Advertisement

ಕೊಲ್ಲೂರಿಗೆ ಲಂಕಾ ಪ್ರಧಾನಿ ಭೇಟಿ; ನವಚಂಡಿಯಾಗದಲ್ಲಿ ಭಾಗಿ

09:25 AM Jul 28, 2019 | mahesh |

ಕೊಲ್ಲೂರು/ಕುಂದಾಪುರ: ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ್‌ ಸಿಂಘೆ ಅವರು ಶುಕ್ರವಾರ ಕೊಲ್ಲೂರು ದೇಗುಲಕ್ಕೆ ಆಗಮಿಸಿ, ಶ್ರೀದೇವಿಯ ದರ್ಶನ ಪಡೆದು, ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಝೀರೋ ಟ್ರಾಫಿಕ್‌ನಲ್ಲಿ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಸುಮಾರು 11.15ಕ್ಕೆ ಅವರು ಆಗಮಿಸಿದರು.

Advertisement

ಬಿಗಿ ಬಂದೋಬಸ್ತ್
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಸ್‌ಪಿ ನಿಶಾ ಜೇಮ್ಸ್‌ ನೇತೃತ್ವ ದಲ್ಲಿ ದೇವಸ್ಥಾನದ ಒಳ – ಹೊರ ಭಾಗದಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ದೇಗುಲದ ಆಡಳಿತ ಮಂಡಳಿ ಅಧಿಕಾರಿ, ಸಿಬಂದಿ ಸಹಿತ ಅರ್ಚಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.

ಎರಡನೇ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ವಿಕ್ರಮ ಸಿಂಘೆ ಅವರನ್ನು ಆಡಳಿತ ಮಂಡಳಿ, ಜಿಲ್ಲಾಡಳಿತದ ವತಿಯಿಂದ ಸಮ್ಮಾನಿಸಲಾಯಿತು. 2017ರ ನವೆಂಬರ್‌ನಲ್ಲಿ ಅವರ ಮೊದಲ ಭೇಟಿ ನಡೆದಿತ್ತು. ಅರ್ಚಕರಾದ ಕೆ.ಎನ್‌. ನರಸಿಂಹ ಅಡಿಗ, ಶ್ರೀಧರ್‌ ಅಡಿಗ, ಕೆ.ಎನ್‌. ಗೋವಿಂದ ಅಡಿಗ, ನಿತ್ಯಾನಂದ ಅಡಿಗ, ರಾಮಚಂದ್ರ ಅಡಿಗ, ಸುಬ್ರಹ್ಮಣ್ಯ ಅಡಿಗ ಉಪಸ್ಥಿತರಿದ್ದು, ಪ್ರಧಾನಿ ದಂಪತಿಗೆ ಮಹಾಪೂಜೆಯ ತೀರ್ಥ -ಪ್ರಸಾದ ನೀಡಿದರು.

ವೀರಭದ್ರ ದರ್ಶನ
ಸಂಪ್ರ ಗಣಪತಿ ದೇವರ ದರ್ಶನದ ಅನಂತರ ಶ್ರೀದೇವಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಪ್ರಧಾನಿಯವರು ವೀರಭದ್ರ ದೇವರ ದರ್ಶನ ಪಡೆದರು. ಈ ಸಂದರ್ಭ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಆಗಮಿಸಿ, ಬಳಿಕ ಬೆಂಗಳೂರಿಗೆ ತೆರಳಿದರು.

ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಚ್‌. ಹಾಲಪ್ಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ, ಸಮಿತಿ ಉಪ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಸಮಿತಿ ಸದಸ್ಯರಾದ ರಮೇಶ್‌ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ರಾಜೇಶ ಕಾರಂತ, ನರಸಿಂಹ ಹಳಗೇರಿ, ಅಭಿಲಾಷ್‌, ಅಂಬಿಕಾ ದೇವಾಡಿಗ, ಜಯಂತಿ ಪೂಜಾರಿ ಉಪಸ್ಥಿತರಿದ್ದರು.

Advertisement

ದೇವಿಯ ಪ್ರಸಾದ
ಯಾಗದ ಪೂರ್ಣಾ ಹುತಿಯಲ್ಲಿ ಭಾಗವಹಿಸಿದ ಬಳಿಕ ಶ್ರೀಲಂಕಾ ಪ್ರಧಾನಿ ಆರ್‌.ಎನ್‌. ಶೆಟ್ಟಿ ಅತಿಥಿ ಗೃಹಕ್ಕೆ ತೆರಳಿ ದೇವಿಯ ಅನ್ನಪ್ರಸಾದ ಸ್ವೀಕರಿಸಿದರು. ಅಪರಾಹ್ನ 2.50ರ ಸುಮಾರಿಗೆ ಅರೆಶಿರೂರು ಹೆಲಿ ಪ್ಯಾಡಿನಿಂದ ಹೆಲಿಕಾಪ್ಟರ್‌ ಮೂಲಕ ಮಂಗಳೂರಿಗೆ ಪ್ರಯಾಣಿಸಿದರು.

ಏಳು ಮಂದಿ ಆಗಮನ
ಪ್ರಧಾನಿ ಜತೆಗೆ ಪತ್ನಿ ಪ್ರೊ| ಮೈತ್ರಿ ವಿಕ್ರಮ ಸಿಂಘೆ, ಅಶೋಕ ಯತಿಗಾಮ್ಮನಾ, ಸಾರ್ಜೆಂಟ್‌ ಸುನಿಲ್‌ ರತ್ನ ನಾಯಕೆ, ಡೆಪ್ಯುಟಿ ಹೈಕಮಿಷನರ್‌ ಜಿ. ಸದಾಶಿವಂ, ವಿ. ಕೃಷ್ಣಮೂರ್ತಿ, ಡಾ| ಸಂಕ ಗುಣವರ್ಧನೆ ಆಗಮಿಸಿದ್ದರು.

