ದಾವಣಗೆರೆ: ಮನೆಗೆ ಬಂದ ಅತಿಥಿ, ಗೃಹ ಸಚಿವ ಎಂ.ಬಿ. ಪಾಟೀಲರಿಗೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಏಕವಚನದಲ್ಲಿ ತರಾಟೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಬುಧವಾರ ನಗರಕ್ಕೆ ಭೇಟಿ ನೀಡಿದ ಗೃಹ ಸಚಿವ ಎಂ.ಬಿ. ಪಾಟೀಲ್, ಇಲಾಖಾ ಪ್ರಗತಿ ಪರಿಶೀಲನೆ ನಂತರ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವ ಶಂಕರಪ್ಪನವರ ನಿವಾಸಕ್ಕೆ ಮಧ್ಯಾಹ್ನ ಭೋಜನಕ್ಕೆ ತೆರಳಿದ್ದಾರೆ. ಈ ವೇಳೆ ಅವರ ವಿರುದ್ಧ ಮಾಜಿ ಸಚಿವ ಮಲ್ಲಿಕಾರ್ಜುನ್ ಕೊಂಚ ಗರಂ ಆಗಿದ್ದಾರೆ.
ಗೃಹ ಸಚಿವ ಎಂ.ಬಿ. ಪಾಟೀಲ್ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, “ನೀನು ಏನೇನೋ ಮಾತನಾಡುತ್ತಿದ್ದೀಯಾ. ಶಿವಶಂಕರಪ್ಪನವರು ತಂದೆ ಇದ್ದಂಗೆ, ಮಂತ್ರಿ ಆಗಿದ್ದೀನಿ ಅಂತ ಏನೇನೋ ಮಾತನಾಡು ತ್ತಿದ್ದೀಯಾ’ ಎಂದು ಏರಿದ ಧ್ವನಿಯಲ್ಲಿ ಎಂ.ಬಿ. ಪಾಟೀಲ್ ವಿರುದಟಛಿ ಹರಿಹಾಯ್ದಿದ್ದಾರೆ. ಇದಕ್ಕೆಲ್ಲ ಪಾಟೀಲ್ ಸಮಾಧಾನದಿಂದಲೇ ಪ್ರತಿಕ್ರಿಯಿಸಿದರು. ಶಾಮನೂರು ಶಿವಶಂಕರಪ್ಪ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದಾದ ನಂತರ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಗೃಹ ಸಚಿವರೊಂದಿಗೆ ಭೋಜನ ಮಾಡದೇ ಹಾಗೆಯೇ ತೆರಳಿದರು. ಎಂ.ಬಿ. ಪಾಟೀಲ್, ಶಾಮ ನೂರು ಶಿವಶಂಕರಪ್ಪನವರೊಂದಿಗೆ ಊಟ ಮಾಡಿದರು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಸಂದರ್ಭದಲ್ಲಿ ಎಂ.ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರು. ಕೊನೆಗೆ ಸುಮ್ಮನಾಗಿದ್ದರು. ಬಳಿಕ ಇದೇ ಮೊದಲ ಬಾರಿಗೆ ಎಂ.ಬಿ. ಪಾಟೀಲ್ ಶಾಮನೂರು ಶಿವಶಂಕರಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಸಚಿವ ಎಂ.ಬಿ. ಪಾಟೀಲ್ ಅಂಥದ್ದೇನೂ ಇಲ್ಲ. ಮಲ್ಲಿಕಾರ್ಜುನ್ ಮತ್ತು ನಾನು ಗೆಳೆಯರು
ಎಂದು ಪ್ರತಿಕ್ರಿಯಿಸಿದರು.