಗಳು ಮೌಲ್ಯಮಾಪನಕ್ಕೆ ಬಂದಿದ್ದವು. ಇಲ್ಲಿನ ಶಿಕ್ಷಕರು ಅನುತ್ತೀರ್ಣಗೊಳ್ಳುವ ಹಂತದಲ್ಲಿದ್ದ ವಿದ್ಯಾರ್ಥಿಗಳಿಗೆ ಸುಮಾರು 8-10 ಅಂಕಗಳಷ್ಟು ಹೆಚ್ಚುವರಿಯಾಗಿ ನೀಡಿ ಉತ್ತೀರ್ಣಗೊಳಿಸಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಮತ್ತು ಈ ಸಂದಿಗ್ಧ ಕಾಲದಲ್ಲಿ ಅಗತ್ಯ ಎಂದಿದ್ದಾರೆ ಶಿಕ್ಷಕ ರಾಮಕೃಷ್ಣ ಶಿರೂರು.
Advertisement
ಸಾವಿರ ರೂ. ನೀಡಬೇಕು!ವಿದ್ಯಾರ್ಥಿಗಳು ಒಂದು ವಿಷಯದ ಉತ್ತರಪತ್ರಿಕೆಯ ಛಾಯಾಪ್ರತಿ ಪಡೆಯಲು 405 ರೂ. ನೀಡಬೇಕು. ಮರು ಮೌಲ್ಯಮಾಪನ ಮಾಡಿಸಬೇಕಾದರೆ ಮತ್ತೆ 810 ರೂ. ಪಾವತಿಸಬೇಕು. ಹೀಗೆ ಪಾವತಿಸಿದ 810 ರೂ. ಮರಳಿ ಸಿಗಬೇಕಾದರೆ ಮರು ಮೌಲ್ಯಮಾಪನದಲ್ಲಿ ಕನಿಷ್ಠ 6 ಅಂಕ ಹೆಚ್ಚುವರಿ ಪಡೆಯಬೇಕು. ಅನುತ್ತೀರ್ಣನಾದ ವಿದ್ಯಾರ್ಥಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರೂ ಆತ ಪೂರಕ ಪರೀಕ್ಷೆಗೆ 300 ರೂ. ಕಟ್ಟಲೇಬೇಕು. ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಬಂದು ಉತ್ತೀರ್ಣನಾದರೆ ಪೂರಕ ಪರೀಕ್ಷೆಗೆ ಕಟ್ಟಿದ ಹಣ ವಾಪಸ್ ಸಿಗುವುದಿಲ್ಲ. ಇದರಿಂದ ಯಾರಧ್ದೋ ತಪ್ಪಿನಿಂದಾಗಿ ಕೊರೊನಾ ಸಂಕಷ್ಟದ ನಡುವೆಯೂ ಅನಗತ್ಯವಾಗಿ ಹಣ ಕಳೆದುಕೊಳ್ಳುವ ಶಿಕ್ಷೆಗೆ ನೊಂದ ವಿದ್ಯಾರ್ಥಿಗಳು, ಹೆತ್ತವರು ಸಿಲುಕಿದ್ದಾರೆ. ಉಡುಪಿಯಲ್ಲೂ ಇದೇ ಸಮಸ್ಯೆ
ಉಡುಪಿ ಜಿಲ್ಲೆಯಲ್ಲಿಯೂ ಬಹುತೇಕ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯಗಳಲ್ಲಿ ಕಡಿಮೆ ಅಂಕ ಬಂದಿರುವುದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದರೂ ವಿಜ್ಞಾನ, ಸಮಾಜವಿಜ್ಞಾನಗಳಲ್ಲಿ ಅನುತ್ತೀರ್ಣರಾಗಿರುವ ಅಥವಾ ಜಸ್ಟ್ ಪಾಸ್ ಅಂಕ ಪಡೆದ ಉದಾಹರಣೆಗಳು ಇಲ್ಲಿವೆ. ಈ ವಿಚಾರವನ್ನು ಪರೀಕ್ಷಾ ಮಂಡಳಿ ನಿರ್ದೇಶಕರ ಗಮನಕ್ಕೆ ತಂದಿದ್ದೇವೆ ಎಂದು ಉಡುಪಿ ಡಿಡಿಪಿಐ ಶೇಷಶಯನ ಕಾರಿಂಜ “ಉದಯವಾಣಿ’ಗೆ ತಿಳಿಸಿದ್ದಾರೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರು ಮೌಲ್ಯಮಾಪನಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವುದರ ಬಗ್ಗೆ ಮಾಹಿತಿ ಇಲ್ಲ ಎಂದು ಈ ಬಗ್ಗೆ ಜಿಲ್ಲೆಯ ಡಿಡಿಪಿಐ ಮಲ್ಲೇಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಮೌಲ್ಯಮಾಪಕರ ಎಡವಟ್ಟುಗಳು
01- ಪುಟ ಸಂಖ್ಯೆಯೇ ಅಂಕವಾಯಿತು!
ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯೊಂದರ ವಿದ್ಯಾರ್ಥಿನಿಯೋರ್ವಳು ವಿಜ್ಞಾನದಲ್ಲಿ 36 ಅಂಕ ಗಳಿಸಿದ್ದರೂ ಪುಟ ಸಂಖ್ಯೆ ಕಾಲಂನಲ್ಲಿ ಬರೆದಿದ್ದ “17 ಪುಟ’ವನ್ನೇ ಆಕೆಯ ಅಂಕವೆಂದು ನೀಡಲಾಗಿರುವುದು ಬೆಳಕಿಗೆ ಬಂದಿದೆ. ಈಕೆಯ ಫಲಿತಾಂಶ ಅನುತ್ತೀರ್ಣವೆಂದು ಬಂದಿದ್ದು, ಅನುಮಾನಗೊಂಡು ಉತ್ತರ ಪತ್ರಿಕೆಯನ್ನು ತರಿಸಿದಾಗ ಮೌಲ್ಯಮಾಪಕರ ಈ ಎಡವಟ್ಟು ಪತ್ತೆಯಾಗಿದೆ ಎಂದು ಆ ಶಾಲೆಯ ಶಿಕ್ಷಕರು ಹೇಳಿದ್ದಾರೆ. 02 – ಒಂದರಲ್ಲಿ ಮಾತ್ರ 19 ಅಂಕ!
ಎಲ್ಲ ವಿಷಯಗಳಲ್ಲಿ 70ಕ್ಕೂ ಅಧಿಕ ಅಂಕ ಗಳಿಸಿ ಪ್ರಥಮ ದರ್ಜೆ ಪಡೆದ ಹುಡುಗನೊಬ್ಬ ವಿಜ್ಞಾನದಲ್ಲಿ 19 ಅಂಕ ಪಡೆದು ಅನುತ್ತೀರ್ಣನಾಗಿದ್ದಾನೆ. ಇದು ತನ್ನ ಅಂಕ ಅಲ್ಲ ಎಂದು ಆತ ನೋವು ಅನುಭವಿಸುತ್ತಿದ್ದಾನೆ. 03- 3 ವಿಷಯ ಮರು ಮೌಲ್ಯಮಾಪನ
600ಕ್ಕೂ ಹೆಚ್ಚು ಅಂಕಗಳ ನಿರೀಕ್ಷೆಯಲ್ಲಿದ್ದ ನನಗೆ 558 ಮಾತ್ರ ಬಂದಿದೆ. ವಿಜ್ಞಾನ, ಗಣಿತದಲ್ಲಿ 75ಕ್ಕಿಂತ ಹೆಚ್ಚು ಅಂಕ ಗಳಿಸುವ ವಿಶ್ವಾಸವಿತ್ತು. ಆದರೆ ಲಭಿಸಿದ್ದು ಕೇವಲ 60 ಅಂಕ. ಸಣ್ಣ ಅಕ್ಷರ ತಪ್ಪಿಗೂ ಒಂದೊಂದು ಅಂಕ ಕಳೆದಿದ್ದಾರೆ. ಹೀಗಾಗಿ ನಾನು ಕೂಡ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ. ಅಂಕಗಳ ತಪ್ಪು ಉಲ್ಲೇಖ ಮತ್ತಿತರ ಗಂಭೀರ ಲೋಪದೋಷಗಳು ಕಂಡುಬಂದಿದ್ದರೆ ತತ್‌ಕ್ಷಣ ಗಮನಕ್ಕೆ ತನ್ನಿ, ಪರೀಕ್ಷಾ ಮಂಡಳಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
-ವಿ. ಸುಮಂಗಲಾ, ಎಸೆಸೆಲ್ಸಿ ಪರೀಕ್ಷಾ ಮಂಡಳಿ ನಿರ್ದೇಶಕಿ ಧನ್ಯಾ ಬಾಳೆಕಜೆ