Advertisement

ಆಧುನಿಕ ಭರಾಟೆ: ನೇಪಥ್ಯಕ್ಕೆ ಸರಿದ ಸೈಕಲ್‌

12:44 PM Mar 01, 2020 | Naveen |

ಶೃಂಗೇರಿ: ಬಡವರ ಪಾಲಿನ ಇಂಧನ ರಹಿತ ವಾಹನ ಸೈಕಲ್‌ ಆಧುನಿಕ ಭರಾಟೆ ನಡುವೆ ನೇಪಥ್ಯಕ್ಕೆ ಸರಿಯುತ್ತಿರುವುದರಿಂದ ಮನುಷ್ಯ ಉತ್ತಮ ವ್ಯಾಯಾಮದಿಂದ ವಿಮುಖವಾಗುವಂತಾಗಿದೆ.

Advertisement

ಇಂದು ಬಹುತೇಕ ಶಾಲಾ ಮಕ್ಕಳಿಗೆ ಸೀಮಿತವಾಗಿರುವ ಸೈಕಲ್‌, ಎರಡು ದಶಕದ ಹಿಂದಿನವರೆಗೂ ತನ್ನ ಪಾರುಪತ್ಯ ಮೆರೆದಿತ್ತು. ಪಟ್ಟಣದಲ್ಲಿ ಸೈಕಲ್‌ ದುರಸ್ತಿಗಾಗಿ ಕನಿಷ್ಠ 8-10 ಸೈಕಲ್‌ ಶಾಪ್‌ ಗಳಿದ್ದವು. ರಿಪೇರಿಯೊಂದಿಗೆ ಸೈಕಲ್‌ ಬಾಡಿಗೆ ನೀಡಿ ಜೀವನ ಸಾಗಿಸುತ್ತಿದ್ದರು. ತಮ್ಮ ದೈನಂದಿನ ಕೆಲಸ, ತಿರುಗಾಟಕ್ಕಾಗಿ ಬಾಡಿಗೆ ಸೈಕಲ್‌ ಪಡೆಯುತ್ತಿದ್ದ ಸಾರ್ವಜನಿಕರು ಗಂಟೆ ಅಥವಾ ದಿನ ಬಾಡಿಗೆ ಲೆಕ್ಕದಲ್ಲಿ ಸೈಕಲ್‌ ಶಾಪ್‌ ಮಾಲಿಕರಿಗೆ ಹಣ ಪಾವತಿಸುತ್ತಿದ್ದರು.

ಬಹು ಉಪಯೋಗಿ ಸೈಕಲ್‌ಗ‌ಳನ್ನು ಕೇವಲ ಸಂಚಾರಕ್ಕಾಗಿ ಮಾತ್ರವಲ್ಲದೇ ಹತ್ತು ಹಲವು ಉಪಯೋಗಕ್ಕಾಗಿ ಬಳಸಲಾಗುತ್ತಿತ್ತು. ಸರಕು, ಸಾಮಾನು, ಕಟ್ಟಿಗೆ ಮತ್ತಿತರ ವಸ್ತುಗಳ ಸಾಗಿಸಲು ಸೈಕಲ್‌ ಉಪಯುಕ್ತವಾಗಿತ್ತು. ಶಾಲೆಯ ಬಳಿ ಕ್ಯಾಂಡಿ ಮಾರಾಟ ಮಾಡುವ ಹುಡುಗರು, ಮೀನು ವ್ಯಾಪಾರಿಗಳು ಸೈಕಲ್‌ ಅನ್ನೇ ಬಳಸಿ ವ್ಯಾಪಾರ ವೃತ್ತಿ ಮಾಡುತ್ತಿದ್ದರು. ಕಟ್ಟಿಗೆ ಮಾರಿ ಜೀವನ ಸಾಗಿಸುತ್ತಿದ್ದವರು ಸೈಕಲ್‌ ಮೇಲೆ ಸೌದೆ ಸಾಗಿಸುತ್ತಿದ್ದರು.

ಅಂಚೆ ಬಟವಾಡೆ ಮಾಡಲು, ಪತ್ರಿಕೆ ವಿತರಿಸಲು ಸೈಕಲ್‌ ವ್ಯಾಪಕವಾಗಿ ಬಳಕೆಯಲ್ಲಿತ್ತು. ಮಲೆನಾಡು ಸೈಕಲ್‌ ಪ್ರಯಾಣಕ್ಕೆ
ಅಷ್ಟೇನು ಸೂಕ್ತವಾಗಿರದ ರಸ್ತೆಗಳಿದ್ದು, ಉಬ್ಬು-ತಗ್ಗು ರಸ್ತೆ ಇರುವುದರಿಂದ ಎಲ್ಲೆಡೆ ಕುಳಿತುಕೊಂಡು ಹೋಗಲು ಸಾಧ್ಯವಿರುತ್ತಿರಲಿಲ್ಲ. ಆದರೂ ಪಟ್ಟಣ ಹಾಗೂ ಗ್ರಾಮೀಣ ಜನರು
ಸೈಕಲ್‌ ನೆಚ್ಚಿಕೊಂಡು ತಮ್ಮ ಸಂಚಾರ ಕೈಗೊಳ್ಳುತ್ತಿದ್ದರು. 20-30 ಕಿಮೀ ವರೆಗೂ ಸೈಕಲ್‌ ಮೂಲಕ ಆರಾಮವಾಗಿ ಸಂಚರಿಸುತ್ತಿದ್ದರು. 1990ರ ನಂತರ ಬೈಕ್‌ ಉದ್ಯಮ ಬೆಳೆಯುತ್ತಿದ್ದಂತೆ, ಹಂತಹಂತವಾಗಿ ಇಳಿಕೆ ಕಂಡು ಬಂದ ಸೈಕಲ್‌ ಪ್ರಭಾವ ಇದೀಗ ಬಹುತೇಕ ನಾಪತ್ತೆಯಾಗುವ ಹಂತ ತಲುಪಿದೆ. ತಾಲೂಕಿನಲ್ಲಿ ಈಗಲೂ ಸೈಕಲ್‌ ಬಳಸುವ ಬೆರಣಿಕೆ ಸಂಖ್ಯೆ ಜನರಿದ್ದರೂ, ಯುವಕರು ಸೈಕಲ್‌ನಿಂದ ದೂರವಾಗಿದ್ದಾರೆ.

