Advertisement

ಜನಪ್ರಿಯತೆ ನಡುವೆ ಸಮಾನ ಹೋರಾಟ

06:50 AM May 10, 2018 | Team Udayavani |

ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ನಲವತ್ತು ವರ್ಷಗಳಿಂದ ಇಬ್ಬರದೇ ಹವಾ. ಇವರ ಮಧ್ಯೆ ಮತ್ತೂಬ್ಬ ರಾಜಕಾರಣಿ ಪ್ರವೇಶಿಸಲು ಸಾಧ್ಯವಾಗಿಲ್ಲ. ರಾಜಕೀಯ ಪಕ್ಷಗಳಿಗೆ ಇವರಿಬ್ಬರ ಜನಪ್ರಿಯತೆಯೇ ಆಧಾರ.
ಕೋಲಾರ ಜಿಲ್ಲೆಯ ಉತ್ತರ ದಿಕ್ಕಿಗೆ ಆಂಧ್ರಪ್ರದೇಶದ ಅಂಚಿನಲ್ಲಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ರಾಜಕಾರಣದ ಮೇಲೆ ರಾಯಲಸೀಮಾ ಪಾಳೇಗಾರಿಕೆ ಸಂಸ್ಕೃತಿಯ ದಟ್ಟ ಪ್ರಭಾವವಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್‌ ಕುಮಾರ ಹಾಗೂ ಕೋಲಾರ ಜಿಲ್ಲಾ ಜೆಡಿಎಸ್‌ ಜಿಲ್ಲಾಧ್ಯಕ್ಷರಾಗಿರುವ ಜಿ.ಕೆ.ವೆಂಕಟಶಿವಾರೆಡ್ಡಿಯವರು ಶ್ರೀನಿವಾಸಪುರ ಕ್ಷೇತ್ರದ ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ.

Advertisement

ಕ್ಷೇತ್ರದಲ್ಲಿ 1978ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ರಮೇಶ್‌ ಕುಮಾರ ಗೆಲುವಿನ ನಗೆ ಬೀರಿದ್ದರು. ನಂತರ, 1983ರಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಗೆಲುವು ಸಂಪಾದಿಸಿದ್ದರು. ಈ ಸೋಲು-ಗೆಲುವಿನ ಸರಪಳಿ ಕಳೆದ ಒಂಬತ್ತು ಚುನಾವಣೆಗಳಲ್ಲಿ ಮರುಕಳಿಸುತ್ತಲೇ ಇದೆ. ಇದೀಗ ಈ ಇಬ್ಬರೂ ಹತ್ತನೇ ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆಯ ನಂತರ 2008ರಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ತಮ್ಮ ಸರದಿಯ ಗೆಲುವನ್ನು ಸಂಪಾದಿಸಿಕೊಂಡರು. 2013ರಲ್ಲಿ ಕೆ.ಆರ್‌.ರಮೇಶ್‌ ಕುಮಾರ ಗೆಲುವಿನ ನಗೆ ಬೀರಿ ಸಚಿವರೂ ಆದರು. ಸೋಲು ಗೆಲುವಿನ ಸರಪಳಿಯಲ್ಲಿ ಈ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ವೆಂಕಟಶಿವಾರೆಡ್ಡಿ ಇದ್ದಾರೆ. ಆದರೆ, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ತಮ್ಮ ಮರು ಆಯ್ಕೆ ಖಚಿತ ಎಂಬ ಆತ್ಮವಿಶ್ವಾಸದಲ್ಲಿ ರಮೇಶ್‌ ಕುಮಾರ ಇದ್ದಾರೆ.

ನಿರ್ಣಾಯಕ ಅಂಶಗಳು:
ಒಕ್ಕಲಿಗ ರೆಡ್ಡಿ ಜನಾಂಗದ ಮತಗಳಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅತಿ ಹೆಚ್ಚು ಮತಗಳನ್ನು ಗಿಟ್ಟಿಸಿಕೊಂಡರೆ, ಪರಿಶಿಷ್ಟ ಜಾತಿ ವರ್ಗದ ಮತಗಳಲ್ಲಿ ಅತಿ ಹೆಚ್ಚು ಮತಗಳನ್ನು ಬ್ರಾಹ್ಮಣ ಸಮೂದಾಯದ ರಮೇಶ್‌ ಕುಮಾರ ಗಿಟ್ಟಿಸಿಕೊಳ್ಳುತ್ತಾರೆ. ಮುಸ್ಲಿಮರು, ಬಲಜಿಗ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಬಹುತೇಕ ಇಬ್ಬರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಬಿಗಿ ಪೈಪೋಟಿಯ ನಡುವೆ ನಡೆಯುವ ಮತ ಕದನದಲ್ಲಿ ಗೆಲುವಿನ ಅಂತರ ಕಡಿಮೆಯೇ.

ಕ್ಷೇತ್ರದಲ್ಲಿ ಮಾದರಿಯೆನಿಸುವಂತೆ ಆಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜನತೆ ಕೂಲಿ ರೂಪದಲ್ಲಿ ನನಗೆ ಮತ ಹಾಕಿ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ.
– ರಮೇಶ್‌ಕುಮಾರ್‌, ಕಾಂಗ್ರೆಸ್‌ ಅಭ್ಯರ್ಥಿ

Advertisement

ಶ್ರೀನಿವಾಸಪುರಕ್ಕೆ ಸುಳ್ಳು ಭರವಸೆಗಳನ್ನು ಕೊಟ್ಟವರ ಬಗ್ಗೆ ಕ್ಷೇತ್ರದ ಜನತೆಗೆ ಅರಿವಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್‌ ಪರವಾದ ಅಲೆ ಇದೆ. ಜನತೆ ನನ್ನನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ.
– ಜಿ.ಕೆ.ವೆಂಕಟಶಿವಾರೆಡ್ಡಿ, ಜೆಡಿಎಸ್‌ ಅಭ್ಯರ್ಥಿ

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next