Advertisement

ಮರಾಠಿ ನಾಡಿನಲ್ಲಿ ಶ್ರೀನಿವಾಸ ಕಲ್ಯಾಣ 

06:00 AM Aug 03, 2018 | Team Udayavani |

ಪುಣೆ ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಆಯೋಜನೆಯಲ್ಲಿ ಜುಲೈ 14 ರಂದು ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪುಣೆ ವತಿಯಿಂದ ಸ್ಥಳೀಯ ಕಲಾವಿದರು ಹಾಗೂ ಕರಾವಳಿಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು. ಸುಮಾರು ನಾಲ್ಕು ಗಂಟೆಗಳ ಕಾಲ ಪ್ರೇಕ್ಷಕರನ್ನು ತನ್ಮಯಗೊಳಿಸುವಲ್ಲಿ ಈ ಪ್ರದರ್ಶನ ಸಫ‌ಲವಾಗಿದೆ. ಹಿಮ್ಮೇಳ ,ಮುಮ್ಮೇಳಗಳ ಪರಿಪೂರ್ಣತೆಯೊಂದಿಗೆ ನಡೆದ ಪ್ರದರ್ಶನ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಸಮತೋಲನದ ಹಿಮ್ಮೇಳ , ಸುಶ್ರಾವ್ಯವಾದ ಭಾಗವತಿಕೆ, ಸಾಹಿತ್ಯಭರಿತ ಅರ್ಥಗಾರಿಕೆ ,ಅಭಿನಯ ,ನವರಸಗಳ ಸಮ್ಮಿಳಿತದಿಂದ ಸಮದೂಗಿಸಿಕೊಂಡ ಈ ಪ್ರದರ್ಶನಕ್ಕೆ ಮಾರುಹೋದ ಪ್ರೇಕ್ಷಕ ವರ್ಗದಿಂದ ಸತತವಾದ ಚಪ್ಪಾಳೆ ,ಪ್ರಶಂಸೆಯ ನುಡಿಗಳು ಕೇಳಿ ಬಂದವು. 

Advertisement

 ಗಾನಕೊಗಿಲೆಯೆಂದೇ ಪ್ರಖ್ಯಾತಿ ಪಡೆದ ಗಿರೀಶ್‌ ರೈ ಕಕ್ಕೆಪದವು ಇವರ ಸ್ವರ ಮಾಧುರ್ಯ ಕಲಾರಸಿಕರಿಗೆ ಹೊಸ ಅನುಭವ ನೀಡಿತು . ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಕೈಚಳಕ ,ಮದ್ದಳೆಯಲ್ಲಿ ಶ್ರೀಧರ ಯೆಡಮಲೆ,ಚಕ್ರತಾಳದಲ್ಲಿ ನಿಶಿತ್‌ ಮುಂಬಯಿ ಸಹಕರಿಸಿದರು . ದೇವೇಂದ್ರನಾಗಿ ಪುಣೆಯ ನಾಟ್ಯಗುರು ಮಂಡಳಿಯ ಹಿರಿಯ ಕಲಾವಿದ ಮದಂಗಲ್ಲು ಆನಂದ ಭಟ್‌ ರವರ ಪರಿಪಕ್ವ ಅಭಿನಯ ,ಅಗ್ನಿಯಾಗಿ ಉತ್ಸಾಹಿ ಕಲಾವಿದ ಸುಖೇಶ್‌ ಶೆಟ್ಟಿ ಎಣ್ಣೆಹೊಳೆ ,ವೃಷಭಾಸುರನಾಗಿ ಮಂಡಳಿಯ ಹಿರಿಯ ಕಲಾವಿದ ವಾಸು ಕುಲಾಲ್‌ ವಿಟ್ಲ ,ವರಾಹ ಹಾಗೂ ಬಕುಳೆಯಾಗಿ ಮಂಡಳಿಯ ಪ್ರಬುದ್ಧ ಅನುಭವಿ ಕಲಾವಿದ ವಿಕೇಶ್‌ ರೈ ಶೇಣಿ ,ಶಂಖಾಸುರನಾಗಿ ಜಗದೀಪ್‌ ಶೆಟ್ಟಿ ,ದುರ್ಗಾಸುರನಾಗಿ ಸುದರ್ಶನ ಪೂಜಾರಿ ,ವರುಣನಾಗಿ ಗೋವಿಂದ ಸಫ‌ಲಿಗ ಮುಂಬಯಿ ಉತ್ತಮ ಪ್ರದರ್ಶನ ನೀಡಿದರು. 

 ಅತಿಥಿ ಕಲಾವಿದರಾಗಿ ಕರಾವಳಿಯ ಪ್ರವೀಣ ಜಯಾನಂದ ಗೌಡ ಸಂಪಾಜೆಯವರ ಸತ್ವಭರಿತ ಮಾತಿನ ವೈಖರಿ ,ಅಭಿನಯ ವಿಶೇಷವಾಗಿತ್ತು . ,ಕಿರಾತ ಶ್ರೀನಿವಾಸನಾಗಿ ಹೆಸರಾಂತ ಕಲಾವಿದ ದಿವಾಕರ ರೈ ಸಂಪಾಜೆಯವರ ಅದ್ಭುತ ಅಭಿನಯ ಹಾಗೂ ಯಕ್ಷಗಾನದ ಚಾರ್ಲಿ ಚಾಪ್ಲಿನ್‌ ಖ್ಯಾತಿಯ ಸೀತಾರಾಮ ಕುಮಾರ್‌ ಕಟೀಲ್‌ರವರ ಪಾದರಸದ ಹಾಸ್ಯಾಭಿನಯದ ಜುಗಲ್ಬಂದಿ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಯಿತು. ಪದ್ಮಾವತಿಯ ಪಾತ್ರದಲ್ಲಿ ಸಂತೋಷಕುಮಾರ್‌ ಹಿಲಿಯಾಣ ಹಾಗೂ ಸಖೀಯಾಗಿ ಶರತ್‌ ಶೆಟ್ಟಿ ತೀರ್ಥಹಳ್ಳಿ ಇವರ ಜೋಡಿ ವೇದಿಕೆಯಲ್ಲಿ ಮಾಯಾಲೋಕವನ್ನೇ ಸೃಷ್ಟಿಸಿತು . 

ಕಿರಣ್‌ ಬಿ. ರೈ ಕರ್ನೂರು 

Advertisement

Udayavani is now on Telegram. Click here to join our channel and stay updated with the latest news.

Next