ಮುಂಬಯಿ, ಜ. 20: ವಿರಾರ್‌ನ ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ಮತ್ತು ಸ್ಥಾನೀಯ ವಿವಿಧ ಟ್ರಸ್ಟ್ ಗಳ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಂಯೋಜನೆಯಲ್ಲಿ ಜ. 18ರಂದು ಸಂಜೆ ನಲಸೋಪರ ಪಶ್ಚಿಮದ ಅಲ್ಕಾಪುರಿಯ ಯಶವಂತ್ ವಿವಾ ಟೌನ್‌ಶಿಪ್ ಮೈದಾನದಲ್ಲಿ ರೂಪಿತ ಭವ್ಯ ವೇದಿಕೆಯಲ್ಲಿ ಏಳನೇ ವಾರ್ಷಿಕ ಶ್ರೀನಿವಾಸ ಮಂಗಲ ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಡೆದು ಸಮಾಪ್ತಿಗೊಂಡಿತು.
ತುಲಿಂಜ್‌ನ ವೇದಾಂತ ಟವರ್ ನಿಂದ ಆದಿಗೊಂಡ ವೈಭವೋಪೇತ ಉತ್ಸವದ ಶೋಭಾಯಾತ್ರೆಗೆ ಕಾರ್ಯಕ್ರಮದ ಪ್ರಧಾನ ಸಂಘಟಕ, ಧಾರ್ಮಿಕ ಚಿಂತಕ ಡಾ| ವಿರಾರ್ ಶಂಕರ್ ಬಿ. ಶೆಟ್ಟಿ ಅವರು ಚಾಲನೆ ನೀಡಿದರು. ಬಳಿಕ ಮಹಾರಾಷ್ಟ್ರ, ಉತ್ತರ ಮತ್ತು ದಕ್ಷಿಣ ಭಾರತೀಯ, ಕರ್ನಾಟಕ ಕರಾವಳಿಯ ತುಳುನಾಡ ಸಂಸ್ಕೃತಿ ಸಂಸ್ಕಾರಗಳ ಧಾರ್ಮಿಕ ಪರಂಪರೆ ಸಾರುವ ಭಕ್ತಗಣದ ಸಾಗರೋಪಾದಿ ಭವ್ಯ ಮೆರವಣಿಗೆಯಲ್ಲಿ ಪುಷ್ಪಾಲಂಕೃತ ಅಶ್ವಥ ರಥದಲ್ಲಿ ಶ್ರೀನಿವಾಸ ಮತ್ತು ಪದ್ಮಾವತಿ ದೇವರ ಮೂರ್ತಿಗಳೊಂದಿಗೆ ವೈಭವೋಪೇತ ಸಡಗರದಿಂದ ಮೈದಾನದಲ್ಲಿ ನಿರ್ಮಿತ ಮಹೋತ್ಸವದ ಪುಣ್ಯದಿ ಕಲ್ಯಾಣ ಮಂಟಪಕ್ಕೆ ಶ್ರೀದೇವರನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ತಿರುಪತಿ ತಿರುಮಲ ದೇವಸ್ಥಾನದ ವಿದ್ವಾನ್ ಸಿ. ಆರ್. ಆನಂದ ತೀರ್ಥಾಚಾರ್ಯ ಅವರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಕಲ್ಯಾಣೋತ್ಸವ ನೆರವೇರಿಸಲಾಯಿತು.
