Advertisement

ಹಿಜಾಬ್‌ ನಿಷೇಧಕ್ಕಾಗಿ ಶ್ರೀರಾಮಸೇನೆ ಪ್ರತಿಭಟನೆ

10:04 AM Feb 08, 2022 | Team Udayavani |

ಕಲಬುರಗಿ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿಷೇಧಿಸಬೇಕು ಮತ್ತು ಏಕ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆಯ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

Advertisement

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಶ್ರೀರಾಮಸೇನೆಯ ವಿದ್ಯಾರ್ಥಿ ಘಟಕದ ಕಾರ್ಯಕರ್ತರು, ತಮ್ಮ ಜಾತಿ, ಧರ್ಮವನ್ನು ತೋರಿಸಲು ಶಾಲಾ-ಕಾಲೇಜುಗಳಿಗೆ ಹಿಜಾಬ್‌ ಮತ್ತು ಬುರ್ಕಾ ಧರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ನಿರ್ಬಂಧಿಸಬೇಕೆಂದು ಆಗ್ರಹಿಸಿದರು.

ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನ ಪ್ರಕಾರ ಭಾರತ ಭಾವೈಕ್ಯತೆ ರಾಷ್ಟ್ರ. ಶಾಲಾ-ಕಾಲೇಜುಗಳಲ್ಲಿ ಜಾತಿ-ಧರ್ಮ, ಶ್ರೀಮಂತ-ಬಡವ ಎಂಬುವುದು ತೋರದೆ ನಾವೆಲ್ಲರೂ ಒಂದೇ, ಭಾರತೀಯರು. ಇದಕ್ಕಾಗಿ ಏಕರೂಪ ಸಮವಸ್ತ್ರವನ್ನು ರೂಪಿಸಲಾಗಿದೆ. ಆದರೆ, ತಮ್ಮ ಧರ್ಮ ಎತ್ತಿ ತೋರಿಸಲು ಹಿಜಾಬ್‌, ಬುರ್ಕಾ ಧರಿಸಿ ವಿದ್ಯಾ ಮಂದಿರಗಳಿಗೆ ಬರುತ್ತಿರುವುದು ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ ಸಂಘಟನೆಯ ರಾಜ್ಯಾಧ್ಯಕ್ಷ, ಆಂದೋಲಾದ ಸಿದ್ದಲಿಂಗ ಸ್ವಾಮೀಜಿ, ರಾಜ್ಯ ಸರ್ಕಾರ ಈಗಾಗಲೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿದೆ. ಸರ್ಕಾರದ ಆದೇಶದಂತೆ ಸಮವಸ್ತ್ರ ಧರಿಸಿ ಶಿಕ್ಷಣ ನೀತಿ, ನಿಯಮಕ್ಕೆ ಗೌರವ ಕೊಡಬೇಕು. ಬರಲು ಸರ್ಕಾರದ ಆದೇಶದ ಉಲ್ಲಂಘಿಸಿ ಬರುವವರನ್ನು ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಯಾವುದೇ ಮುಲಾಜಿಲ್ಲದೇ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಬೇಕೆಂದು ಆಗ್ರಹಿಸಿದರು.

ಶಾಲಾ-ಕಾಲೇಜುಗಳಿಗೆ ಹಿಜಾಬ್‌, ಬುರ್ಕಾ ಧರಿಸಿಕೊಂಡು ಬರುವುದನ್ನು ತಕ್ಷಣವೇ ನಿಲ್ಲಿಸಬೇಕು. ಇದನ್ನು ಅಲ್ಲಿಯವರೆಗೂ ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೆ ಕೇಸರಿ ಶಾಲು, ಪಂಚೆ ಸಮೇತ ಹಿಂದೂ ಸಂಪ್ರದಾಯದಂತೆ ಯುವಕರು ಬರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

Advertisement

ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಮಹೇಶ ಕೆಂಭಾವಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಅಷ್ಟಗಿ, ಕಾರ್ಯ ದರ್ಶಿ ಈಶ್ವರ ಹಿಪ್ಪರಗಿ, ಉಪಾಧ್ಯಕ್ಷ ರಾಕೇಶ ಜಮಾದಾರ, ಜಿಲ್ಲಾ ಗ್ರಾಮಾಂತರ ವಲಯದ ಅಧ್ಯಕ್ಷ ಅರುಣಕುಮಾರ ಸುಲ್ತಾನಪುರ, ಉತ್ತರ ವಲಯ ಅಧ್ಯಕ್ಷ ಸಂತೋಷ ಹಿರೇಮಠ, ಕಾರ್ಯಕರ್ತರಾದ ವಿಕಾಸ ಕುಮಸಿ, ಗುರು ಜವಳಿ, ಅಭಿ ಬಿಲಗುಂದಿ, ಸಿದ್ಧಾರ್ಥ್ ಚಿಕ್ಕಮಠ, ನಾಗೇಶ ಅಡೆ, ಶರಣಕುಮಾರ ಪಾಟೀಲ, ಅಂಕುಶ ಬೋಸ್ಲೆ, ಮಹಾಲಿಂಗ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು ಮಾತ್ರ ಬರಬೇಕೆಂದು ಸರ್ಕಾರದ ಆದೇಶ. ಇದನ್ನೂ ಮೀರಿ ಶಾಲಾ-ಕಾಲೇಜುಗಳಿಗೆ ಹಿಜಾಬ್‌, ಬುರ್ಕಾ ಧರಿಸಿಕೊಂಡೇ ಬರುವುದಾದರೆ ಪಾಕಿಸ್ತಾನಕ್ಕೋ, ತಾಲಿಬಾನ್‌ಗೋ ಹೋಗಿ ಶಿಕ್ಷಣ ಕಲಿಯಲಿ. -ಸಿದ್ದಲಿಂಗ ಸ್ವಾಮೀಜಿ, ರಾಜ್ಯಾಧ್ಯಕ್ಷ, ಶ್ರೀರಾಮಸೇನೆ

Advertisement

Udayavani is now on Telegram. Click here to join our channel and stay updated with the latest news.

Next