ಏನು ಸಂಕಲ್ಪ?
ಗುರುವಾರ ರಾತ್ರಿಯಿಂದ ಲಂಕಾ ಪ್ರಧಾನಿ ಹೆಸರಲ್ಲಿ 10 ಪಾರಾಯಣ ಮಾಡಿ, ಧಾರ್ಮಿಕ ವಿಧಿವಿಧಾನ ನೆರವೇರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ನವ ಚಂಡಿಯಾಗ ಆರಂಭಗೊಂಡಿದ್ದು, ಆರು ಮಂದಿ ಋತ್ವಿಜರ ಸಮ್ಮುಖದಲ್ಲಿ ನಡೆದ ಯಾಗವು ಮಧ್ಯಾಹ್ನ 12ಕ್ಕೆ ಸಮಾಪ್ತಿಗೊಂಡಿತು. ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಅವರ ಸಲಹೆಯಂತೆ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಶ್ರೀಲಂಕಾ ಜನರ ಶ್ರೇಯಸ್ಸು ಮತ್ತು ವೈಯಕ್ತಿಕವಾಗಿ ತನಗೆ ರಾಜಕೀಯ ರಂಗದಲ್ಲಿ ಕುಂದುಕೊರತೆಯಾಗದಿರಲಿ ಎನ್ನುವ ಸಂಕಲ್ಪ ಮಾಡಿದ್ದರು. ಈ ಹಿಂದಿನ ಬಾರಿ ಭೇಟಿ ನೀಡಿದಾಗ ಮನಸ್ಸಿನಲ್ಲಿ ಏನೋ ಸಂಕಲ್ಪ ಮಾಡಿದ್ದು, ಅದು ಈಡೇರಿದರೆ ಬರುವುದಾಗಿ ತಿಳಿಸಿದ್ದರು. ಅದರಂತೆ ಬಂದಿದ್ದಾರೆ ಎಂದು ಅರ್ಚಕರಾದ ಕೆ.ಎನ್‌. ನರಸಿಂಹ ಅಡಿಗ ತಿಳಿಸಿದ್ದಾರೆ.

ಕೊಲ್ಲೂರು – ಲಂಕಾ ನಂಟು
ಕೊಲ್ಲೂರಿಗೂ ಶ್ರೀಲಂಕೆಗೂ ಹತ್ತಿರದ ನಂಟಿದ್ದು, ಅಷ್ಟ ದಶ ಮುಕ್ತಿ ಪೀಠಗಳಲ್ಲಿ ಇಲ್ಲಿನ ಮೂಕಾಂಬಿಕೆಯ ಸನ್ನಿಧಾನ ಮತ್ತು ಲಂಕೆಯಲ್ಲಿರುವ ಲಂಕಾಯಂ ಶಾಂಕರಿ ದೇವಿಯ ಸಾನ್ನಿಧ್ಯಗಳು ಸೇರಿವೆ. ಇದಲ್ಲದೆ ರಾಮಾಯಣ ಯುದ್ಧ ಸಂದರ್ಭ ಗಾಯಗೊಂಡ ಲಕ್ಷ್ಮಣನಿಗಾಗಿ ಹನುಮಂತ ಚಂದ್ರಗಿರಿ ಬೆಟ್ಟವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅದರ ಒಂದು ಭಾಗ ಕೊಡಚಾದ್ರಿಯಲ್ಲಿ ಬಿದ್ದಿರುವುದಾಗಿ ಪುರಾಣದಲ್ಲಿದ್ದು, ಈ ಹಿನ್ನೆಲೆಯಲ್ಲಿಯೂ ಲಂಕಾ ಪ್ರಧಾನಿ ಭೇಟಿ ನೀಡಿರಬಹುದು ಎನ್ನುವುದಾಗಿ ಕೊಲ್ಲೂರಿನ ಅರ್ಚಕರು ತಿಳಿಸಿದ್ದಾರೆ.

ಇಂದು ಕುಮಾರಮಂಗಲಕ್ಕೆ
ಕುಂಬಳೆ: ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಅವರು ಜು.27ರಂದು ಕುಂಬಳೆ ನೀರ್ಚಾಲು ಬಳಿಯ ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಬೆಳಗ್ಗೆ 7ರಿಂದ ಪ್ರಧಾನಿ ಮರಳುವ ತನಕ ಭಕ್ತರಿಗೆ ಮತ್ತು ಪತ್ರಕರ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.
ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ವಾರ್ತಾ ಇಲಾಖೆಯ ಅಧಿಕಾರಿ ಪತ್ರಕರ್ತರಿಗೆ ಪಾಸ್‌ ನೀಡುವ ಪ್ರಕ್ರಿಯೆಗೆ ಮುಂದಾಗಿದ್ದರೂ ಪ್ರಧಾನಿಯವರ ಖಾಸಗಿ ಕಾರ್ಯಕ್ರಮವಾದ ಕಾರಣ ಅವಕಾಶವಿಲ್ಲ ಎಂಬುದಾಗಿ ಸಂದೇಶ ಬಂದಿರುವುದರಿಂದ ಪ್ರವೇಶ ನಿರಾಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next