Advertisement
ಹತ್ತನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದೃಶ್ಯ ಮಾಧ್ಯಮಗಳಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಟ್ಟಿಯಲ್ಲಿ ಅತ್ತಿಬೆಲೆ ಸೇಂಟ್ ಫಿಲೋಮಿನಾ ಶಾಲೆ ವಿದ್ಯಾರ್ಥಿ ಡಿ.ಸೃಜನಾ ಹೆಸರಿರುವುದು ಎಲ್ಲಡೆ ಪ್ರಸಾರವಾಯಿತು. ಈ ವೇಳೆ ವಿದ್ಯಾರ್ಥಿನಿ ಮನೆ, ಆಕೆ ಓದಿದ ಶಾಲೆಯಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ.
Related Articles
Advertisement
ಡಾಕ್ಟರ್ ಆಗುವ ಗುರಿ: ತಂದೆ ವಿಜ್ಞಾನ ಶಿಕ್ಷರು, ತಾತ ಕೂಡ 28 ವರ್ಷಗಳ ಕಾಲ ಶಿಕ್ಷಕರಾಗಿದ್ದವರು. ಅವರೆಲ್ಲರ ಆಸೆಯಂತೆ ನಾನು ವೈದ್ಯಕೀಯ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಗುರಿ ಹೊಂದಿದ್ದೇನೆಂದು ಹೇಳಿದರು.
ಪ್ರಥಮ ರ್‍ಯಾಂಕ್ ರಹಸ್ಯ: ಸೃಜನಾ ಪ್ರಥಮ ರ್‍ಯಾಂಕ್ ಗಳಿಸಲು ಆಕೆ ಓದಿನ ರಹಸ್ಯ ಮಾತ್ರ ಸರಳವಾದದ್ದು. ಸೃಜನಾ ಕೇವಲ ಹತ್ತನೇ ತರಗತಿಯಲ್ಲಿ ಅಷ್ಟೇ ಅಲ್ಲದೇ, ಹಿಂದಿನ ತರಗತಿಗಳಲ್ಲೂ ಇದೇ ರೀತಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆಯುತ್ತಿದ್ದಳು. ಹಿಂದಿನ ತರಗತಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಆದರೆ ಹತ್ತನೇ ತರಗತಿ ಆರಂಭವಾದ ಮೊದಲ ದಿನದಿಂದ ಪಠ್ಯೇತರ ಚಟುವಟಿಕೆಗಳಿಗೆ ಫುಲ್ ಬ್ರೇಕ್ ಹಾಕಿ, ಪ್ರತಿ ದಿನದ ಪಾಠಗಳನ್ನು ಅಂದೇ ಅರ್ಥಮಾಡಿಕೊಳ್ಳುತ್ತಿದ್ದರು. ಹೀಗೆ ಇಡೀ ವರ್ಷ ಬೇರೆ ಯಾವುದೇ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳದೇ ಕೇವಲ ಓದಿಗೆ ಆದ್ಯತೆ ನೀಡಿದ್ದು ಹಾಗೂ ಓದು ಮತ್ತು ಸಹಜ ನಿದ್ದೆಯತ್ತ ಗಮನ ನೀಡಿದ್ದೇ ಪ್ರಥಮ ರ್‍ಯಾಂಕ್‌ನ ರಹಸ್ಯ ಎಂದು ಸೃಜನಾ ಹೇಳಿಕೊಳ್ಳುತ್ತಾರೆ.
ಕೃತಜ್ಞತೆ: ನಾನು ಇಂದು ಈ ಮಟ್ಟದಲ್ಲಿ ಅಂಕ ಗಳಿಸಬೇಕಾದರೆ ಕೇವಲ ನನ್ನದೊಬ್ಬಳ ಪ್ರಯತ್ನ ಮಾತ್ರವಲ್ಲ, ಇದರ ಹಿಂದೆ ನಮ್ಮ ಶಾಲೆಯ ಆಡಳಿತ ಮಂಡಳಿ, ಪ್ರತಿ ಒಂದು ವಿಷಯದ ಶಿಕ್ಷಕರು, ನನ್ನ ತಂದೆ ನನಗೆ ಶಿಕ್ಷಕರಾಗಿ, ಸಲಹೆಗಾರರಾಗಿ ನನ್ನ ಈ ಸಾಧನೆಗೆ ಕೈಜೋಡಿಸಿದ್ದಾರೆ. ಅಮ್ಮ ಸಹ ನನ್ನ ಓದಿಗೆ ಸಹಕಾರ ಕೊಟ್ಟಿದ್ದಾರೆ. ಈ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದರ ಜೊತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ತಾತನ ಆಶೀರ್ವಾದ: ಮಗಳ ಬಗ್ಗೆ ನಿರೀಕ್ಷೆ ಇತ್ತು. ಆಕೆ ಸಹಜವಾಗಿ ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಲಿದ್ದಾಳೆಂಬ ನಿರೀಕ್ಷೆ ಇತ್ತು. ಆದರೆ, ಇಡೀ ರಾಜ್ಯಕ್ಕೆ ಪ್ರಥಮ ಬರುತ್ತಾಳೆಂದು ಅಂದುಕೊಂಡಿರಲಿಲ್ಲ. ಇದು ಸಾಧ್ಯವಾಗಿದೆ. ದೇವರ ದಯೆ ಹಾಗೂ ಆಕೆ ತಾತ, ನಮ್ಮ ತಂದೆ ಅವರ ಆಶೀರ್ವಾದ ಎಂದು ನಂಬಿದ್ದೇನೆ. ಅಲ್ಲದೇ, ನನ್ನ ಅಪ್ಪ ಸಹ 28 ವರ್ಷಗಳ ಕಾಲ ಶಿಕ್ಷಕರಾಗಿದ್ದವರು ಎಂದು ಸೃಜನಾಳ ತಂದೆ ದಿವಾಕರ್ ಸಂತಸ ಹಂಚಿಕೊಂಡರು.
