Advertisement

ನೃತ್ಯ ರೂಪಕದಲ್ಲಿ ನಡೆಯಿತು ಶ್ರೀನಿವಾಸ ಕಲ್ಯಾಣ 

12:30 AM Jan 04, 2019 | Team Udayavani |

ಭಾವವಿಲ್ಲದೆ ನೃತ್ಯವೂ ಪರಿಪೂರ್ಣವಾಗಲು ಸಾಧ್ಯವಿಲ್ಲ. ನೃತ್ಯರೂಪಕವು ಯಶಸ್ವಿಯಾಗಬೇಕಾದರೆ ಪಾತ್ರದೊಳಗೆ ಪಾತ್ರಧಾರಿಯ ಪರಕಾಯ ಪ್ರವೇಶ‌ವಾಗಬೇಕು. ಪೌರಾಣಿಕ ಹಿನ್ನಲೆಯುಳ್ಳ ಒಂದು ಮಹಾಕಥೆಯನ್ನು ಕಾಲಮಿತಿಯಲ್ಲಿ ಮೂಲಸ್ವರೂಪಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸಂಪೂರ್ಣವಾಗಿ ಜನರೆದುರು ತೆರೆದಿರಿಸಬೇಕು .ಕಥೆಯೊಂದನ್ನು ಸಂಗೀತ ರಾಗ, ಶ್ರುತಿ, ತಾಳದ ಜೊತೆಯಲ್ಲಿ ಭಾವಾಭಿನಯದ ಮೂಲಕ ಜನರ ಮುಂದೆ ಪ್ರಸ್ತುತಪಡಿಸಬೇಕು.ಅಂತಹ ಪ್ರಯೋಗವೊಂದ‌ನ್ನು ಶ್ರೀ ಶಾರದಾ ಕಲಾ ಕೇಂದ್ರದ ನೃತ್ಯ ತಂಡವು ಪ್ರದರ್ಶಿಸಿ ಯಶಸ್ವಿಯಾಗಿದೆ. 

Advertisement

ಶ್ರೀ ಶಾರದಾ ಕಲಾ ಕೇಂದ್ರದ ಹಿರಿಯ ಕಲಾವಿದರಾದ ವಿ| ಗೋಪಾಲಕೃಷ್ಣ ವೀರಮಂಗಲ ಇವರು ರಚಿಸಿದ ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕವು ಗುರು ವಿ| ಸುದರ್ಶನ್‌ ಎಂ.ಎಲ್‌. ಭಟ್‌ ಇವರ ರಾಗ ಸಂಯೋಜನೆಯೊಂದಿಗೆ ಯಶಸ್ವಿಯಾಗಿ ನಾಲ್ಕನೇ ಬಾರಿಗೆ ಬೆಳ್ಳಾರೆಯಲ್ಲಿ ಪ್ರದರ್ಶನಗೊಂಡಿದೆ ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠನೆಂದು ತಿಳಿಯಲು ತ್ರಿಲೋಕಗಳಿಗೆ ತೆರಳುವ ಭ್ರಗು ಮಹರ್ಷಿಯು ಬ್ರಹ್ಮ ಮತ್ತು ಶಿವನ ಕಡಗಣನೆಯಿಂದ ಕೋಪಗೊಂಡು ಅವರಿಗೆ ಶಾಪವಿತ್ತು ನಂತರ ವಿಷ್ಣುವನ್ನು ನೋಡಲು ವೈಕುಂಠದತ್ತ ಪ್ರಯಾಣಿಸುತ್ತಾನೆ. 

ಕ್ಷೀರಸಾಗರದಲ್ಲಿ ಸತಿ ಲಕ್ಷೀಯೊಂದಿಗೆ ಯೋಗನಿದ್ರೆಯಲ್ಲಿರುವುದನ್ನು ಕಂಡ ಭ್ರಗು ಮಹರ್ಷಿಯು ಕೋಪದಿಂದ ಆತನ ಹೃದಯಕ್ಕೆ ತುಳಿಯುವ ದೃಶ್ಯದೊಂದಿಗೆ ನೃತ್ಯ ರೂಪಕವು ಪ್ರಾರಂಭವಾಗುತ್ತದೆ . ಭ್ರಗು ಮಹರ್ಷಿಯ ಕ್ರೋಧವನ್ನು ಬಹಳ ಪರಿಣಾಮಕಾರಿಯಾಗಿ ಪ್ರಕಟಪಡಿಸಿದ ಪಾತ್ರಧಾರಿಯು ರೂಪಕಕ್ಕೆ ವೇಗ ಹಾಗೂ ತೂಕವನ್ನು ನೀಡಿದರು . 

