ಇಂದೋರ್: ʼಪಠಾಣ್ʼ ಸಿನಿಮಾ ರಿಲೀಸ್ ಖಂಡಿಸಿ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮತ್ತು ಆಕ್ಷೇಪಾರ್ಹ ಘೋಷಣೆ ಕೂಗಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
ರಾಜಿಕ್ ಅಲಿಯಾಸ್ ರಿಜ್ಜು (27) ಬಂಧಿತ. ಜ.25 ರಂದು ಬದ್ವಾಲಿ ಚೌಕಿ ಪ್ರದೇಶದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ʼಪಠಾಣ್ʼ ಸಿನಿಮಾದಲ್ಲಿ ʼಬೇಷರಂ ರಂಗ್ʼ ಹಾಡು ಹಾಗೂ ಕೇಸರಿ ಬಿಕಿನಿ ಧರಿಸಿದ್ದ ದೀಪಿಕಾ ಪಡುಕೋಣೆ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಸಿನಿಮಾ ರಿಲೀಸ್ ವಿರೋಧಿಸಿ ಪ್ರಚೋದನಕಾರಿ ಭಾಷಣ ಹಾಗೂ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದರು. ಇದಲ್ಲದೇ ಪ್ರತಿಭಟನಾಕಾರರು ಪ್ರವಾದಿ ಮೊಹಮ್ಮದ್ ವಿರುದ್ಧಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದರು ಎಂದು ಕೆಲ ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆಯನ್ನೂ ಮಾಡಿದ್ದರು.
ಜಿಲ್ಲಾಧಿಕಾರಿ ಇಳಯ್ಯ ರಾಜಾ ಟಿ ಅವರ ಆದೇಶದಂತೆ ಜನವರಿ 25 ರಂದು ಬದ್ವಾಲಿ ಚೌಕಿ ಪ್ರದೇಶದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಸದರ್ ಬಜಾರ್ ಪೊಲೀಸ್ ಠಾಣೆಯ ಸುನೀಲ್ ಶ್ರೀವಾಸ್ತವ ತಿಳಿಸಿದ್ದಾರೆ.
ಪ್ರಚೋದನಕಾರಿ ಭಾಷಣ ಮತ್ತು ಆಕ್ಷೇಪಾರ್ಹ ಘೋಷಣೆ ಕೂಗಿದ ಆರೋಪದ ಮೇಲೆ ಈಗಾಗಲೇ 6 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.