ಈ ಪುಣ್ಯದಿ ಧಾರ್ಮಿಕ ಕಾರ್ಯಕ್ರಮದಲ್ಲಿ ನಲಸೋಪರದ ಧಾರ್ಮಿಕ ಮುಂಜಾಳು ಜಯೇಂದ್ರ ವಿಷ್ಣು ಠಾಕೂರ್, ಓಂ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ವಿರಾರ್ ಅಧ್ಯಕ್ಷ, ವಿರಾರ್ ಶಾಸಕಹಿತೇಂದ್ರ ಠಾಕೂರ್, ನಲಸೋಪರ ಶಾಸಕ ಕ್ಷಿತಿಜ್ ಎಚ್. ಠಾಕೂರ್, ಬೋಯಿಸರ್ ಕ್ಷೇತ್ರದ ಶಾಸಕ ರಾಜೇಶ್ ಪಾಟೀಲ್, ಮಾಜಿ ಮಹಾಪೌರ ರಾಜೀವ್ ಪಾಟೀಲ್, ಮಾಜಿ ಉಪ ಮಹಾಪೌರ ಉಮೇಶ್ , ಮೋಹನ್ ವಿ. ಮುದಲಿಯರ್, ಡಾ| ವಿರಾರ್ ಶಂಕರ್ ಶೆಟ್ಟಿ ಮತ್ತಿತರ ಗಣ್ಯರಿಗೆ ಶ್ರೀ ಆನಂದ ತೀರ್ಥಾಚಾರ್ಯರು ಮಹಾ ಪ್ರಸಾದ ವಿತರಿಸಿ ಹರಸಿದರು. ವಿದ್ವಾನ್ ಪ್ರಹ್ಲಾದಾಚಾರ್ಯ ನಾಗರಹಳ್ಳಿ ಮತ್ತು ವಿದ್ವಾನ್ ಗೋಪಾಲ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಸುಪ್ರಭಾತಂ, ತೋಮಾಲ ಸೇವಾ, ಕುಂಕುಮಾರ್ಚನೆ, ವಿಷ್ಣು ಸಹಸ್ರ ನಾಮಾರ್ಚನಂ, ಶ್ರೀ ಬಾಲಾಜಿ ದೇವರಿಗೆ ಕುಂಕುಮಾರ್ಚನೆ, ಭಕ್ತಾದಿಗಳ ತುಲಭಾರ ಸೇವೆ ನೆರವೇರಿತು. ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರು ಶ್ರೀದೇವರಿಗೆ ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ರಕ್ಷೆ, ಮಹಾಗಣಪತಿ ಹೋಮ ಇತ್ಯಾದಿ ಪೂಜೆ ನೆರವೇರಿಸಿದರು.
ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ತಿರುಪತಿ ಲಡ್ಡು ವಿತರಿಸಿ ಕೊನೆಯಲ್ಲಿ ಮಹಾ ಅನ್ನಸಂತರ್ಪಣೆ ನಡೆಯಿತು. ಡಾ| ವಿರಾರ್ ಶಂಕರ್ ಬಿ. ಶೆಟ್ಟಿ ಅವರ ಪ್ರಧಾನ ನೇತೃತ್ವದಲ್ಲಿ, ಸಂಘಟಕ ಹರೀಶ್ ಶೆಟ್ಟಿ ಗುರ್ಮೆ, ಶಶಿಧರ್ ಕೆ. ಶೆಟ್ಟಿ, ಧಾರ್ಮಿಕ ಮುಂದಾಳುಗಳಾದ ಪ್ರದೀಪ್ ತೆಂಡೂಲ್ಕರ್, ಶೇಖರ್ ನಾಯಕ್, ಶ್ರೀನಿವಾಸ ನಾಯ್ಡು, ಸುನಂದಾ ಉಪಾಧ್ಯಾಯ ಮತ್ತಿತರ ಗಣ್ಯರ ಮುಂದಾಳತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಓಂ ಶ್ರೀ ಸಾಯಿಧಾಮ್ ಮಂದಿರ ಟ್ರಸ್ಟ್ ವಿರಾರ್ ಮತ್ತು ವಿವಿಧ ಟ್ರಸ್ಟ್ ಗಳ ವಿಶ್ವಸ್ತರು, ಮುಂಬಯಿ ಮತ್ತು ಉಪನಗರಗಳ, ಮೀರಾ ರೋಡ್‌ನಿಂದ ಡಹಾಣು ಪರಿಸರದ ತುಳು-ಕನ್ನಡಿಗರ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಸೇವಾಕರ್ತರಾಗಿ ಪಾಲ್ಗೊಂಡಿದ್ದರು. ಸಾವಿರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ಶಿಸ್ತುಬದ್ಧವಾಗಿ ಶ್ರೀ ವೆಂಕಟೇಶ್ವರ ಮಂಗಲೋತ್ಸವ ನಡೆಯಿತು.
ಚಿತ್ರ- ವರದಿ: ರೋನ್ಸ್ ಬಂಟ್ವಾಳ್