ಶ್ರೀನಗರ : ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲ ಅವರು ತಮ್ಮ ನಿಕಟ ಪ್ರತಿಸ್ಫರ್ಧಿ ಪಿಡಿಪಿಯ ನಜೀರ್ ಖಾನ್ ಅವರನ್ನು 10,000ಕ್ಕೂ ಅಧಿಕ ಮತಗಳಿಂದ ಭರ್ಜರಿಯಾಗಿ ಸೋಲಿಸಿ ಸುಲಭದ ಜಯವನ್ನು ಸಾಧಿಸಿದ್ದಾರೆ ಎಂದು ಟಿವಿ ವರದಿಗಳು ತಿಳಿಸಿವೆ.
ಮಧ್ಯಾಹ್ನ 3.40ರ ಹೊತ್ತಿಗೆ ಅಬ್ದುಲ್ಲ ಅವರು 10,208 ಮತಗಳಿಂದ ಮುಂದಿದ್ದರು. ಅಬ್ದುಲ್ಲಾ ಅವರ ವಿಜಯವನ್ನು ಚುನಾವಣಾ ಅಧಿಕಾರಿಗಳನ್ನು ಇಷ್ಟರಲ್ಲೇ ಅಧಿಕೃತವಾಗಿ ಘೋಷಿಸಲಿದ್ದಾರೆ.
ಮತ ಎಣಿಕೆ ಹಾಲ್ ಗೆ ಮಾಧ್ಯಮದವರಿಗೆ ಪ್ರವೇಶಾವಕಾಶ ನೀಡಿಲ್ಲ. ಮತ ಎಣಿಕೆ ಕೇಂದ್ರದ ಹೊರಗೆ ಕಾಯುತ್ತಿರುವ ಪತ್ರಕರ್ತರೊಂದಿಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ.
ಕಳೆದ ಗುರುವಾರ ಶ್ರೀನಗರ ಲೋಕಸಭಾ ಕ್ಷೇತ್ರದ 38 ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಕೇವಲ ಶೇ.7 ಮತದಾರರು ಮಾತ್ರವೇ ಮುಂದಾಗಿದ್ದರು. ಮರು ಮತದಾನದಲ್ಲಿ 35,169 ಮತದಾರರ ಪೈಕಿ ಕೇವಲ 709 ಮಂದಿ ಮತದಾರರು ಮತ್ತು ತಮ್ಮ ಮತ ಚಲಾಯಿಸಿದ್ದರು.
ಎಪ್ರಿಲ್ 9ರಂದು ಭದ್ರತಾ ಪಡೆಗಳೊಂದಿಗೆ ಕಾಳಗದಲ್ಲಿ ಎಂಟು ಮಂದಿ ಪೌರ ಪ್ರತಿಭಟನಕಾರರು ಹತರಾಗಿದ್ದರು. ಕಾಶ್ಮೀರದ ಪ್ರತ್ಯೇಕತಾವಾದಿಗಳು ಈ ಚುನಾವಣೆಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು.