ಶ್ರೀರಂಗಪಟ್ಟಣ: ಲೋಕಸಭಾ ಚುನಾವಣೆ ಕಾವು ಇಳಿಯುವ ಮುನ್ನವೇ ಪುರಸಭೆಗೆ ಚುನಾವಣೆ ಪ್ರಕಟಗೊಂಡಿಚದ್ದು ರಾಜಕೀಯ ಪಕ್ಷಗಳ ಮುಖಂಡರಿಗೆ ಮತ್ತೂಂದು ಸವಾಲು ಎದುರಾಗಿ ರಾಜಕೀಯ ಚುಟುವಟಿಕೆಗಳು ಬಿರುಸು ಗೊಂಡಿದೆೆ. ರಾಜ್ಯದಲ್ಲಿ ದೋಸ್ತಿ ಸರ್ಕಾರ ನಡೆಸುತ್ತಿರುವವರು ಲೋಕಲ್ ಚುನಾವಣೆಯಲ್ಲಿ ರಿಯಲ್ ಫೈಟ್‌ಗೆ ಸಜ್ಜಾಗುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಮೇ 29ಕ್ಕೆ ನಡೆಯಲಿರುವ ಚುನಾವಣೆಗೆ ವಿವಿಧ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿತರು ಈಗಾಗಲೇ ನಾಯಕರ ಬೆನ್ನತ್ತಿ ಪಕ್ಷದ ಟಿಕೆಟ್ ಪಡೆಯಲು ಪೈಪೋಟಿಗಿಳಿದಿದ್ದಾರೆ.
ಈಗಾಗಲೇ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಸಭೆಗಳೂ ನಡೆದಿವೆ. ಆಕಾಂಕ್ಷಿರಿಂದ ಅರ್ಜಿ ಸ್ವೀಕರಿಸಿ ಗೆಲ್ಲುವ ಕುದುರೆಗಳ ಪಟ್ಟಿಯೂ ತಯಾರಿಸಲಾಗಿದೆ. ಮಂಗಳವಾರ ಜೆಡಿಎಸ್ ಆಕಾಂಕ್ಷಿತರ ಸಭೆ ನಡೆಯಲಿದ್ದು, ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ತಂತ್ರ ಹೆಣೆಯಲಾಗಿದೆ ಎನ್ನಲಾಗುತ್ತಿದೆ.
ಗೆಲುವಿನ ತಂತ್ರ: ಎಲ್ಲಾ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವಿಗೆ ಅವರವರ ಮಟ್ಟದಲ್ಲಿ ತಂತ್ರ ರೂಪಿಸಿಕೊಳ್ಳುತ್ತಿದ್ದಾರೆ. ಆಕಾಂಕ್ಷಿಗಳ ನಡುವೆ ವಿವಿಧ ಪಕ್ಷಗಳ ಬಿ ಫಾರಂಗೆ ವಾರ್ಡ್‌ಗಳಲ್ಲಿ ಪೈಪೋಟಿ ನಡೆಯುತ್ತಿದೆ. ಈ ಭಾರಿಯ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಬಿ’ ಗೆ ಮೀಸಲಾಗಿವೆ. ಈ ಬಾರಿಯ ಸ್ಥಳೀಯ ಪುರಸಭೆ ಚುನಾವಣೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ರಿಯಲಿ ಫೈಟ್ ನಡೆಯಲಿದೆ.
ಆಡಳಿತಕ್ಕಾಗಿ ಹೋರಾಟ: ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಆಕಾಂಕ್ಷಿಗಳ ಅರ್ಜಿ ಸ್ವೀಕರಿಸಿ 23 ವಾರ್ಡ್‌ಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಮಾಡಿ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಬಿಜೆಪಿಯವರು ಜಿಲ್ಲಾಧ್ಯಕ್ಷ ನಾಗಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಶತಾಯ, ಗತಾಯ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂಬುದು ಮೂರೂ ಪಕ್ಷಗಳ ನಾಯಕರಿಗೆ ಸವಾಲಾಗಿದೆ.
ಮೇ 29ಕ್ಕೆ ಚುನಾವಣೆ ದಿನಾಂಕ ನಿಗದಿಗೊಳಿಸಿದೆ. ಮೇ9 ರಿಂದ 16ರವರೆಗೆ ಉಮೇದುವಾರಿಕೆ ಸಲ್ಲಿಕೆಯಾಗಲಿದೆ. ಮೇ 17ಕ್ಕೆ ನಾಮಪತ್ರ ಪರಿಶೀಲನೆ, ಮೇ 20ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ 29ರಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮೇ 31ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆದು ಅಂದೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.
● ಗಂಜಾಂ ಮಂಜು