ಶೃಂಗೇರಿ: ಕೋವಿಡ್ ಹಂತಹಂತವಾಗಿ ಹರಡುತ್ತಿರುವದರಿಂದ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಸರಕಾರ ವಿಧಿಸಿರುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಪಪಂ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್-19 ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೀಗ ಸರಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಅದರಂತೆ 7 ದಿನ ಸರಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಹಾಗೂ 7 ದಿನ ಮನೆಯಲ್ಲಿ ಕ್ವಾರಂಟೈನ್
ಮಾಡಲಾಗುತ್ತಿದೆ. ಕ್ವಾರಂಟೈನ್ ಮಾಡಿದ ವ್ಯಕ್ತಿಗಳ ಗಂಟಲು ದ್ರವವನ್ನು 5ನೇ ದಿನಕ್ಕೆ ಪ್ರಯೋಗಾಲಯಕ್ಕೆ ಕಳಿಸಿ ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ದೇಶಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದ್ದರೂ ಕೋವಿಡ್ ನಿಂದ ಸಾರ್ವಜನಿಕರ ರಕ್ಷಣೆಗಾಗಿ ಸರಕಾರ ಲಾಕ್‌ಡೌನ್ ಮಾಡಿದೆ. ಇದರಿಂದ ಸಾವಿನ ಪ್ರಕರಣ ಕಡಿಮೆಯಾಗಿದೆ. ಸರಕಾರ ಆರೋಗ್ಯ ಇಲಾಖೆಗೆ ಕೊರೊನಾ ನಿಯಂತ್ರಣಕ್ಕಾಗಿ ಸಾಕಷ್ಟು ಅನುದಾನ ನೀಡುತ್ತಿದೆ. ಕಾಯಿಲೆ ಇನ್ನೂ ಹೆಚ್ಚುತ್ತಿದ್ದು, ಸಾರ್ವಜನಿಕರು ಹೆಚ್ಚು ಜಾಗೂರಕರಾಗಿರಬೇಕು ಎಂದರು.
ಆರೋಗ್ಯ ಇಲಾಖೆ ಡಾ| ಮಂಜುನಾಥ್ ಮಾತನಾಡಿ, ಆಸ್ಪತ್ರೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವನ್ನು ಅನುಸರಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯವಿದೆ. ಔಷಧ ದಾಸ್ತಾನು ಸಾಕಷ್ಟಿದೆ ಎಂದರು. ಆಹಾರ ಇಲಾಖೆಯ ನಾಗೇಶ್ ಮಾತನಾಡಿ, ಬಿಪಿಎಲ್ ಪಡಿತರದಾರರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ವತಿಯಿಂದ ಎರಡು ತಿಂಗಳ ಪಡಿತರ ನೀಡಲಾಗಿದೆ ಎಂದರು.
ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖಾಧಿಕಾರಿ ಮಾತನಾಡಿ, ಗರ್ಭಿಣಿಯರಿಗೆ ಆರೋಗ್ಯ ಸುರಕ್ಷತೆ ಮತ್ತು ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದರು. ವೃತ್ತ ನಿರೀಕ್ಷಕ ಸಿದ್ದರಾಮಯ್ಯ ಮಾತನಾಡಿ, ತಾಲೂಕು ಗಡಿಯಲ್ಲಿ ಎರಡು ತನಿಖಾ ಕೇಂದ್ರವಿದ್ದು, ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ ಎಂದರು.
ಜಿಪಂ ಸದಸ್ಯೆ ಶಿಲಾ ರವಿ ಮಾತನಾಡಿ, ಕ್ವಾರಂಟೈನ್ ಕೇಂದ್ರದಲ್ಲಿ ಸ್ವತ್ಛತೆ ಕೊರತೆ ಇದೆ. ಗ್ರಾಪಂ ಸ್ವತ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದರು. ಶಾಸಕ ಟಿ.ಡಿ.ರಾಜೇಗೌಡ, ಜಿಪಂ ಸದಸ್ಯ ಬಿ.ಶಿವಶಂಕರ್, ತಹಶೀಲ್ದಾರ್ ಅಂಬುಜಾ, ಇಒ ಸುದೀಪ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.