ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಕ್ಷ ತೊರೆದಿರುವ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದು, ಮುಂಬರುವ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುವುದು ನಿಶ್ಚಿತವಾಗಿದೆ.
ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪ್ರಸಾದ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.
ಶ್ರೀನಿವಾಸ ಪ್ರಸಾದ್ ಸೇರ್ಪಡೆಯಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಸಮರ್ಥ ದಲಿತ ನಾಯಕರ ಕೊರತೆ ನೀಗಿಸಬಹುದು ಎಂಬ ನಿರೀಕ್ಷೆಯಿದೆ. ಮೇಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ರಾಜಕೀಯ ಪೆಟ್ಟು ನೀಡಲು ಸುಲಭವಾದೀತು ಎಂಬ ಎಣಿಕೆ ಬಿಜೆಪಿ ನಾಯಕರಲ್ಲಿದೆ.
ತಮ್ಮನ್ನು ಹಠಾತ್ತನೇ ಸಚಿವ ಸಂಪುಟದಿಂದ ಕೈಬಿಟ್ಟ ಸಿದ್ದರಾಮಯ್ಯ ಅವರ ನಡೆಯಿಂದ ಬೇಸತ್ತ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷದಿಂದ ನಿರ್ಗಮಿಸಿದ್ದಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ನಾಯಕರು ಮನವೊಲಿಸುವ ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ. ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಸಾದ್‌ರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದರು. ಆದರೆ, ಆರಂಭದ ಕೆಲವು ದಿನಗಳ ಕಾಲ ಗುಟ್ಟು ಬಿಟ್ಟುಕೊಡದ ಶ್ರೀನಿವಾಸ ಪ್ರಸಾದ್ ಅವರು ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳ ಸಭೆ ನಡೆಸಿದರು. ಅಂತಿಮವಾಗಿ ಬಿಜೆಪಿ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡರು. ಕಳೆದ ವಾರ ಬೆಂಗಳೂರಿನಲ್ಲಿ ಪ್ರಸಾದ್ ಅವರ ನಿವಾಸಕ್ಕೆ ಖುದ್ದು ಯಡಿಯೂರಪ್ಪ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸೇರ್ಪಡೆ ಚಿತ್ರಣ ಅಂತಿಮಗೊಂಡಿತು. ಶೀಘ್ರದಲ್ಲೇ ಪ್ರಸಾದ್ ಪ್ರತಿನಿಧಿಸುತ್ತಿದ್ದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ನಿಗದಿಯಾಗುವ ಸಂಭವವಿದೆ. ಅದಕ್ಕೂ ಮೊದಲೇ ಪ್ರಸಾದ್ ಅವರ ಸೇರ್ಪಡೆ ಪ್ರಕ್ರಿಯೆ ಮುಗಿಯಲಿದೆ.
ಕೋರ್ ಕಮಿಟಿ ಸಭೆ
ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ಸೋಮವಾರ ನಡೆಯಲಿದೆ.
ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಸೇರ್ಪಡೆ ನಂತರ ಈ ಸಭೆ ನಡೆಯಲಿದ್ದು, ಪಕ್ಷದ ಮುಂದಿನ ಬೆಳವಣಿಗೆಗಳು, ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಪಕ್ಷದ ಮೂರು ತಂಡಗಳ ನೇತೃತ್ವದಲ್ಲಿ ನಡೆಯುತ್ತಿರುವ ಬರ ಅಧ್ಯಯನ ಪ್ರವಾಸ, ಕಲಬುರ್ಗಿಯಲ್ಲಿ ನಡೆಸಲು ಉದ್ದೇಶಿಸಿರುವ ರಾಜ್ಯ ಕಾರ್ಯಕಾರಿಣಿ ಸಭೆಯ ಸಿದ್ಧತೆ ಬಗ್ಗೆ ಕೂಡ ಚರ್ಚೆ ನಡೆಸಲಾಗುತ್ತದೆ. ಜತೆಗೆ ಪಕ್ಷದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಬಗ್ಗೆ ಕೂಡ ಚರ್ಚೆಗೆ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.