ಬದಿಯಡ್ಕ: ರಾಮಚಂದ್ರಾಪುರ ಮಠದ ಅಂಗ ಸಂಸ್ಥೆಗಳಲ್ಲಿ ಒಂದಾದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ಶ್ರೀರಾಮ ಜನ್ಮೋತ್ಸವವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ರೆಲ್ಲರೂ ಬೊಗಸೆ ತುಂಬಾ ಪುಷ್ಪಗಳನ್ನು ಹಿಡಿದು ರಾಮತಾರಕ ಮಂತ್ರ ಜಪಿಸಿ ಶ್ರೀ ರಾಮನಿಗೆ ಸಮರ್ಪಿಸಿದರು.
ಅಧ್ಯಾಪಿಕೆ ರಶ್ಮಿ ಪೆರ್ಮುಖ ಕಾರ್ಯಕ್ರಮದ ಔಚಿತ್ಯವನ್ನು ಸವಿವರವಾಗಿ ಬಿತ್ತರಿಸಿದರು. ಶ್ರೀ ಮಠದ ನೇತೃತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಿದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಸ್ಥಾಪನೆಯ ಉದ್ದೇಶ ಹಾಗೂ ಶಿಕ್ಷಣ ವ್ಯವಸ್ಥೆಯ ಬಗೆಗಿನ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಆಶಯವನ್ನು ಹತ್ತನೆಯ ತರಗತಿಯ ವಿದ್ಯಾರ್ಥಿ ಶ್ರೀಹರಿ ಸವಿಸ್ತಾರವಾಗಿ ವಿವರಿಸಿದನು. ಎಂಟನೆಯ ತರಗತಿಯ ಯತಿಕಾ ಶ್ರೀರಾಮ ಜನನದ ಕಥೆಯನ್ನು ಸಾಂದರ್ಭಿಕವಾಗಿ ವಿವರಿಸಿದಳು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಶ್ರೀ ರಾಮನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣದ ಅನೇಕ ಕಥಾಪಾತ್ರಗಳು ನಮ್ಮ ಜೀವನಕ್ಕೆ ಪಾಠವಾಗಿವೆ. ಸದಾ ಒಳಿತನ್ನು ಬಯಸುವ ಶ್ರೀ ರಾಮನ ಆದರ್ಶ ವ್ಯಕ್ತಿತ್ವ, ಸಹೋದರರು ಪರಸ್ಪರ ಹೇಗಿರಬೇಕು ಎಂಬುದನ್ನು ವಿವರಿಸಿದರು. ವಿದ್ಯಾರ್ಥಿಗಳು ಸಾಂಗಿಕವಾಗಿ ರಾಮನಾಮ ತಾರಕ ಮಂತ್ರ ಪಠಿಸಿ, ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.