Advertisement

ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಶ್ರೀರಾಮಲು ಪತ್ರ

08:38 PM Feb 24, 2022 | Team Udayavani |

ಬಳ್ಳಾರಿ: ರಷ್ಯಾ ಸಮರ ಸಾರಿರುವ ಉಕ್ರೇನ್ ದೇಶದಲ್ಲಿ ಬಳ್ಳಾರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 10 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರ ರಕ್ಷಣೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಗುರುವಾರ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ರಷ್ಯಾ-ಉಕ್ರೇನ್ ದೇಶಗಳ ನಡುವೆ ಯುದ್ಧ ಆರಂಭವಾಗಿದ್ದು, ವಿಮಾನಯಾನ ಸೇರಿ ಎಲ್ಲ ರೀತಿಯ ಸಾರಿಗೆ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಬೆಳಗಾವಿ, ಮೈಸೂರು ಜಿಲ್ಲೆಗಳ ಹತ್ತು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಭಾರತಕ್ಕೆ ವಾಪಸ್ಸಾಗಲು ಆಗದೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಮೂಲದ ವಿದ್ಯಾರ್ಥಿಗಳ ಪೋಷಕರು ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಭಾರತಕ್ಕೆ ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದರಿಂದ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿರುವ ಬಳ್ಳಾರಿಯ ವಿದ್ಯಾರ್ಥಿಗಳಾದ ತೈಯಬ್ ಕೌಸರ್,  ಸಬಾ ಕೌಸರ್, ತನಿಶಾ ರಹೀಂ. ಮುಲ್ಲಾ ಮೊಹಮ್ಮದ್ ಶಕೀಬುದ್ದಿನ್, ಬಳ್ಳಾರಿ ಸೊಲೊಮನ್ ಹೃಷಿಕೇಶ್ ಅವರಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿ ಧೈರ್ಯ ತುಂಬಿದ್ದಾರೆ. ನಿಮಗೇನು ಆಗಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ದೇವರ ಕೃಪೆ ನಿಮ್ಮ ಮೇಲಿರಲಿದೆ. ಯಾವುದಕ್ಕೂ ನೀವು ಅಧೈರ್ಯ ಪಡದೆ, ಆತಂಕಕ್ಕೆ ಒಳಗಾಗದೆ ಧೈರ್ಯವಾಗಿರಿ. ನಿಮ್ಮನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಧೈರ್ಯ ತುಂಬಿದ್ದಾರೆ. ಬಳಿಕ ಪತ್ರವನ್ನೂ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next