ರೆಸ್ಟ್ ಅಂಡ್ ಟ್ರೆಸ್: ಮಕ್ಕಳು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮನಸ್ಸು ತಿಳಿಯಾಗಿರಬೇಕು. ಯಾವುದೇ ಗೊಂದಲ, ಯೋಚನೆ, ಚಿಂತೆ ಇರಬಾರದು. ಹಾಗಾಗಿ, ನಾನು ನನ್ನ ಮಗಳಿಗೆ ಎಷ್ಟು ಸಮಯ ಓದುತ್ತಿಯೋ ಅಷ್ಟೇ ಸಮಯ ರೆಸ್ಟ್ ಮಾಡಬೇಕೆಂದು ಹೇಳುತ್ತಿದ್ದೆ. ರೆಸ್ಟ್ ಮಾಡಿದಷ್ಟು ಮನಸ್ಸಿನ ಮೇಲಾಗುವ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ, ರೆಸ್ಟ್ ಅಂಡ್ ಟ್ರೆಸ್ ಬಗ್ಗೆ ಹೆಚ್ಚು ತಿಳಿ ಹೇಳುತ್ತಿದ್ದೆ ಎಂದರು.
ಶಾಲೆಗೆ ಕೀರ್ತಿ ತಂದ ಸೃಜನಾ: ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯ ಒಂದನೇ ತರಗತಿಯಿಂದ ಓದುತ್ತ ಇಂದಿನ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದು ತನ್ನ ಕುಟುಂಬ, ಶಾಲೆ ಹಾಗೂ ಊರು, ತಾಲೂಕಿಗೆ ಕೀರ್ತಿ ತಂದಿರುವುದು ನಮಗೆ ಸಂತಸ ತಂದಿದೆ.
ನಮ್ಮ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಮುಖ್ಯ ಶಿಕ್ಷಕ ಜಯಕುಮಾರ್ ಸಂತೋಷ ಹಂಚಿಕೊಂಡರು. ಡಿ.ಸೃಜನಾ ಇಡೀ ಶಾಲೆಯ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಒಂದನೇ ತರಗತಿಯಿಂದ ಇಲ್ಲಿಯೇ ಓದುತ್ತಿದ್ದರಿಂದ ಇಡೀ ಶಾಲೆಯಲ್ಲಿನ ಎಲ್ಲಾ ಶಿಕ್ಷಕರಿಗೂ ಪ್ರೀತಿ ಪಾತ್ರಳಾಗಿದ್ದಾಳೆ.
ಪಟಾಕಿ, ಸಿಹಿ: ಸೃಜನಾ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಪಾಸ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ಆಡಳಿತ ಮಂಡಳಿ ಶಾಲೆ ಬಳಿ ಬಂದು ಸೃಜನಾರ ಕುಟುಂಬದವರನ್ನು ಕರೆಸಿಕೊಂಡು ಶಾಲಾ ಆವರಣದಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಿ, ಅವರಿಗೆ ಸಿಹಿ ತಿನಿಸಿ ಗೌರವಿಸಿದರು.
ಅಭಿನಂದನೆಗಳ ಸುರಿಮಳೆ: ಅತ್ತಿಬೆಲೆಯ ಶಿಕ್ಷಕ ದಿವಾಕರ್ ಮತ್ತು ವೀಣಾ ದಂಪತಿ ಹಿರಿಯ ಮಗಳಾದ ಡಿ.ಸೃಜನಾ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ತಂದೆಯ ಮೊಬೈಲ್‌ಗೆ ನೂರಾರು ಕರೆಗಳ ಮೂಲಕ ಅಭಿನಂದನೆಗಳ ಸುರಿಮಳೆ ಬರತೊಡಗಿದ್ದವು. ಆನೇಕಲ್ ತಾಲೂಕಿಗೆ ಫಸ್ಟ್ ರ್‍ಯಾಂಕ್ ಎಂಬ ಸುದ್ದಿ ತಿಳಿದ ತಾಲೂಕಿನ ಜನತೆ ಸಹ ಸೃಜನಾಳ ಫೋಟೊ ಫೇಸ್‌ಬುಕ್, ವಾಟ್ಸ್‌ಅಪ್‌ಗ್ಳಲ್ಲಿ ಹಾಕಿಕೊಂಡು ಶುಭ ಕೋರ ತೊಡಗಿದ್ದಾರೆ.