ಶ್ರೀರಂಗಪಟ್ಟಣ : ಮಿನಿ ವಿಧಾನ ಸೌಧದಲ್ಲಿರುವ ಸರ್ವೆ ಇಲಾಖೆಯಲ್ಲಿ ಅಧಿಕಾರಿಗಳ ಗೈರು ಹಾಗೂ ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಸೋಮವಾರ ಜಮಾಯಿಸಿದ ರೈತ
ಸಂಘದ ಕಾರ್ಯಕರ್ತರು ಸರ್ವೆ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದರು.
ಭೂಮಾಪನ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ರೈತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಕೆ.ಎಸ್ ನಂಜುಂಡೇಗೌಡ , ಸರ್ವೆ ಕಚೇರಿಯಲ್ಲಿ ಅಧಿಕಾರಿಗಳು ಗೈರು ಹಾಜರಿ ಎದ್ದು ಕಾಣುತ್ತಿದೆ, ರೈತರು ಎರಡು ಮೂರು ವರ್ಷಗಳಿಂದ ಒಂದು ಸಣ್ಣ ಕೆಲಸಕ್ಕೆ ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಶ್ರೀಮಂತರ ಕೆಲಸವನ್ನು ಅಧಿಕಾರಿಗಳು ಅವರ ಮನೆಗೆ ಹೋಗಿ ಕೆಲಸ ಮಾಡುತ್ತಾರೆ ಆದರೆ ಬಡ ರೈತರ ಕೆಲಸವನ್ನು ಅಧಿಕಾರಿಗಳು ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ, ಕಚೇರಿಗೆ ಬಾರದ ಅಧಿಕಾರಿಗಳು ಕೆಲಸದ ಸಮಯದಲ್ಲಿ ಮದುವೆ, ಗೃಹಪ್ರವೇಶ ಎಂದು ಸಮಾರಂಭಗಳಿಗೆ ಹೋಗಿ ತಾಲೂಕಿನ ದೂರದ ಊರಿನಿಂದ ಬರುವ ರೈತರು, ಬಡವರು ವೃದ್ಧರು ಅಂಗಕಲರನ್ನು ಕೆಲಸ ಮಾಡದೆ ಅಲೆದಾಡಿಸುತ್ತಿದ್ದಾರೆ, ಅಧಿಕಾರಿಗಳು ಕೆಲಸಕ್ಕೆ ಬಂದ ಮೇಲೆ ಹಾಜರಾತಿಗೆ ಸಹಿ ಹಾಕಿದ ನಂತರ ಕಚೇರಿ ಕೆಲಸಕ್ಕೆ ಕಚೇರಿಯಿಂದ ಹೊರಗೆ ಹೋದರೆ ಅವರು ಮೂಮೆಂಟ್ ರಿಜಿಸ್ಟಾರ್ ನಲ್ಲಿ ಬರೆದು ಪ್ರತಿನಿತ್ಯ ಹೊರಗೆ ಹೋಗ ಬೇಕು ಆದರೆ ಈ ಸರ್ಕಾರಿ ನಿಯಮವನ್ನು ಇಲ್ಲಿ ಅಧಿಕಾರಿಗಳು ಪಾಲಿಸದೆ ಲೋಪ ಎಸಗಿದ್ದಾರೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ : ರಾಗಿ ಖರೀದಿ ಟೋಕನ್ ನೀಡುವಲ್ಲಿ ತಾರತಮ್ಯ : ಆಕ್ರೋಶಿತ ರೈತರಿಂದ ಹೆದ್ದಾರಿ ತಡೆ
ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಶ್ವೇತಾ ಎನ್ .ರವೀಂದ್ರ ಅವರನ್ನು ಭೇಟಿ ಮಾಡಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರು ಕೂರಲು ಖುರ್ಚಿ ವ್ಯವಸ್ಥೆ ಕಲ್ಪಿಸ ಬೇಕು ಅವರಿಗೆ ಶೌಚಾಲಯ ವ್ಯವಸ್ಥೆ ನೀಡ ಬೇಕು ಹಾಗೂ ನಿಮ್ಮ ಕೆಳ ಮಟ್ಟದ ಅಧಿಕಾರಿಗಳು ಒಂದು ಪೌತಿ ಖಾತೆ ಮಾಡಲು 50 ರಿಂದ 1 ಲಕ್ಷ ರೂ ಹಣವನ್ನು ಲಂಚವಾಗಿ ಬೇಡಿಕೆ ಇಡುತ್ತಿರುವುದಾಗಿ ರೈತರಿಂದ ದೂರು ಕೇಳಿ ಬಂದಿದೆ ಆದ್ದರಿಂದ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಬಿಜೆಪಿ ಹಾಗೂ ರೈತ ಮುಖಂಡರು ಭಾಗವಹಿಸಿದರು.