Advertisement

ಆದರ್ಶಗಳ ಅನುರಣನೆಗೆ ಸಾಕ್ಷಿಯಾದ ಶ್ರೀರಾಮ ಪರಂಧಾಮ

08:54 PM Jul 04, 2019 | mahesh |

ಪುರಂದರ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ನೇತೃತ್ವದಲ್ಲಿ ಏರ್ಪಡಿಸಿದ “ಶ್ರೀರಾಮ ಪರಂಧಾಮ’ ತಾಳಮದ್ದಳೆ ಮಹೋನ್ನತ ಕಾರ್ಯಕ್ರಮವಾಗಿ ಮೂಡಿಬಂತು.ಭಾಗವತಿಕೆಯಲ್ಲಿ ಕಾವ್ಯಶ್ರೀ ಆಜೇರು ಪ್ರಥಮಾರ್ಧದಲ್ಲಿ ಸುಮಧುರ ಕಂಠದಿಂದ ರಂಜಿಸಿದರು. “ಕೇಳಯ್ಯ ರಾಮ ಕೇಳಯ್ಯ,”ಸ್ವಾಮಿ ನಿಮ್ಮ ಮಾತ,ನಡೆಸುವೆ ಪ್ರೇಮದಿ ವಿಖ್ಯಾತ’ ಹಾಡುಗಳಲ್ಲಿ ಗಮನ ಸೆಳೆದರು.ಅನಂತರ ಉಭಯತಿಟ್ಟುಗಳ ಗಾನ ಸರದಾರ ಸತ್ಯನಾರಾಯಣ ಪುಣಿಂಚತ್ತಾಯರು ಅಮೋಘ ಭಾಗವತಿಕೆ ಪ್ರದರ್ಶಿಸಿದರು. “ಎಲೆ ಕಾಲ ಪುರುಷ ಕೇಳು, ನೀತಿ ತಪ್ಪಿ ನಡೆದೆ ಲಕ್ಷ್ಮಣ, ಅಣ್ಣ ಲಾಲಿಸೆನ್ನ ಮಾತನು, ತಮ್ಮ ಕೇಳು ಧರ್ಮ ಸಂಕಟವನು, ಸೋಜಿಗವಾಯ್ತು ಕೇಳು ಅಣ್ಣ, ಚೆಲುವ ಲಕ್ಷ್ಮಣ ಕೇಳು, ಲಲನೆ ಜಾನಕಿ ಮೊದಲೆ ಪೋದಳು’ ಮೊದಲಾದ ಪದಗಳಲ್ಲಿ ಶ್ರೋತೃಗಳಲಿ ಭಾವತೀವ್ರತೆ ಮೂಡಿಸಬಲ್ಲ ಸುಶ್ರಾವ್ಯತೆ ಮೆರೆದರು.ಮದ್ದಳೆಯಲ್ಲಿ ಶ್ರೀಧರ ಪಡ್ರೆ,ಚೆಂಡೆಯಲ್ಲಿ ದೇಲಂತಬೆಟ್ಟು ಸುಬ್ರಮಣ್ಯ ಭಟ್‌ ಕೈಚಳಕ ತೋರ್ಪಡಿಸಿದರು.

Advertisement

ಶ್ರೀರಾಮನಾಗಿ ಮೇಲುಕೋಟೆ ಉಮಾಕಾಂತ ಭಟ್‌ ಅವರ ವಾಗ್ವೆ„ಖರಿ ಅಪ್ರತಿಮ ವಾದುದು.ಪೂರ್ತಿ ರಾಮಾಯಣವನ್ನೆ ಕೂಲಂಕ‌ಷ ವಾಗಿ ವಿಮರ್ಶಿಸುತ್ತ ರಾಮನ ನಿಲುವನ್ನು ವೀಕ್ಷಕರಿಗೆ ಕಟ್ಟಿಕೊಟ್ಟ ಅವರ ಶೈಲಿ ಅನನ್ಯ.ಕಾಲಪುರುಷನೊಡನೆ ಜಿಜ್ಞಾಸೆ, ಮೂಲ ಅರಿತೂ ನೆಲೆಗೊಂಡ ಪುರದ ಸಂಸ್ಕಾರ ತಂದಿತ್ತ ಸಂದಿಗ್ಧತೆ, ಲಕ್ಷ್ಮಣನ ಜೊತೆ ಸಲುಗೆ,ಆದೇಶ,ಆಜ್ಞೆ,ರಹಸ್ಯ ಕಾಪಾಡುವ ಬಿಚ್ಚಿಡುವ ತುಮುಲ,ದೂರ್ವಾಸರನ್ನು ಮಾತಿನಲ್ಲಿ ಸಂತೈಸುವ ಪರಿ,ಅನುಜಗೆ ದೇಹಾಂತ ಶಿಕ್ಷೆ ರಾಜನಾಗಿ ನೀಡುವ ರೀತಿ, ಮನದೊಳಗಿನ ವಾತ್ಸಲ್ಯ,ಲೋಕಕ್ಕೆ ರಾಮ ದೀವಿಗೆಯಾದರೆ ಅವಗೆ ಲಕ್ಷ್ಮಣ ತೋರಿದ ದಾರಿಯ ವಿವರಣೆ, ರಾಮಾವತಾರ ಮುಗಿಸುವ ಮಾರ್ಮಿಕ ನೀತಿ ಮಂಡಿಸಿ ಕಣ್ಣಂಚಿನಲ್ಲಿ ನೀರು ತರಿಸಿದರು.ಲಾಲಿ ಲೀಲೆಯಾಗೋ ಬಗೆ,ಲಕ್ಷ್ಮಣ ರಾಮನಿಗೇ ಲಕ್ಷಣ,ಸೀತಾರಾಮ ರಾಜಾರಾಮ ಆಗುವ ರೀತಿ, ರಾಮಯೋಗ ವಿರಾಮಗೊಳಿಸಿ ಸದಾರಾಮದ ಮಹಾಯೋಗವು ಆದಿಶೇಷನ ವಿಶೇಷವೆಂದೆನಿಸಿದ ವಿಚಾರಗಳನ್ನು ಪುರಾಣ ಪರಂಪರೆಯ ಉಣಬಡಿಸಿದರು.

