Advertisement
ಕಾರ್ಮಿಕರ ಕೊರತೆ ಸಾಕಷ್ಟಿದ್ದರೂ ರೈತಾಪಿ ಕೆಲಸಗಳನ್ನು ಆಯಾ ಕಾಲದಲ್ಲಿ ಮಾಡಲೇಬೇಕಾದ ಅನಿವಾರ್ಯ ಸ್ಥಿತಿ. ಮೇ ತಿಂಗಳು ಬಂತೆಂದರೆ ಮಲೆನಾಡಿನ ಹಳ್ಳಿಗಳ ಜನರಿಗೆ ಬರಲಿರುವ ಮುಂಗಾರಿಗೆ ಸಜ್ಜಾಗುವ ತರಾತುರಿ. ಶೃಂಗೇರಿ ಪಟ್ಟಣದಿಂದ ಸುಮಾರು 20-25 ಕಿ.ಮೀ ದೂರದಲ್ಲಿರುವ ಉಡ್ತಾಳ್, ದ್ಯಾವಂಟ, ಆವಂಟ ಮುಂತಾದ ಗ್ರಾಮಗಳಿಗೆ ಮಳೆಗಾಲದ ಸಮಯದಲ್ಲಿ ಪಟ್ಟಣಕ್ಕೆ ಬರಲು ಬಹಳ ಶ್ರಮ ಪಡಬೇಕಾಗಿದೆ.
Related Articles
Advertisement
ಕೃಷಿ ಕಾರ್ಯ: ಇನ್ನೇನು ಮಳೆಗಾಲ ಆರಂಭವಾಗುವ ಹಂತದಲ್ಲಿ ರೈತರ ಗದ್ದೆಗಳಿಗೆ ಗೊಬ್ಬರ ಹುಡಿ ಹೂಟಿ ಗೊಬ್ಬರ ಬೀಜ ಬಿತ್ತುವ ಕಾರ್ಯ ಆರಂಭಗೊಳ್ಳಲಿದೆ. ವರ್ಷಪೂರ್ತಿ ಮಾಡುವ ಕೆಲಸ ಒಂದು ಸಣ್ಣ ಲೋಪವಾದರೂ ವರ್ಷವಿಡೀ ಅನುಭವಿಸಬೇಕಾದ ಸಮಸ್ಯೆ. ಆದ್ದರಿಂದ ಮಳೆ ಆರಂಭಕ್ಕೆ ಮೊದಲು ಈ ಎಲ್ಲ ಕೆಲಸಗಳನ್ನು ಮೊದಲು ಮಾಡಿ ಮುಗಿಸಬೇಕಾದ ಅನಿವಾರ್ಯ ಸ್ಥಿತಿ ರೈತರದ್ದು.
ಸೌದೆ ಸಂಗ್ರಹ: ಮಳೆಗಾಲ ಮುಗಿಯುವವರೆಗೂ ಬೇಕಾದ ಎಲ್ಲ ಅಗತ್ಯಗಳ ಜೊತೆಗೆ ಸೌದೆಯ ಅಗತ್ಯವು ಬಹಳವೇ ಇದೆ. ಸಾಮಾನ್ಯವಾಗಿ ತಾಲೂಕಿನ ರೈತರ ಮನೆಗಳಲ್ಲಿ ಅಡಿಗೆ ಮಾಡಲು ಗ್ಯಾಸ್ ಬಳಸುತ್ತಿದ್ದರೂ ಸಹ ಅಡಿಕೆ ಬೇಯಿಸುವುದಕ್ಕೆ ಕಟ್ಟಿಗೆ ಕಡಿಯಲೇಬೇಕಾದ ಸ್ಥಿತಿ. ಕಟ್ಟಿಗೆ ಕಡಿದು ಒಣಗಿಸಿ ಅದನ್ನು ಒಪ್ಪವಾಗಿ ಜೋಡಿಸಿಡುವ ಕಾರ್ಯ ತಾಲೂಕಿನಾದ್ಯಂತ ಭರದಿಂದ ಸಾಗಿದೆ.
ಅಮ್ಮ-ಅಜ್ಜಿಯಂದಿರ ಬಿಡುವಿಲ್ಲದ ಕೆಲಸ: ಮಳೆಗಾಲ ಆರಂಭವಾಗುವ ಮೊದಲು ಮನೆಗೆ ಬೇಕಾಗುವ ದವಸ-ಧಾನ್ಯಗಳನ್ನು ಒಣಗಿಸುವುದು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಇತ್ಯಾದಿಗಳನ್ನು ತಯಾರಿಸಿ ಅದನ್ನು ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯವು ನಡೆಯುತ್ತಿದೆ.
ಈ ವರ್ಷ ಒಳ್ಳೇಯ ಮಾವಿನಮಿಡಿ ಸಿಗುತ್ತಿಲ್ಲ. ಕಳೆದ ತಿಂಗಳಿನಲ್ಲಿ ಜೋರಾಗಿ ಬಂದ ಮಳೆ, ಗಾಳಿ, ಸಿಡಿಲಿನಿಂದಾಗಿ ಮಾವಿನ ಮಿಡಿಗಳು ಕೊಳೆತದ್ದರಿಂದಾಗಿ ಉಪ್ಪಿನಕಾಯಿ ಮಾಡಲು ಕಷ್ಟಸಾಧ್ಯವಗಿದೆ. ಪಕ್ಕದ ತಾಲೂಕುಗಳಾದ ರಿಪ್ಪನಪೇಟೆ, ಬೇಲೂರು ಮುಂತಾದೆಡೆಯಿಂದ ಮಾವಿನಮಿಡಿಗಳನ್ನು ತರಬೇಕಾಗಿದೆ.• ಕೆರೆಮನೆ ಭರತರಾಜ್.