Advertisement

ಶ್ರೀಲಂಕಾ ನೆರವಿಗೆ ಇಡೀ ಜಗತ್ತೇ ಒಟ್ಟಾಗಿ ಬರಬೇಕಿದೆ

11:51 PM May 11, 2022 | Team Udayavani |

ತೀರಾ ಆರ್ಥಿಕ ಸಂಕಷ್ಟದಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾವೀಗ ಆಂತರಿಕ ಘರ್ಷಣೆಗೂ ಸಾಕ್ಷಿಯಾಗುತ್ತಿದೆ. ಎಲ್‌ಟಿಟಿಇ ಪ್ರಭಾಕರನ್‌ ಕಾಲದಿಂದಲೂ ಭಾರತದ ನೆರೆಯಲ್ಲಿರುವ ಈ ಪುಟ್ಟ ದ್ವೀಪ ಒಂದಲ್ಲ ಒಂದು ಇಂಥ ಆಂತರಿಕ ಸಂಘರ್ಷಗಳನ್ನು ನೋಡುತ್ತಲೇ ಬಂದಿದೆ. ಒಂದು ಅಂತ್ಯವಾಯಿತು ಎಂದುಕೊಳ್ಳುತ್ತಿರುವಾಗಲೇ ಮತ್ತೂಂದು ಸಂಘರ್ಷ ಶುರುವಾಗಿರುತ್ತದೆ.

Advertisement

2009ರಲ್ಲಿನ ಈಸ್ಟರ್‌ ಸಂಡೇ ಚರ್ಚ್‌ ಸ್ಫೋಟದ ವೇಳೆಯಲ್ಲಿ ನಾಗರಿಕ ಸಮರವಾಗಿದ್ದು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಲಂಕಾ ಶಾಂತಿಯುತವಾಗಿಯೇ ಇತ್ತು. ಆದರೆ ಈಚೆಗೆ ಕಾಣಿಸಿಕೊಂಡಿರುವ ಆರ್ಥಿಕ ಬಿಕ್ಕಟ್ಟು, ಮತ್ತೆ ಅದೇ ನಾಗರಿಕ ಸಮರಕ್ಕೆ ಕಾರಣವಾಗಿದೆ ಎಂಬುದು ದುರ್ದೈವದ ಸಂಗತಿ.

ಸದ್ಯ ಶ್ರೀಲಂಕಾ 5 ಬಿಲಿಯನ್‌ ಡಾಲರ್‌ ಸಾಲದ ಸುಳಿಗೆ ಸಿಲುಕಿದೆ. ವಿಶೇಷ ಎಂದರೆ ಚೀನದ ಸಾಲದ ಸುಳಿಗೆ ಸಿಲುಕಿ ನಷ್ಟಕ್ಕೀಡಾಗಿರುವ ದೇಶಗಳಲ್ಲಿ ಲಂಕಾವೂ ಒಂದು. ಶ್ರೀಲಂಕಾದ ಜತೆಗೆ ನೇಪಾಲ, ಪಾಕಿಸ್ಥಾನ ಕೂಡ ಆರ್ಥಿಕ ನಷ್ಟಕ್ಕೆ ಸಿಲುಕಿ ಏನೂ ಮಾಡಲಾರದ ಸ್ಥಿತಿಗೆ ತಲುಪಿವೆ. ಸದ್ಯದಲ್ಲೇ ಈ ದೇಶಗಳಲ್ಲಿಯೂ ಲಂಕಾದಲ್ಲಿ ಆಗುತ್ತಿರುವಂಥ ಬೆಳವಣಿಗೆಗಳು ಕಾಣಿಸಿಕೊಂಡರೆ ಅಚ್ಚರಿಯೇನಲ್ಲ.

ಪ್ರಸ್ತುತದಲ್ಲಿ ಮಾ.30ರಂದು ಶ್ರೀಲಂಕಾದಲ್ಲಿ ಆರಂಭವಾಗಿರುವ ಘರ್ಷಣೆ ಇನ್ನೂ ನಿಲ್ಲುವ ಹಾಗೆ ಕಾಣಿಸುತ್ತಲೇ ಇಲ್ಲ. ಸದ್ಯ ಇಡೀ ಆಡಳಿತ ಮಹೀಂದಾ ರಾಜಪಕ್ಸೆ ಕುಟುಂಬದ ಹಿಡಿತದಲ್ಲೇ ಇದೆ. ಅಧ್ಯಕ್ಷ ಕೂಡ ಮಹೀಂದಾ ರಾಜಪಕ್ಸೆ ಅವರ ಸಹೋದರ. ಇತ್ತೀಚೆಗೆ ಪ್ರಧಾನಿ ಸ್ಥಾನಕ್ಕೆ ಮಹೀಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದರೂ ಹಿಂಸಾಚಾರ ನಿಂತಿಲ್ಲ. ಅಷ್ಟೇ ಅಲ್ಲ, ರಾಜಪಕ್ಸೆ ಸಂಪುಟದಲ್ಲೂ ಕುಟುಂಬದವರೇ ಹೆಚ್ಚಿನ ಜಾಗ ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿನ ಕುಟುಂಬ ರಾಜಕಾರಣ, ಒಂದು ರೀತಿಯಲ್ಲಿ  ಶ್ರೀಲಂಕಾ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.

