ಹಿರಿತೆರೆಯಲ್ಲಿ ವೃತ್ತಿ ಬದುಕು ಆರಂಭಿಸಿ ಬಳಿಕ ಕಿರುತೆರೆಯತ್ತ ಮುಖಮಾಡಿ ನೆಲೆಕಂಡಿರುವ ಸೃಜನ್ ಲೋಕೇಶ್, ಈಗ ಮತ್ತೆ ಹಿರಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ಹೌದು. ಆಗಾಗ್ಗೆ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಮುಖ ತೋರಿಸುತ್ತಿದ್ದ ಸೃಜನ್ ಲೋಕೇಶ್, ಈಗ “ಎಲ್ಲಿದ್ದೆ ಇಲ್ಲಿ ತನಕ’ ಎನ್ನುವ ಚಿತ್ರದ ಮೂಲಕ ನಾಯಕ ನಟನಾಗಿ ಮತ್ತು ನಿರ್ಮಾಪಕನಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ. ಅಂದಹಾಗೆ, ಇತ್ತೀಚೆಗೆ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ.
ಗವಿಪುರಂನ ಬಂಡೆ ಮಹಾಕಾಳಿಯಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಹಿರಿಯ ನಟಿ ಜಯಂತಿ ಚಾಲನೆ ನೀಡಿದರು. ಚಿತ್ರದ ಮೊದಲ ದೃಶ್ಯಕ್ಕೆ ನಟ ಕಂ ನಿರ್ದೇಶಕ ವಿ. ರವಿಚಂದ್ರನ್ ಕ್ಲಾಪ್ ಮಾಡಿದರೆ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿದರು. ನಟರಾದ ವಿನೋದ್ ಪ್ರಭಾಕರ್, ಧರ್ಮ ಕೀರ್ತಿರಾಜ್, ನಟಿ ಪ್ರಿಯಾಂಕ ಉಪೇಂದ್ರ, ತಾರಾ, ಗಿರಿಜಾ ಲೋಕೇಶ್, ಅವಿನಾಶ್, ಎಂ.ಜಿ ರಾಮಮೂರ್ತಿ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಮುಹೂರ್ತಕ್ಕೆ ಸಾಕ್ಷಿಯಾಗಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಧ್ರುವ ಕುಮಾರ್ ಸಹ ನಿರ್ಮಾಪಕರಾಗಿ ಕೈ ಜೋಡಿಸುತ್ತಿದ್ದಾರೆ. ಇಲ್ಲಿಯವರೆಗೆ ಕಿರುತೆರೆಯ ಹಲವು ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳನ್ನು ನಿರ್ದೇಶಿಸಿದ ಅನುಭವವಿರುವ ತೇಜಸ್ವಿ, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತವಿದ್ದು, ಕವಿರಾಜ್ ಮತ್ತು ಚೇತನ್ ಸಾಹಿತ್ಯವಿದೆ. ಚಿತ್ರಕ್ಕೆ ಹೆಚ್.ಸಿ ವೇಣು ಛಾಯಾಗ್ರಹಣ ಮಾಡಿದರೆ, ರಾಕೇಶ್. ಸಿ.ಎ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ.
ಅಂದು ಆಗಮಿಸಿದ್ದ ಚಿತ್ರರಂಗದ ಗಣ್ಯರು, ಸ್ನೇಹಿತರು, ಆಪ್ತರನ್ನೆಲ್ಲಾ ಪ್ರೀತಿಯಿಂದ ಮಾತನಾಡಿಸಿ, ಪತ್ರಕರ್ತರ ಮುಂದೆ ಬಂದು ಕುಳಿತ ಸೃಜನ್ ಲೋಕೇಶ್ ಮಾತಿಗಿಳಿದರು. “ಈ ಚಿತ್ರದಲ್ಲಿ ನಟನಾಗಿ, ನಿರ್ಮಾಪಕನಾಗಿ ಎರಡೆರಡು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂಥ ರೊಮ್ಯಾಂಟಿಕ್ ಕಾಮಿಡಿ ಕಥೆ ಚಿತ್ರದಲ್ಲಿದೆ. ಇಡೀ ಚಿತ್ರ ನವಿರಾದ ಹಾಸ್ಯದ ಮೂಲಕ ಸಾಗುತ್ತದೆ. ಚಿತ್ರ ಚೆನ್ನಾಗಿ ಬರಬೇಕೆಂಬ ಕಾರಣಕ್ಕೆ ತಂಡದಲ್ಲಿ ಸಾಕಷ್ಟು ಕಿತ್ತಾಡಿದ್ದೇವೆ. ದುಡ್ಡಿಗಿಂತ ಹೆಚ್ಚಾಗಿ ಒಳ್ಳೆಯ ಚಿತ್ರ ಕೊಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ’ ಎಂಬ ವಿವರಣೆ ಕೊಟ್ಟರು ಅವರು.
ನಿರ್ದೇಶಕ ತೇಜಸ್ವಿಗೆ ಇದು ಮೊದಲ ನಿರ್ದೇಶನದ ಚಿತ್ರ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತು ಶುರುಮಾಡಿದ ಅವರು, “ಸುಮಾರು ಏಳೆಂಟು ವರ್ಷಗಳಿಂದಲೂ ಒಂದು ಒಳ್ಳೆಯ ಚಿತ್ರ ಮಾಡಬೇಕು ಎಂಬ ಯೋಚನೆಯಿತ್ತು. ಅದಕ್ಕಾಗಿ ಅನೇಕ ಕಥೆಗಳ ಹುಡುಕಾಟ ನಡೆಸಿದ್ದು ನಿಜ. ಅದರಲ್ಲಿ ಮೂರು ಕಥೆಗಳನ್ನು ಆರಂಭದಲ್ಲಿ ಆಯ್ಕೆ ಮಾಡಿಕೊಂಡೆವು. ಅಂತಿಮವಾಗಿ ಅದರಲ್ಲೂ ಅತ್ಯುತ್ತಮ ಎನಿಸಿದ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡ ನಂತರ ಚಿತ್ರ ಮಾಡಲು ನಿರ್ಧರಿಸಿದೆವು. ಈಗ “ಎಲ್ಲಿದೆ ಇಲ್ಲಿ ತನಕ’ ಚಿತ್ರ ಶುರುವಾಗುತ್ತಿದೆ. ಚಿತ್ರ ಮತ್ತದರ ಕಥೆ ಎರಡೂ ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆಯಿದೆ’ ಅಂತ ಹೇಳಿಕೊಂಡರು ನಿರ್ದೇಶಕ ತೇಜಸ್ವಿ.
ಚಿತ್ರದಲ್ಲಿ ನಾಯಕ ಸೃಜನ್ ಲೋಕೇಶ್‌ಗೆ ನಾಯಕಿಯಾಗಿ ಹರಿಪ್ರಿಯಾ ಜೋಡಿಯಾಗುತ್ತಿದ್ದಾರೆ. ಉಳಿದಂತೆ ತಾರಾ ಅನುರಾಧ, ಸಿಹಿಕಹಿ ಚಂದ್ರು, ಗಿರಿ, ತರಂಗ ವಿಶ್ವ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ. ಸದ್ಯ ಭರದಿಂದ ಚಿತ್ರೀಕರಣ ಆರಂಭಿಸಿರುವ “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಮುಂದಿನ ಮೇ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.
ಜಿ. ಎಸ್. ಕಾರ್ತಿಕ ಸುಧನ್