Advertisement

ಅಪರಾಧ ತಡೆಗೆ ಪೊಲೀಸರ ಹರ ಸಾಹಸ : ಜಿಲ್ಲಾ ವರಿಷ್ಠಾಧಿಕಾರಿ ಶ್ರೀನಿವಾಸಗೌಡ

01:02 PM Sep 03, 2020 | sudhir |

ಹಾಸನ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ ತಕ್ಷಣ ಸ್ಪಂದಿಸುವುದೂ ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಜ್ಜಾಗಿದೆ ಎಂದು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಶ್ರೀನಿವಾಸಗೌಡ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲಾದರೂ ಗಲಾಟೆಗಳು ನಡೆದರೆ, ಅನುಮಾನಸ್ಪದ ವ್ಯಕ್ತಿಗಳು ಕಾಣಿಸಿದರೇ ಸಾರ್ವಜನಿಕರು ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಾಕು ಪೊಲೀಸ್‌ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಾರೆ.

ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದವರ ಹೆಸರನ್ನು ಹಾಗೂ ಮೊಬೈಲ್‌ ಸಂಖ್ಯೆಯನ್ನು ಗೌಪ್ಯವಾಗಿ ಇರಿಸಲಾಗುವುದು ಎಂದರು.

ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿ: ಜಿಲ್ಲೆಯಲ್ಲಿ, ವಿಶೇಷವಾಗಿ ಚನ್ನರಾಯ ಪಟ್ಟಣದಲ್ಲಿ ನಡೆದ ಅಪರಾಧ ಪ್ರಕರಣಗಳು, ಹಾಸನದಲ್ಲಿ ನಡೆಯುತ್ತಿರುವ ಪುಂಡಾಟಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರ ಕೋರಿರುವ ಎಸ್ಪಿ ಶ್ರೀನಿವಾಸಗೌಡ ಅವರು, ಸಾರ್ವಜನಿಕರು ಹೆದರದೇ ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದರೇ ಪೊಲೀಸರು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.

ಕರಪತ್ರ ಹಂಚುವ ಕ್ರಮ: ಡಕಾಯಿತರು, ದರೋಡೆಕೋರರು ಇತ್ತೀಚಿನ ದಿನಗಳಲ್ಲಿ ಸುಳಿವು ಬಿಡದಂತೆ ಎಚ್ಚರಿಕೆಯಿಂದ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ಮೊಬೈಲ್‌ ಗಳನ್ನೂ ಕೂಡ ಬಳಸದೇ ದುಷ್ಕೃತ್ಯ ನಡೆಸುತ್ತಿದ್ದಾರೆ. ಪೊಲೀಸ್‌ ಗುಪ್ತದಳವು ಮಾಹಿತಿ ಸಂಗ್ರಹಿಸಿಯೇ ಆರೋಪಿಗಳನ್ನು ಪತ್ತೆ ಹಚ್ಚಬೇಕಾದ ಸವಾಲು ಎದುರಿಸುತ್ತಿದೆ. ಒಂಟಿ ಮನೆ ಹಾಗೂ ತೋಟದ ಮನೆಯಲ್ಲಿ ಒಬ್ಬರು, ಇಬ್ಬರು ಇರುವ ಕಡೆ ಹೆಚ್ಚು ಮನೆಗಳ್ಳತನ ಹಾಗೂ ಇತರೆ ದುಷ್ಕೃತ್ಯಗಳು ಹೆಚ್ಚು ನಡೆಯುತ್ತಿರುವುದರಿಂದ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸಲು ಪೊಲೀಸ್‌ ಇಲಾಖೆಯಿಂದ ಕರಪತ್ರ ಹಂಚುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

Advertisement

ಅನುಮಾನ ಬಂದ್ರೆ ಪೊಲೀಸ್‌ಗೆ ತಿಳಿಸಿ: ಒಂಟಿಮನೆ, ತೋಟದ ಮನೆಗಳಿಗೆ ಯಾರಾದರೂ ಅಪರಿಚಿತರು ಬಂದರೇ ಯಾವುದೇ ಕಾರಣಕ್ಕೂ ಮನೆ ಬಾಗಿಲು ತೆಗೆಯಬಾರದು. ಅನುಮಾನ ಬಂದ ಕೂಡಲೇ ಪೊಲೀಸ್‌ ಕಂಟ್ರೋಲ್‌ಗೆ ಕರೆ ಮಾಡಬೇಕು. ಇನ್ನು ಬೀದಿಗಳಲ್ಲಿ ಅನುಮಾನವಾಗಿ ಸುತ್ತಾಡುವವರ ಬಗ್ಗೆ ಅಲ್ಲಿನ ನಿವಾಸಿಗಳು ತಕ್ಷಣದಲ್ಲಿ ಪೊಲೀಸ್‌ಗೆ ಮಾಹಿತಿ ಕೊಡಬೇಕು.

ಹೊಸದಾಗಿ ಮನೆ ಬಾಡಿಗೆಗೆ, ಕೆಲಸಕ್ಕೆ ಮತ್ತು ತೋಟದ ಕೆಲಸಕ್ಕೆ ಬಂದು ಕೆಲಸದ ಸಮಯದಲ್ಲೆ ಪರಿಚಿತರಾದವರ ಬಗ್ಗೆ, ಕೆಲಸ ಇಲ್ಲದಿದ್ದಾಗಲೂ ಮನೆಗೆ ಬಂದರೇ ಎಚ್ಚರದಿಂದ ಇರಬೇಕು. ಮನೆ ಬಾಗಿಲನ್ನು ತೆಗೆಯದೇ ಮನೆ ಒಳಗಿನಿಂದಲೇ ಮಾತ ನಾಡಿ ಕಳುಸಬೇಕು. ಅನುಮಾನ ಬಂದರೇ ಪೊಲೀಸರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕರು ಸದಾ ಎಚ್ಚರದಿಂದಿರಬೇಕು:
ಮದ್ಯಪಾನ ಮಾಡಿ ಗಲಾಟೆ ಮಾಡುವವರ ಬಗ್ಗೆ ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದರೂ ತಕ್ಷಣ ಪೊಲೀಸರು ಕ್ರಮ ಕೈಗೊಳ್ಳುವರು. ಮಾಹಿತಿ ನೀಡಿದವರ ವಿವರವನ್ನು ಯಾವ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ.

ಹೋಟೆಲ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ ಹಾಗೂ ಡಾಬಾ ಮತ್ತಿತರೆ ಕಡೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯುತ್ತಿದ್ದರೆ ಮಾಲೀಕರೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗುವುದು ಮತ್ತು ಪರವಾನಿಗೆ ರದ್ದು ಮಾಡಲಾಗುವುದು . ಕೋವಿಡ್ ನಂತರದ ತಮ್ಮ ಪರಿಸರಕ್ಕೆ ಹೊಸದಾಗಿ ಬಂದಿರುವವರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಎಸ್ಪಿ ಶ್ರೀನಿವಾಸ ಗೌಡ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next