ಲಂಕಾದ ಸ್ಥಿತಿ ಹೇಗಿದೆ ಎಂದರೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂಥ ಸ್ಥಿತಿ ಎದುರಾಗಿದೆ. ಹಣದುಬ್ಬರ ಆಗಸ ಮುಟ್ಟಿ ಎಷ್ಟೋ ದಿನಗಳಾಗಿವೆ. ದಿನನಿತ್ಯ ಬಳಕೆ ಮಾಡುವಂಥ ವಸ್ತುಗಳ ದರ ಕೈಗೆಟುಕದ ಮಟ್ಟಕ್ಕೆ ತಲುಪಿಯಾಗಿದೆ. ಜನರ ಬೇಡಿಕೆಗೆ ತಕ್ಕಂತೆ, ವಸ್ತುಗಳನ್ನು ಪೂರೈಸಲಾಗದೆ ಸರಕಾರ ಇಕ್ಕಟ್ಟಿಗೆ ಸಿಲುಕಿದೆ. ಈ ಪ್ರಕ್ರಿಯೆಯಿಂದಾಗಿಯೇ ಹಣದುಬ್ಬರ ಗಗನಮುಖೀಯಾಗಿದೆ ಎಂಬುದು ಸತ್ಯದ ಮಾತು.

Advertisement

ದೇಶದಲ್ಲಿ ಹಣದುಬ್ಬರವೂ ಸೇರಿದಂತೆ ಸಾಲದ ಪ್ರಮಾಣ ಹೆಚ್ಚಾಗಲು ರಾಜಪಕ್ಸ ಕುಟುಂಬದ ಆಡಳಿತವೇ ಕಾರಣ ಎಂಬ ಆರೋಪ ಅಲ್ಲಿನ

ವಿಪಕ್ಷಗಳದ್ದು ಮತ್ತು ಜನರದ್ದು. ಹೀಗಾಗಿಯೇ ಇಡೀ ಸರಕಾರವೇ ಹೋಗಲಿ ಎಂಬ ಆಗ್ರಹದಿಂದ ಮಾ.30ರಿಂದಲೂ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯ ಇಡೀ ದೇಶ ಅರಾಜಕತೆಯಲ್ಲಿ ಬೆಂದು ಹೋಗುತ್ತಿದೆ. ರಾಜಪಕ್ಸ ಕುಟುಂಬ ಮತ್ತು ಅವರ ಬೆಂಬಲಿಗರಿಗೆ ಸೇರಿದ ಆಸ್ತಿಪಾಸ್ತಿಯನ್ನು ಬೆಂಕಿ ಹಚ್ಚಿ ನಾಶ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಸರಕಾರವೂ ಸಾರ್ವಜನಿಕ ಆಸ್ತಿ ನಷ್ಟವುಂಟು ಮಾಡುವವರ ಮೇಲೆ ಕಂಡಲ್ಲಿ ಗುಂಡು ಹಾರಿಸಲು ಆದೇಶ ನೀಡಿ, ತನ್ನದೇ ನಾಗರಿಕರನ್ನು ಕೊಲ್ಲಲು ಸೂಚಿಸಿದೆ.

ಸರಕಾರವೇ ತನ್ನ ನಾಗರಿಕರ ಹತ್ಯೆಗೆ ಸೂಚನೆ ನೀಡುವುದು ಯಾವುದೇ ದೇಶದ ಅರಾಜಕತೆಯ ಸಂಕೇತ. ಹಾಗೆಯೇ ಇಡೀ ಜಗತ್ತು ಈ ಪುಟ್ಟ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡದೆ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು. ಈ ದೇಶ ಸರಿಯಾದ ಸ್ಥಿತಿಗೆ ಬರಲು ಸಹಾಯ ಮಾಡಬೇಕು. ಆಗ ಮಾತ್ರ ಅಲ್ಲಿ ಶಾಂತಿ ನೆಲೆಸಲು ಸಾಧ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next