Advertisement
“ನಮ್ಮೂರಲ್ಲೂ ಅಷ್ಟೇ… ರೋಡ್ ಮಧ್ಯೆ, ಅಕ್ಕಪಕ್ಕದಲ್ಲಿಯೇ ಟ್ರಾಫಿಕ್ ಪೊಲೀಸ್ರು ನಿಂತಿರ್ತಾರೆ. ಒಂದ್ ಪೈಸಾ ಲಂಚ ತಗೊಳ್ಳಲ್ಲ’ ಎನ್ನುವುದು “ಅಮೆರಿಕ ಅಮೆರಿಕ’ ಸಿನಿಮಾದ ಒಂದು ತಮಾಷೆ ಸಂಭಾಷಣೆಯ ಸಾಲು. ನಾಯಕ ತನ್ನ ನೆಲದ ಸಂಸ್ಕೃತಿಯನ್ನು ಪರಿಚಯಿಸುತ್ತಾ, ರಸ್ತೆ ನಡುವೆ ಎದುರಾದ ದನಕರುಗಳ ಹಿಂಡನ್ನು ಉದ್ದೇಶಿಸಿ ಹಾಗೆ ನಗೆ ಉಕ್ಕಿಸುತ್ತಾನೆ. ಇನ್ನಾéವುದೋ ಚಿತ್ರದಲ್ಲಿ, ಕಾರಿನಲ್ಲಿ ಬಂದ ಅಪರಿಚಿತನಿಗೆ, ಊರಿನ ಹಾದಿ ಹೇಳುವುದು ಅಲ್ಲಿನ ಗೋಪಾಲಕ… ಇಂದಿನ ಸಿನಿಮಾಗಳಲ್ಲಿ ಇವೆಲ್ಲ ದೃಶ್ಯಗಳೂ ಕಣ್ಮರೆ. ಇಂದು ಆ ಪ್ರಮಾಣದಲ್ಲಿ ಗೋವುಗಳೂ ಇಲ್ಲ, ಅದನ್ನು ಕಾಯುವ ಪಾಲಕ ಹುಡುಗರೂ ಕಣ್ಣಿಗೆ ಬೀಳುವುದಿಲ್ಲ.“ಧರಣಿ ಮಂಡಲ ಮಧ್ಯದೊಳಗೆ… ಎಳೆಯ ಮಾವಿನ ಮರದ ಕೆಳಗೆ…’- ಎನ್ನುತ್ತಾ “ಪುಣ್ಯಕೋಟಿ’ಯ ಹಾಡನ್ನು ಕೋರಸ್‌ನೊಂದಿಗೆ ಹಾಡುವಾಗ, ಅಂದಿನ ಮಕ್ಕಳ ಕಣ್ಣೆದುರು, ಕಾಡಿನ ಚಿತ್ರಗಳು ಮೂಡುತ್ತಿದ್ದವು. ಶಾಲೆಯಿಂದ ಮನೆಗೆ ಬಂದಾದ ಮೇಲೂ, ಊಟದ ಹೊತ್ತಲ್ಲೂ ಅದೇ ಹಾಡು. ನಿದ್ದೆಗಣ್ಣಲ್ಲಿ ಅದೇ ಹುಲಿಯ ಚಿತ್ರ ಕನಸಿನಲ್ಲಿ ಮೂಡಿದಾಗ, ಅಮ್ಮನನ್ನು ತಬ್ಬಿಕೊಂಡ ಬೆಚ್ಚಗಿನ ನೆನಪೆಲ್ಲ, ನಮ್ಮೊಳಗಿನ ಹಳೇ ಕ್ಯಾಸೆಟ್ಟಿನಲ್ಲಿ ಅವಿತಂತೆ ತೋರುತ್ತಿದೆ.
