Advertisement

ಅವ್ಯವಸ್ಥೆಯ ಆಗರವಾದ ವಾರದ ಸಂತೆ

12:43 PM Oct 04, 2019 | Naveen |

„ರಮೇಶ್‌ ಕರುವಾನೆ
ಶೃಂಗೇರಿ: ಪಟ್ಟಣದಲ್ಲಿ ಮೂರು ದಶಕಗಳ ಹಿಂದೆ ಆರಂಭವಾದ ವಾರದ ಸಂತೆ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿರುವುದು ಬಡವರ ಪಾಲಿಗೆ ವರವಾಗಿದೆ. ಆದರೆ, ಸಂತೆ ಮಾತ್ರ ಅವ್ಯವಸ್ಥೆಯ ಆಗರವಾಗಿದೆ.

Advertisement

ಶೃಂಗೇರಿಯಲ್ಲಿ ನಡೆಯುತ್ತಿರುವ ಸಂತೆ ಪ್ರದೇಶ ನಾಲ್ಕನೇ ಸ್ಥಳವಾಗಿದೆ. ಪ್ರಾರಂಭದಲ್ಲಿ ಹಿಂದೆ ಈಗಿನ ಕುವೆಂಪು ಬಸ್‌ ನಿಲ್ದಾಣದ ಜಾಗದಲ್ಲಿ ಸಂತೆ ಆರಂಭಿಸಲಾಗಿತ್ತು. ಹೊಸ ಬಸ್‌ ನಿಲ್ದಾಣ ನೂತನವಾಗಿ ನಿರ್ಮಾಣಗೊಂಡ ನಂತರ ಸಂತೆಯನ್ನು ಗಾಂಧಿ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಸಂತೆ ವ್ಯಾಪಾರ ವಹಿವಾಟಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಮಳೆಗಾಲದಲ್ಲಿ ತುಂಗಾ ನದಿಯ ಪ್ರವಾಹ ಎದುರಾಗುವುದರಿಂದ ಸಂತೆಯನ್ನು ಶಾರದಾ ನಗರದಲ್ಲಿ ಈ ಹಿಂದೆ ಇದ್ದ ಸಿನಿಮಾ ಟಾಕೀಸ್‌ ಬಳಿಯ ರಸ್ತೆಯಲ್ಲಿ ಸಂತೆ ಪ್ರಾರಂಭವಾಯಿತು.

ಅಲ್ಲಿಯೂ ಸ್ಥಳಾವಕಾಶ ಮೂಲಭೂತ ಸೌಲಭ್ಯಗಳಿಲ್ಲದೇ ಸಂತೆ ಕುಂಟುತ್ತಾ ಸಾಗಿತ್ತು. ನಂತರ ಕಳೆದ ಎರಡು ದಶಕದ ಹಿಂದೆ ಪಟ್ಟಣ ಪಂಚಾಯಿತಿ ಸರ್ಕಾರದ ವಿಶೇಷ ಅನುದಾನದಲ್ಲಿ ಶಾರದಾ ನಗರದಲ್ಲಿಯೇ ನೂತನವಾಗಿ ವ್ಯವಸ್ಥಿತ ಕಟ್ಟಡ ನಿರ್ಮಿಸಿ ಸಂತೆ ನಡೆಯಲು ಅನುಕೂಲ ಕಲ್ಪಿಸಿತು.

