ನಂಜನಗೂಡು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದು, ಶ್ರೀನಿವಾಸ್ ಪ್ರಸಾದ್ ಕೂಡ ಕೇಂದ್ರ ಸಚಿವರಾಗುವ ಅವಕಾಶವಿದೆ. ಹೀಗಾಗಿ ಬಿಜೆಪಿಗೆ ಪ್ರತಿ ಮತವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಹರ್ಷವರ್ಧನ್ ಮನವಿ ಮಾಡಿದರು.
ತಾಲೂಕಿನ ಹೆಗ್ಗಡಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವ ಕತ್ವಾಡಿಪುರ, ದೇಬೂರು, ಹಂಡುನಹಳ್ಳಿ ಬ್ಯಾಳಾರು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಭೇಟಿ ನೀಡಿದ ಶಾಸಕರು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
46 ವರ್ಷ ರಾಜಕೀಯ ಅನುಭವ: ಕ್ಷೇತ್ರದಲ್ಲಿ ಸಂಸದ ಆರ್. ಧ್ರುವನಾರಾಯಣ ಅವರಿಗೆ ಸರಿ ಸಮಾನವಾಗಿ ನಿಂತು ಸೋಲಿನ ರುಚಿ ತೋರಿಸಲು ಶ್ರೀನಿವಾಸ್ ಪ್ರಸಾದ್ ಅವರಿಂದ ಮಾತ್ರ ಸಾಧ್ಯ. ಹಲವು ವರ್ಷಗಳ ಹಿಂದೆಯೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗಲೇ ಪ್ರಸಾದ್ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ನಂತರ ಲೋಕಸಭಾ ನಡೆದ ಚುನಾವಣೆಯಲ್ಲಿ ಗೆದ್ದು 25 ವರ್ಷ ಸಂಸದರಾಗಿ, 8 ವರ್ಷ ಶಾಸಕರಾಗಿದ್ದರು.
ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಜನರ ಸೇವೆ ಮಾಡಿದ್ದಾರೆ. 46 ವರ್ಷಗಳ ಸುದೀರ್ಘ ರಾಜಕೀಯ ಅನುಭವವಿರುವ ಅವರು ಮತ್ತೂಮ್ಮೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಅವರ ಅಭಿಮಾನಿಗಳು ಬೆಂಬಲಿಗರ ಒತ್ತಾಯಕ್ಕೆ ಮಣಿದು ಸ್ಪರ್ಧಿಸುತ್ತಿದ್ದಾರೆ. ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕೋರಿದರು.
ಚುನಾವಣೆ ಬಳಿಕ ಸರ್ಕಾರ ಪತನ: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಪತನವಾಗಲಿದೆ. ಮಾಜಿ ಮುಖ್ಯಮಂತ್ರಿ ಒಲ್ಲದ ಮನಸ್ಸಿನಿಂದ ಅಪ್ಪ ಮಕ್ಕಳ ಜೊತೆ ಕೈಜೋಡಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 20-22 ಸ್ಥಾನವನ್ನು ಗೆಲ್ಲಲಿದ್ದು, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಎಂ,ಕೆಂಡಗಣ್ಣಪ್ಪ, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ, ಜಿಪಂ ಸದಸ್ಯ ಎಚ್.ಎಸ್.ದಯಾನಂದಮೂರ್ತಿ, ವಳಗೆರೆ ಪುಟ್ಟಸ್ವಾಮಿ, ಕಪ್ಪುಸೋಗೆ ಶಿವರುದ್ರ, ಹಂಡುನಹಳ್ಳಿ ರಾಜು, ಪರಶಿವಮೂರ್ತಿ, ಜಗದೀಶ್, ತಾಪಂ ಸದಸ್ಯೆ ದೊಡ್ಡೀರಮ್ಮ, ಶಿರಮಳ್ಳಿ ಮಹದೇವಸ್ವಾಮಿ, ಕಾಂತರಾಜು, ವೆಂಕಟೇಶ್, ಶಿವಶಂಕರ್, ಯುವ ಮೋರ್ಚಾ ಉಪಾಧ್ಯಕ್ಷ ರವಿಪ್ರಸಾದ್, ದೊಡ್ಡರಂಗಶೆಟ್ಟಿ, ಜವರಶೆಟ್ಟಿ ಇತರರಿದ್ದರು.