ಶೃಂಗೇರಿ: ಲಾರಿಯಲ್ಲಿ ಗೋವುಗಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿರುವುದನ್ನು ತಡೆದ ಭಜರಂಗದಳ ಕಾರ್ಯಕರ್ತರು ಜಾನುವಾರುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169 ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ತನಿಕೋಡು ಗೇಟ್ ಬಳಿ ಶುಕ್ರವಾರ ಬೆಳಗಿನ ಜಾವ ಕ್ಯಾಂಟರ್‌ನಲ್ಲಿ ಹಸು, ಎತ್ತು ಹಾಗೂ ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಹಿಂದೂಪರ ಸಂಘಟನೆಗಳ
ಕಾರ್ಯಕರ್ತರು ಕ್ಯಾಂಟರ್‌ನ್ನು ಅಡ್ಡಗಟ್ಟಿದ್ದಾರೆ. ಇನ್ನೊಂದೆಡೆ ಶೃಂಗೇರಿ-ಆಗುಂಬೆ ರಸ್ತೆಯ ಕೈಮನೆ ಬಳಿ ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಹಿಂದೂ ಪರ ಸಂಘಟನೆಗಳು ವಶಕ್ಕೆ ಪಡೆದಿವೆ.
ವಾಹನದಲ್ಲಿದ್ದ ಎರಡು ಎತ್ತುಗಳು ಮೃತಪಟ್ಟಿದ್ದು, ನಾಲ್ಕು ಎಮ್ಮೆ ಸಹಿತ 35 ಜಾನುವಾರುಗಳನ್ನು ಎರಡು ಕ್ಯಾಂಟರ್ ನಲ್ಲಿ ತುಂಬಲಾಗಿತ್ತು. ಜಾನುವಾರುಗಳನ್ನು ರಾಣೇಬೆನ್ನೂರಿನಿಂದ ಮಂಗಳೂರು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ:5ಎ ಕಾಲುವೆ ಅನುಷ್ಠಾನಕ್ಕೆ ಧರಣಿ: ಬೀದಿಗಿಳಿದ ರೈತರು, ಮಸ್ಕಿ ಹೆದ್ದಾರಿಗಳೆಲ್ಲಾ ಬಂದ್
ತನಿಕೋಡು ಗೇಟ್ ಬಳಿ ವಶಕ್ಕೆ ಪಡೆಯಲಾದ ಕ್ಯಾಂಟರ್ ಜೊತೆಯಲ್ಲೇ ಎರಡು ಕಾರುಗಳಿದ್ದು, ಲಾರಿ ತಡೆಯುತ್ತಿದ್ದಂತೆ ಇದರಲ್ಲಿದ್ದವರು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಅಬಿದ್ ಎಂಬಾತನಿಗೆ ಗಾಯವಾಗಿದ್ದು, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್‌ನಲ್ಲಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿ ಹಾಗೂ ಶೃಂಗೇರಿ ಭಜರಂಗದಳ ಕಾರ್ಯಕರ್ತರು ಅಕ್ರಮ ಗೋ ಸಾಗಾಟವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.