Advertisement

ಪೆನ್ಸಿಲ್‌ ಶೇಡಿಂಗ್‌ನಲ್ಲಿ ಮೋಡಿ ಮಾಡುವ ಶ್ರೀನಿಧಿ

11:31 PM Feb 19, 2020 | Sriram |

ಕೋಟೇಶ್ವರದ ಬಾಲಕ ಶ್ರೀನಿಧಿ ಆಚಾರ್ಯ ಪೆನ್ಸಿಲ್‌ ಚಿತ್ರಕಲೆಯಲ್ಲಿ ನಿಷ್ಣಾತನಾಗಿದ್ದಾನೆ. ಚಕಚಕನೆ ಚಿತ್ರದ ಸ್ಕೆಚ್‌ ಹಾಕಿ ಕ್ಷಣಾರ್ಧದಲ್ಲಿ ಪೆನ್ಸಿಲ್‌ ಶೇಡಿಂಗ್‌ ಹಾಕಿಬಿಡುವ ಈತ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದರೂ ಕಲಾವಿದರ ಮಟ್ಟದ ಪ್ರತಿಭೆ ಹೊಂದಿದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಕೋಟೇಶ್ವರದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ವಿದ್ಯಾರ್ಥಿಯಾಗಿರುವ ಈತನ ಚಿತ್ರಕಲಾಕೃತಿಗಳ ಪ್ರದರ್ಶನ ಇತ್ತೀಚೆಗೆ ನಡೆದ ಅಟಲ್‌ ವಿಜ್ಞಾನ ಕಲಾ ಪ್ರದರ್ಶನದಲ್ಲಿ ಎಲ್ಲರ ಮೆಚ್ಚುಗೆ ಪಡೆದಿತ್ತು.

Advertisement

ಬಾಲಕ ಶ್ರೀನಿಧಿ ಆಚಾರ್ಯನ ಕೌಟುಂಬಿಕ ಹಿನ್ನೆಲೆ ಹಾಗೂ ಈತನ ಆಸಕ್ತಿ ಗಮನಿಸಿದರೆ ಮುಂದೊಂದು ದಿನ ಈತ ಪ್ರಸಿದ್ಧ ಕಲಾವಿದನಾಗುವುದರಲ್ಲಿ ಸಂಶಯವಿಲ್ಲ. ಕೋಟೇಶ್ವರದ ದಿ. ಗೋಪಾಲಕೃಷ್ಣ ಆಚಾರ್ಯರ ವಂಶವೇ ಕಲಾವಂಶ. ಅವರ ಮಗ ದಿನೇಶ್‌ ಆಚಾರ್ಯ ಮತ್ತು ಶ್ಯಾಮಲಾ ಆಚಾರ್ಯ ದಂಪತಿಗಳ ಪುತ್ರನಾದ ಶ್ರೀನಿಧಿ ಚಿಕ್ಕ ವಯಸ್ಸಿನಿಂದಲೂ ಚಿತ್ರಕಲೆ, ಸಂಗೀತ, ಕ್ರಾಫ್ಟ್, ಮರದ ಕೆತ್ತನೆ ಕೆಲಸ, ಯಕ್ಷಗಾನ ಮುಂತಾದ ಕಲೆಗಳಲ್ಲಿ ತೊಡಗಿಸಿಕೊಂಡಿದ್ದು ಇದೀಗ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯೊಂದಿಗೆ ಮುಂದುವರಿಯುತ್ತಿದ್ದಾನೆ.

ಶಾಲೆಯಲ್ಲಿ ಪಾಠ ಪ್ರವಚನದ ಬಿಡುವಿನ ವೇಳೆಯಲ್ಲಿ ಒಂದಿಷ್ಟೂ ಸಮಯವನ್ನು ಹಾಳುಮಾಡದೆ ಚಿತ್ರಕಲಾ ಶಿಕ್ಷಕರಿಂದ ಮಾರ್ಗದರ್ಶನ ಪಡೆದು ಚಿತ್ರ ರಚನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದಾನೆ. ಮನೆಯಲ್ಲೂ ಬಿಡುವಿನ ವೇಳೆ ಚಿತ್ರಕಲೆಗೇ ಮೀಸಲು. ಇದೇ ಅವನ ಜಯದ ಗುಟ್ಟು. ರಜಾ ಅವಧಿಯಲ್ಲಿ ಕುಂದಾಪುರದ ಸಾಧನಾ ಕಲಾಕೇಂದ್ರದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದ್ದು ಅದರಲ್ಲಿ ತನಗೆ ಇಷ್ಟವಾದ ಪೆನ್ಸಿಲ್‌ ಶೇಡಿಂಗ್‌ನ್ನು ಮುಂದುವರಿಸಿದ್ದಾನೆ.

ಪೆನ್ಸಿಲ್‌ ಶೇಡಿಂಗ್‌ನಲ್ಲಿ ಈತ ಬಿಡಿಸದ ಚಿತ್ರಗಳಿಲ್ಲ. ಎಲ್ಲವೂ ಪರಿಷ್ಕಾರದಿಂದ, ಪ್ರಮಾಣಬದ್ಧತೆಯಿಂದ ಹಾಗೂ ಉತ್ತಮ ನೆರಳು-ಬೆಳಕಿನ ಸಂಯೋಜನೆಯಿಂದ ಕೂಡಿವೆ. ಚಿತ್ರದ ಯಾವ ಭಾಗದಲ್ಲಿ ತುಂಬಾ ನೆರಳಿನ ಛಾಯೆ ಮೂಡಿಸಬೇಕು ಎಂಬ ಪರಿಕಲ್ಪನೆ ಇವನಿಗಿದೆ. ಹಾಗಾಗಿ ಇವನ ಚಿತ್ರಗಳು ವೀಕ್ಷಕರ ಕಣ್ಮನ ಸೆಳೆಯುತ್ತದೆ. ಈ ಕಲಾಪ್ರದರ್ಶನದಲ್ಲಿ ಪೇಜಾವರ ಸ್ವಾಮೀಜಿಯವರ ಭಾವಚಿತ್ರ, ಸಾಯಿಬಾಬಾ, ಮಗು, ಮಹಿಳೆ, ಆನೆ ಮುಂತಾದ ಪ್ರಾಣಿಗಳು, ಗಡ್ಡಧಾರಿ, ಸಿನೆಮಾ ನಟರು, ನಿಸರ್ಗದೃಶ್ಯಗಳು, ಸಮುದ್ರದಲ್ಲಿ ಹಡಗು, ಹಕ್ಕಿಗಳು, ವಸ್ತುಚಿತ್ರ, ದೇವರಚಿತ್ರ ಸೇರಿದಂತೆ ಅನೇಕ ಕಲಾಕೃತಿಗಳು ಗಮನಾರ್ಹವಾಗಿದ್ದವು. ಅಕ್ಕಪಕ್ಕದ ಅನೇಕ ಶಾಲೆಗಳ ಮಕ್ಕಳು, ಶಿಕ್ಷಕರು ಹಾಗೂ ಹಿರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಶ್ರೀನಿಧಿ ಆಚಾರ್ಯನ ಕಲೆಗೆ ಉಜ್ವಲ ಭವಿಷ್ಯವಿದೆ.

ಉಪಾಧ್ಯಾಯ, ಮೂಡುಬೆಳ್ಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next