ಕತೆಯ ಮಧ್ಯದಲ್ಲಿ ಬರುವ ನರ್ತಕಿಯರ ಲಾಸ್ಯ ನೃತ್ಯಗಳ ಸಂಯೋಜನೆ ಉತ್ತಮವಾಗಿತ್ತು . ಚೋಳ ರಾಜನ ಅರಮನೆಯ ಚಿತ್ರಣ ಸೊಗಸಾಗಿತ್ತು. ಗೋಪಾಲಕನ ನೃತ್ಯವು ಹಳ್ಳಿ ಸೊಗಡನ್ನು ಎತ್ತಿ ತೋರಿಸುವಂತಿತ್ತು . ಬಕುಲಾದೇವಿಯ ಪಾತ್ರವೂ ಮಾತೃ ವಾತ್ಸಲ್ಯದ ಸಂಕೇತವಾಗಿತ್ತು . ಶ್ರೀನಿವಾಸ ತನ್ನ ಮಗನಾಗಿರದಿದ್ದರೂ, ತನ್ನ ಕುಂಟುಕಾಲನಿಂದ ನಡೆಯುತ್ತಾ ಆತನಿಗಾಗಿ ತನ್ನ ಸಂಪೂರ್ಣ ಮಾತೃವಾತ್ಸಲ್ಯವನ್ನು ಧಾರೆಯೆರೆಯುವ ಬಕುಲಾ ದೇವಿಯ ಪಾತ್ರ ಮನಮೋಹಕವಾಗಿ ಮೂಡಿ ಬಂತು. 

 ಸ್ವರಗಳ ಏರಿಳಿತಕ್ಕೆ ಅನುಗುಣವಾಗಿ ರಂಗ ಮಂಚವು ಖಾಲಿಯಾಗದೆ ಇರುವಂತೆ ನೋಡಿಕೊಳ್ಳುವುದರ ಜೊತೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನೃತ್ಯ ರೂಪಕದ ಕೇಂದ್ರಬಿಂದುವಾಗಿರುವ‌ ಶ್ರೀನಿವಾಸ ಮತ್ತು ಪದ್ಮಾವತಿಯವರ ನವಿರು ಪ್ರೇಮಸಲ್ಲಾಪ ,ಅಗಲುವಿಕೆಯ ವಿರಹ ವಿನೂತನವಾಗಿ ಕಂಡು ಬಂದಿದೆ . ಶ್ರೀನಿವಾಸನು ತನ್ನ ಪ್ರಿಯತಮೆ ಪದ್ಮಾವತಿಯ ಗುಂಗಲ್ಲಿ ಇರುವ ನವಿರು ಪ್ರೇಮದ ದೃಶ್ಯ ಮನಮೋಹಕವಾಗಿತ್ತು . ಶ್ರೀನಿವಾಸ ಹಾಗೂ ಪದ್ಮಾವತಿಯ ಪಾತ್ರದಲ್ಲಿ ಅಭಿನಯಿಸಿದ ತಂಡದ ಹಿರಿಯ ಕಲಾವಿದರು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.ಇವರಿಬ್ಬರನ್ನು ಕೊಂಡಿಯಂತೆ ಬೆಸೆಯುವ ಹಾಲಕ್ಕಿಯ ಪಾತ್ರವು ನೃತ್ಯ ರೂಪಕದಲ್ಲಿ ಮಿಂಚಿನಂತೆ ಬಂದು ಮಾಯವಾದರೂ ರಂಜಿಸಿತು. ನಟುವಾಂಗದಲ್ಲಿ ಸುದರ್ಶನ್‌ ಎಂ.ಎಲ್‌. ಭಟ್‌ , ಮೃದಂಗದಲ್ಲಿ ವಿ| ಶ್ಯಾಮ್‌ ಭಟ್‌ ಸುಳ್ಯ ಮತ್ತು ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಇವರು ಸಹಕಾರ ನೀಡಿದರು. 

Advertisement

ಅಕ್ಷತಾ ಶ್ರೀವತ್ಸ 

Advertisement

Udayavani is now on Telegram. Click here to join our channel and stay updated with the latest news.

Next