ಅಲ್ಲಿಂದ ಇಲ್ಲಿಯವರೆಗೂ ಸಂತೆ ನಡೆದುಕೊಂಡು ಬರುತ್ತಿದ್ದು, ಇದೀಗ ಬಹು ದೊಡ್ಡದಾಗಿ ಸಂತೆ ನಡೆಯುತ್ತಿದೆ. ಸಂತೆ ಆರಂಭವಾಗಲು ಸಾಮಾಜಿಕ ಕಾರ್ಯಕರ್ತ ದಿ| ಡಾ| ಎಲ್‌.ಎಂ.ಭಟ್‌ ಅವರ ಶ್ರಮವನ್ನು ಜನರು ಈಗಲೂ ಸ್ಮರಿಸುತ್ತಾರೆ.
ವಾರಕ್ಕೊಂದು ದಿನ ಪ್ರತಿ ಸೋಮವಾರ ನಡೆಯುವ ಸಂತೆಗೆಂದೇ ಗ್ರಾಮೀಣ ಭಾಗದ ಜನರು ಆಗಮಿಸಿ ಒಂದು ವಾರಕ್ಕೆ ಬೇಕಾಗುವಷ್ಟು ತರಕಾರಿ, ಧವಸ ಧಾನ್ಯ ಇತ್ಯಾದಿ ವಸ್ತುಗಳನ್ನು ಖರೀದಿಸುತ್ತಾರೆ.

ಸಂತೆ ವ್ಯಾಪಾರಕ್ಕೆ ಬೇರೆ ಬೇರೆ ತಾಲೂಕುಗಳಿಂದಲೂ ಸುಮಾರು 50 ಕ್ಕೂ ಹೆಚ್ಚು ವ್ಯಾಪಾರಿಗಳು ಬರುವುದರೊಂದಿಗೆ ಸ್ಥಳೀಯ ವ್ಯಾಪಾರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಅಂಗಡಿಗಳು ಇಲ್ಲಿ ತೆರೆದುಕೊಳ್ಳುತ್ತವೆ. ಸಂತೆಗೆ ಕೇವಲ ತರಕಾರಿ ದವಸ ಧಾನ್ಯವಲ್ಲದೇ ಮಕ್ಕಳ ಆಟಿಕೆ ಸಾಮಾನುಗಳು, ಕಬ್ಬಿಣದ ವಸ್ತುಗಳು, ಪ್ಲಾಸ್ಟಿಕ್‌ ಬಕೆಟ್‌, ಕೊಡಪಾನ, ಹಣ್ಣಿನ ಅಂಗಡಿಗಳು ಗ್ರಾಮೀಣ ಭಾಗದಲ್ಲಿ ತಯಾರು ಮಾಡಲಾದ ಕರಕುಶಲ ವಸ್ತುಗಳು ಕೂಡ ಇಲ್ಲಿ ಮಾರಾಟ ಮಾಡಲಾಗುತ್ತದೆ.

Advertisement

ಅವ್ಯವಸ್ಥೆಯ ಆಗರ: ಇಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದರೂ ಪಟ್ಟಣ ಪಂಚಾಯ್ತಿಗೆ ದೊಡ್ಡ ಮಟ್ಟದ ಕಂದಾಯ ಬರುತ್ತಿದ್ದರೂ ಇಲ್ಲಿನ ಅವ್ಯವಸ್ಥೆ ಮಾತ್ರ ಹೇಳತೀರದಾಗಿದೆ. ಸಂತೆ ಮಾರುಕಟ್ಟೆಯ ಕಟ್ಟಡ ವ್ಯಾಪಾರ ವಹಿವಾಟಿಗೆ ಸಣ್ಣದಾಗಿದ್ದ ಹಿನ್ನೆಲೆಯಲ್ಲಿ ಸಂತೆ ಪಕ್ಕದ ರಸ್ತೆಯಲ್ಲಿಯೇ ಜೋಪಡಿ, ಪ್ಲಾಸ್ಟಿಕ್‌ ಟಾರ್ಪಲ್‌ ಮೂಲಕ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುವಂತಾಗಿದೆ. ರಸ್ತೆಯ ಪಕ್ಕದಲ್ಲಿದ್ದ ಚರಂಡಿ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯ ವಸ್ತುಗಳನ್ನು ಚರಂಡಿಗೆ ಎಸೆಯುವುದರಿಂದ ಕೆಟ್ಟ ವಾಸನೆ ಬೀರುತ್ತಿದೆ.

