ಶ್ರೀರಂಗಪಟ್ಟಣ: ಪುರಸಭೆಗೆ ಸಂಬಂಧಿಸಿದ ಯಾವುದೇ ಯಂತ್ರ ಖರೀದಿ ಹಾಗೂ ದುರಸ್ಥಿ ವೇಳೆ ಅಧ್ಯಕ್ಷರು, ಉಪಾಧ್ಯಕ್ಷರ ಗಮನಕ್ಕೆ ತಂದು ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಪುರಸಭೆ ಅಧ್ಯಕ್ಷೆ ನಿರ್ಮಲಾ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಮೆ-ಖರ್ಚು ವಿವರ ಕುರಿತು ನಡೆದ ಸಭೆಯಲ್ಲಿ ಈ ವಿಷಯ ಚರ್ಚೆಯಾಯಿತು.
ಖರ್ಚು ಮಾಡಿದ್ದಕ್ಕೆ ವಿರೋಧ: ಪುರಸಭೆ ವ್ಯಾಪ್ತಿಯ ಕಳೆದ 5 ತಿಂಗಳಲ್ಲಿ ಮೋಟಾರ್ ದುರಸ್ಥಿಗಾಗಿ 5,54,359 ರೂ. ಖರ್ಚಾಗಿರುವುದನ್ನು ಪ್ರಶ್ನಿಸಿದ ಗಂಜಾಂ ಶಿವು ಹಾಗೂ ಎಂ.ಎಲ್.ದಿನೇಶ್ ವಿರೋಧ ವ್ಯಕ್ತಪಡಿಸಿದರು.
ಸುಂಕ ವಸೂಲಿ ಅಕ್ರಮ: ನೆಲ, ವಾಣಿಜ್ಯ ಕಟ್ಟಡಗಳ ಬಾಡಿಗೆ, ಪಾರ್ಕಿಂಗ್ ಹಾಗೂ ಪಿಂಡಪ್ರಧಾನ ಶುಲ್ಕ ವಸೂಲಾತಿ ಲೆಕ್ಕದಲ್ಲಿ ಸಿಬ್ಬಂದಿ ಅಕ್ರಮವೆಸಗಿದ್ದಾರೆ ಎಂದು ಸದಸ್ಯ ಗಂಜಾಂ ಶಿವು ನೇರವಾಗಿ ಆರೋಪಿಸಿದರು. ಧ್ವನಿಗೂಡಿಸಿದ ಎಸ್.ನಂದೀಶ್, ನರಸಿಂಹೇಗೌಡ ಕೆಲವೆಡೆ ನಕಲಿ ಬಿಲ್ ಸೃಷ್ಟಿಸಿ ಹಣ ವಸೂಲಿ ಮಾಡಲಾಗುತ್ತಿದೆ. ಜತೆಗೆ ಬಿಲ್ ವಸೂಲಾತಿಗೆ ನೇಮಿಸಿರುವ ಸಿಬ್ಬಂದಿ ಅವರ ಅನುಕೂಲಕ್ಕೆ ತಕ್ಕಂತೆ ಮತ್ತೂಬ್ಬರನ್ನು ನೇಮಿಸಿಕೊಂಡು ಪುರಸಭೆ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ದೂರಿದರು.
ಈ ವೇಳೆ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಉಪಾಧ್ಯಕ್ಷ ಎಸ್ .ಪ್ರಕಾಶ್ ಸಭೆಯನ್ನು ಶಾಂತಗೊಳಿಸಿ, ಬಿಲ್ ನೀಡಲಾಗುವ ಯಂತ್ರದಲ್ಲಿ ಒಂದು ವರ್ಷದ ಲೆಕ್ಕ ಸಿಗಲಿದೆ. ಅಧಿಕಾರಿಗಳೇಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರಲ್ಲದೇ ಕೂಡಲೇ ಸಿಬ್ಬಂದಿಯನ್ನು ಬದಲಿಸಿ ಪಾರದರ್ಶಕ ಶುಲ್ಕ ವಸೂಲಾತಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ವಕೀಲರ ಬದಲಾವಣೆಗೆ ಪರ-ವಿರೋಧ: ಪುರಸಭೆಗೆ ನಿಯೋಜನೆಗೊಂಡಿದ್ದ ವಕೀಲರು ಮರಣ ಹೊಂದಿರುವ ಹಿನ್ನೆಲೆಯಲ್ಲಿ ಬದಲಿ ವಕೀಲರ ನೇಮಕಕ್ಕೆ ಮೂವರು ವಕೀಲರ ಹೆಸರನ್ನು ಉಪಾಧ್ಯಕ್ಷ ಎಸ್.ಪ್ರಕಾಶ್ ಸೂಚಿಸಿದ ವೇಳೆ ಎಸ್ .ನಂದೀಶ್ ಆಕ್ಷೇಪ ವ್ಯಕ್ತಪಡಿಸಿ, ವಕೀಲರ ಬದಲಾವಣೆ ಕಾನೂನಿನ ಪ್ರಕಾರವಾಗಿಯೇಆಗಬೇಕು. ಪತ್ರಿಕಾ ಪ್ರಕಟಣೆ ಹಾಗೂ ವಕೀಲರಸಂಘಕ್ಕೆ ಪ್ರಕಟಣೆ ಹೊರಡಿಸಿ ಸರ್ವ ಸದಸ್ಯರು ಅಭಿಪ್ರಾಯದ ಮೇರೆಗೆ ನುರಿತ ವಕೀಲರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದರು. ಇವರಿಗೆಎಂ.ನಂದೀಶ್, ಎಂ.ಎಲ್.ದಿನೇಶ್ ಧ್ವನಿಗೂಡಿಸಿ ಕಾನೂನಿನ ಚೌಕಟ್ಟಿನಲ್ಲಿ ವಕೀಲರನ್ನು ನೇಮಿಸಲು ಸಲಹೆ ನೀಡಿದರು.
ಒತ್ತಾಯ: ಅಂಗನವಾಡಿ ವಿಚಾರದಲ್ಲಿ 23 ವಾರ್ಡ್ ಮಕ್ಕಳಿಗೆ ಆಯಾ ವಾರ್ಡ್‌ಗೆ ಸಂಬಂಧಿಸಿದಂತೆಅಂಗನವಾಡಿ ನಿರ್ಮಿಸಿ ಅನುಕೂಲ ಮಾಡಿಕೊಡಲು 14ನೇ ವಾರ್ಡ್‌ನ ಸದಸ್ಯೆ ವಸಂತಕುಮಾರಿ ಒತ್ತಾಯಿಸಿದರು. ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಸದಸ್ಯರಾದ ಕೃಷ್ಣಪ್ಪ, ಶ್ರೀನಿವಾಸ್, ನಿಂಗರಾಜು, ಚೈತ್ರಾ, ಪೂರ್ಣಿಮಾ, ರಾಧಾ ಶ್ರೀಕಂಠು ಸರ್ವ ಸದಸ್ಯರು, ಅಧಿಕಾರಿಗಳಿದ್ದರು.