Related Articles
Advertisement
ಈ ಕೆಲಸಕ್ಕೆ ಆತನಿಗೆ ವಾರ್ಷಿಕವಾಗಿ ಐವತ್ತೋ, ನೂರು ರೂಪಾಯಿ ಸಿಗುತ್ತಿತ್ತಷ್ಟೇ. ಇಂತಿಷ್ಟು ಅಂತೆಳಿ ಭತ್ತ ಕೊಡುತ್ತಿದ್ದರು. ಆಗಿನ ಗೋಪಾಲಕರು, ಹಸುಗಳಿಗೆ ಗಂಗೆ, ಗೌರಿ, ತುಂಗೆ, ಭದ್ರೆ ಎಂದು ಕರೆಯುತ್ತಿದ್ದರೆ, ಇಂದಿನ ಗೋಪಾಲಕ(ಕಾಳಿಂಗ)ರು ಗಿಡ್ಡಿ, ಕೌಲಿ, ಹೆಂಡಿ, ಕೆಂಪಿ, ಬೋಳಿ- ಹೀಗೆ ಅವರವರ ಭಾವನೆಗಳಿಗೆ ತಕ್ಕಂತೆ ಹೆಸರಿಡುತ್ತಾರೆ. ಆಗ ದನಗಾವಲು ಮಾಡಿದರೆ, ದಾರಿದ್ರ - ಗ್ರಹಚಾರದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಕೆಲವರಲ್ಲಿತ್ತು.
ಜಗತ್ತಿಗೆ ಗೀತಾಮೃತವನ್ನು ಬೋಧಿಸಿದ ಶ್ರೀಕೃಷ್ಣನ ಇಷ್ಟದ ವೃತ್ತಿ, ಗೋಪಾಲನೆ. ಕೃಷ್ಣನ ಹಾದಿಯಲ್ಲೇ ನಂಬಿಕೆ ಇಟ್ಟ ಅನೇಕರು, ಅಂದು ಅದರಲ್ಲಿಯೇ ಬದುಕನ್ನು ಕಂಡುಕೊಂಡಿದ್ದರು. ಕೃಷ್ಣಾಷ್ಟಮಿ ವೇಳೆ ಅವರಿಗೆ ವಿಶೇಷ ಆದರ ಸಿಗುತ್ತಿತ್ತು. ಆದರೆ, ಈಗ ದನಕಾಯುವ ಕುಲಕಸುಬನ್ನು ಒಪ್ಪಿಕೊಳ್ಳುವವರು ಬಹಳ ಅಪರೂಪ. ಹಾಗೆ ಒಪ್ಪಿಕೊಂಡರೂ ಅವರಿಗೆ 8-10 ಜಾನುವಾರುಗಳೂ ಸಿಗುತ್ತಿಲ್ಲ. ಎಲ್ಲ ಕಡೆ ಬೇಲಿ. ಗೋಮಾಳಗಳೇ ಕಾಣಿಸುತ್ತಿಲ್ಲ ಎನ್ನುವಂಥ ಸ್ಥಿತಿ.
ದನಗಾವಲು ನಮ್ಮ ಸಂಸ್ಕೃತಿಯಿಂದ ಹೀಗೆ ನಿಧಾನಕ್ಕೆ ಮರೆಯಾಗುತ್ತಿದೆ. ಹಳ್ಳಿ ಮನಸ್ಸುಗಳ ಅಮೂಲ್ಯ ನೆನಪೊಂದು ಕರಗಿದಂತೆ ಭಾಸಗೊಳ್ಳುತ್ತಿದೆ. ಆದರೂ ದನ ಕಾಯುವ ವೃತ್ತಿ ಈಗಲೂ ಶಾಲಾ ಶಿಕ್ಷಕರ ನಾಲಿಗೆಯ ಮೇಲೆ ಮಾತ್ರ ಇದ್ದೇ ಇದೆ. ನಿಧಾನ ಕಲಿಕೆಯ ಮಕ್ಕಳಿಗೆ ಇಂದೂ “ದನ ಕಾಯಲು ಹೋಗು…’ ಎಂದೇ ಅವರು ಬಯ್ಯುತ್ತಾರೆ!
– ಟಿ. ಶಿವಕುಮಾರ್