ಮಳೆಗಾಲದ ಸಮಯದಲ್ಲಿ ನೀರು ಶೇಖರಣೆಯಾಗಿ ತ್ಯಾಜ್ಯ ಸಹಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದಲ್ಲದೇ ನಾಯಿ, ದನಕರುಗಳು ಸಂತೆಯ ಮಧ್ಯದಲ್ಲಿಯೇ ಸುತ್ತಾಡುವುದರಿಂದ ಇನ್ನಷ್ಟು ನರಕವಾಗಿದೆ.

ಮಳೆಗಾಲದ ಸಮಯದಲ್ಲಿ ರಸ್ತೆಯು ಕೆಸರುಮಯವಾಗಿ ಗ್ರಾಹಕರು ಕೆಸರು ಗುಂಡಿಯಲ್ಲಿಯೇ ವ್ಯಾಪಾರ ಮಾಡುವಂತಾಗಿದೆ.
ಜನಸಾಮಾನ್ಯರಿಗೆ ವಾರಕ್ಕೊಮ್ಮೆ ಸಂತೆಗೆ ಹೋಗಿ ಬರುವುದೆಂದರೆ ನರಕಕ್ಕೆ ಹೋಗಿ ಬಂದಂತಾಗುತ್ತಿದೆ. ಚರಂಡಿ ತ್ಯಾಜ್ಯದಿಂದಾಗಿ ನೊಣ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದರೊಂದಿಗೆ ರಸ್ತೆಯು ಕಿರಿದಾಗಿದ್ದು, ಓಡಾಡುವುದೇ ದುಸ್ತರವಾಗಿದೆ. ಸಂತೆಯ ಪಕ್ಕದಲ್ಲೇ
ಇರುವ ಮಿನಿ ಬಸ್‌ ನಿಲ್ದಾಣದಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ ಸ್ವಚ್ಛತೆ ಇಲ್ಲ. ಇಲ್ಲಿ ಹಣ ವಸೂಲಿ ಮಾಡುತ್ತಿದ್ದರೂ ಸ್ವತ್ಛತೆ ಮಾತ್ರ ಶೂನ್ಯವಾಗಿದೆ.

ಸ್ಥಳೀಯ ಪರಿಸರ ನೈರ್ಮಲ್ಯ ಹಾಳಾಗಿ ಅಕ್ಕಪಕ್ಕದ ಮನೆಯವರು, ಶಾರದಾ ನಗರದ ಜನರು ವಾಸ ಮಾಡಲಾರದ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಸಂತೆಯ ಪಕ್ಕದಲ್ಲೆ ಮೀನು ಮಾರ್ಕೆಟ್‌ ಕೂಡ ಇರುವುದರಿಂದ ಸಂತೆಗಾಗಿ ಬರುವ ಗ್ರಾಹಕರಿಗೆ ಮಾತ್ರ ನರಕಯಾತನೆಯಾಗಿದೆ.

ಪಟ್ಟಣ ಪಂಚಾಯ್ತಿಗೆ ಚುನಾವಣೆ ನಡೆದು ನೂತನ ಸದಸ್ಯರು ಆಯ್ಕೆಗೊಂಡಿದ್ದಾರೆ. ಆದರೆ ಇನ್ನು ಅಸ್ತಿತ್ವಕ್ಕೆ ಬಂದಿಲ್ಲ. ಈ ಬಗ್ಗೆ ನೂತನ ಸದಸ್ಯರನ್ನು ವಿಚಾರಿಸಿದಾಗ ನಮ್ಮ ಅಧಿ ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂಬ ಸಿದ್ಧ ಉತ್ತರ ದೊರೆಯುತ್ತದೆ.

ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯ್ತಿ ಮೂಲ ಸೌಕರ್ಯ ಕಲ್ಪಿಸಿ ಸಂತೆ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next