ವಿದ್ಯಾರ್ಥಿಗಳು ಸೈಕಲ್‌ನಿಂದ ದೂರ: ಸರಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರ ಉಚಿತವಾಗಿ ಸೈಕಲ್‌ ನೀಡುತ್ತಿದ್ದರೂ, ಶಾಲೆಗೆ ಸೈಕಲ್‌ ಮೇಲೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ. ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಟೋ, ಬಸ್‌ ಅಥವಾ ಬೈಕ್‌ ಬಳಸಿ ಶಾಲೆಗೆ ಬರುತ್ತಾರೆ. ಇದರಿಂದ ಸರಕಾರ ಸೈಕಲ್‌ ನೀಡಿದ್ದರೂ ಅದರ ಬಳಕೆ ತೀರಾ ಕಡಿಮೆಯಾಗಿದೆ. ಕಳಪೆ ಸೈಕಲ್‌-ಸರಕಾರ ನೀಡುತ್ತಿರುವ ಸೈಕಲ್‌ ತೀರಾ ಕಳಪೆ ಮಟ್ಟದ್ದಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ವಿತರಣೆ ಆದ ತಕ್ಷಣದಿಂದ ರಿಪೇರಿಗೆ ಬರುವ ಸರಕಾರದ ಸೈಕಲ್‌ ಒಂದೇ ವರ್ಷದಲ್ಲಿ ಗುಜರಿ ಸೇರುತ್ತಿವೆ. ಸೈಕಲ್‌ ಬಳಸುತ್ತಿದ್ದ ಜಾಗಕ್ಕೆ ದ್ವಿಚಕ್ರ ವಾಹನ ಸೇರ್ಪಡೆಯಾಗಿದೆ.ಗೇರ್‌ ಸೈಕಲ್‌ಗ‌ಳು ಬಂದಿದ್ದರೂ, ಅವುಗಳ ಬಳಕೆಯೂ ಕಡಿಮೆಯಾಗಿದೆ.

Advertisement

ಕಳೆದ 30 ವರ್ಷದಿಂದ ಪಟ್ಟಣದಲ್ಲಿ ಸೈಕಲ್‌ ಶಾಪ್‌ ಹೊಂದಿದ್ದು, ತಾಲೂಕಿನಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ 8-10 ಜನರು ಸೈಕಲ್‌ ಬಳಸುವವರು ಇದ್ದಾರೆ. ಉತ್ತಮ ವ್ಯಾಯಾಮ ನೀಡುವ ಸೈಕಲ್‌ನಿಂದ ಜನರು ದೂರವಾಗುತ್ತಿದ್ದಾರೆ. ಗೇರ್‌ ಸೈಕಲ್‌ಗ‌ಳು ಈಗ ಜನಪ್ರೀಯವಾಗಿದ್ದರೂ,ಆರೋಗ್ಯ ದೃಷ್ಟಿಯಿಂದ ಸಾಮಾನ್ಯ ಸೈಕಲ್‌ ಬಳಸಬೇಕು. ಸರಕಾರ ನೀಡುವ ಸೈಕಲ್‌ ಬೇಗ ರಿಪೇರಿಗೆ ಬರುತ್ತಿವೆ.
ಖಲೀಲ್‌ ರಹೆಮಾನ್‌,
ಸೈಕಲ್‌ ಶಾಪ್‌ ಮಾಲಿಕ, ಭಾರತೀ ಬೀದಿ

ಸರಕಾರ ಎಂಟನೇ ತರಗತಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ಸೈಕಲ್‌ ಈ ವರ್ಷ 230ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳು ನಂತರ ಸೈಕಲ್‌ ಬಳಸುತ್ತಿಲ್ಲ. ಶಾಲೆಗೆ ಬೇರೆ ವಾಹನದಲ್ಲಿ ಬರುತ್ತಿದ್ದಾರೆ.
ಎನ್‌.ಜಿ.ರಾಘವೇಂದ್ರ, ಸಮನ್ವಯಾಧಿಕಾರಿ, ಕ್ಷೇತ್ರ
ಸಂಪನ್ಮೂಲ ಕೇಂದ್ರ, ಶೃಂಗೇರಿ

ರಮೇಶ್‌ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next