ಲಕ್ಷ್ಮಣನಾಗಿ ಉಜಿರೆ ಅಶೋಕ ಭಟ್‌ರ ನಿರ್ವಹಣೆಯು ಅಪೂರ್ವವಾಗಿತ್ತು.ರಾಮನ ಬೆಂಗಾವಲಾಗಿದ್ದು ಕಷ್ಟ ಸುಖಗಳೆರಡಲ್ಲೂ ಸಮಾನ ಪಾಲುದಾರನಾಗಿದ್ದ ಜೀವನಯಾನದ ಮಜಲನ್ನು ಪರಿಚಯಿಸಿದರು. ಪ್ರಭುವಾಜ್ಞೆಗೆ ವಿಧೇಯನಾಗಿ ಬಾಗಿಲ ಕಾಯುವಾಗ ಬಂದ ದೂರ್ವಾಸರೊಂದಿಗೆ ವಿನೋದ ಪ್ರಜ್ಞೆಯ ಹಿತಮಿತ ಮಾತುಗಾರಿಕೆ ಆಪ್ಯಾಯಮಾನವಾಗಿತ್ತು.ಯಜ್ಞೆಶ್ವರನ ಪಾಯಸ ದಾನದಿಂ ತೊಡಗಿ ವನವಾಸದ ವ್ರತ,ಸೀತಾ ಅಗ್ನಿಪರೀಕ್ಷೆ,ಪರಿತ್ಯಾಗ, ದೂರ್ವಾಸರ ಶಾಪಾಗ್ನಿ ವಂಶನಾಶಕ್ಕೆಕಾರಣವಾಗುವ ಬದಲು ತನ್ನ ತಲೆದಂಡವೇ ಸೂಕ್ತ ಎಂದು ದೇಹಾಂತ ಶಿಕ್ಷೆಯನ್ನು ಭಿಕ್ಷಾಯಾಚನೆಯಾಗಿ ರಾಮನಲ್ಲಿ ಬೇಡುವ ವಿನಮ್ರತೆಯ ಸನ್ನಿವೇಶಗಳಲ್ಲಿ ತುಂಬಿನಿಂತ ಭಾತೃತ್ವದ ಅನಾವರಣವು ಹಾಗೂ ಸದಾ ಜಾಗೃತವಾಗಿರೋ ಕರ್ತವ್ಯಪರತೆಯ ಸ್ವಾಮಿನಿಷ್ಠೆಯ ಪರಾಕಾಷ್ಠೆಯು ನಿರೂಪಿಸಲ್ಪಟ್ಟಿರೋ ದಿವ್ಯತೆಯು ಅಶೋಕ ಭಟ್‌ರಿಂದ ನಿರ್ವಹಿಸಲ್ಲಟ್ಟ ರೀತಿ ಅನುಪಮ.

ಕಾಲಪುರುಷನಾಗಿ ವಿಟ್ಲ ಶಂಭುಶರ್ಮರು “ರಾಮಾ ಸಾಕೇತಕೆ ನೀನು ಸಾಕೆ’ ಎಂದು ತಿಳಿಹೇಳುತ್ತ ಭೂಮಿಜೆಯು ವೈಕುಂಠದಲಿ ನಿನ್ನ ನಿರೀಕ್ಷೆಯಲಿರುವುದನ್ನು ಲವಲವಿಕೆಯಲ್ಲಿ ಮಂಡಿಸಿದರು.ದೂರ್ವಾಸನಾಗಿ ರಾಧಾಕೃಷ್ಣ ಕಲ್ಚಾರ್‌, ಲಕ್ಷ್ಮಣನಲ್ಲಿ ಕೋಪಾವಿಷ್ಠರಾಗಿ ನಡೆಸುವ ವಾದ – ಪ್ರತಿವಾದ ಮನಸೆಳೆಯಿತು.ರಾಮನ ಭೇಟಿ ನಂತರ ಒಂದು ಊಟ ಮಾತ್ರ ಬಯಸುವ ಕಾರಣದ ವಿವರಣೆ ಅತ್ಯಾಕರ್ಷಕವಾಗಿತ್ತು.

ಅಗೆದಷ್ಟು ಮೊಗೆಮೊಗೆದು ಕೊಡುವ ಮಾನವ ಸಹಜ ಸಾಧನೆ-ದೌರ್ಬಲ್ಯ,ರಾಮನೆಂಬ ದೈವೀಕತೆ ,ಎಲ್ಲಕಾಲಕ್ಕೂ ಸಲ್ಲುವ ಆದರ್ಶಗಳ ಅನುರಣನೆಗೆ ತಾಳಮದ್ದಳೆ ಯಶಸ್ವೀ ಸಾಕ್ಷಿಯಾಯಿತು.

Advertisement

ಶ್ರೀಧರ ಭಟ್‌ ಬೀಡುಬೈಲ್

Advertisement

Udayavani is now on Telegram. Click here to join our channel and stay updated with the latest news.

Next