Advertisement

ಅಪರೂಪದ ಪ್ರಸಂಗ ಶ್ರೀಕೃಷ್ಣ ತುಲಾಭಾರ

11:19 AM Mar 06, 2020 | mahesh |

ಹನುಮಗಿರಿ ಮೇಳದವರು ಮೂಡಬಿದಿರೆಯ ಅಲಂಗಾರಿನಲ್ಲಿ ಶಿವರಾತ್ರಿ ಪ್ರಯುಕ್ತ ಪ್ರದರ್ಶಿಸಿದ ಶ್ರೀಕೃಷ್ಣ ತುಲಾಭಾರ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ದ್ವಾಪರ ಯುಗಕ್ಕೊಯ್ಯುವಲ್ಲಿ ಸಫ‌ಲವಾಯಿತು. ಪ್ರಬುದ್ಧ ಕಲಾವಿದರ ಸಾಂಕ ಪ್ರಯತ್ನ ಪ್ರಸ್ತುತಿಯಲ್ಲಿ ಎದ್ದು ಕಂಡಿತು .

Advertisement

ಶ್ರೀಕೃಷ್ಣ ತುಲಾಭಾರವು ಯಕ್ಷಗಾನದಲ್ಲಿ ಅಪರೂಪವಾಗಿ ಪ್ರದರ್ಶನಗೊಳ್ಳುವ ಪ್ರಸಂಗ . ಇದು ಹನುಮಗಿರಿ ಮೇಳದಲ್ಲಿ ಈ ತಿರುಗಾಟದ ಪ್ರಥಮ ಪ್ರಯೋಗ.ಆದರೂ ಕಲಾವಿದರು , ಪ್ರಸಂಗಕರ್ತರ ಆಶಯವನ್ನು ಅರ್ಥೈಸಿ ಚೆನ್ನಾಗಿ ನಿರೂಪಿಸಿದರು . ಸಿರಿತನದ ಅಹಂಕಾರ ತಲೆಗೇರಿದ ಶ್ರೀಕೃಷ್ಣನ ಮಡದಿ ಸತ್ಯಭಾಮೆಯು ಸುರಲೋಕದ ಪಾರಿಜಾತ ಹೂವಿನ ಗಿಡವು ತನ್ನ ಉದ್ಯಾನವನದಲ್ಲಿರಬೇಕೆಂಬ ಆಸೆಯನ್ನು ಹೇಳುತ್ತಾಳೆ . ನರಕಾಸುರ ವಧೆಯ ಸಂದರ್ಭದಲ್ಲಿ ತನ್ನೊಂಂದಿಗೆ ರಣರಂಗದಲ್ಲಿ ಕಾದಾಡಿದ ಸತ್ಯಭಾಮೆಯ ಆಸೆ ನೆರವೇರಿಸಲು ಶ್ರೀಕೃಷ್ಣನು ಸ್ವರ್ಗಲೋಕಕ್ಕೆ ತೆರಳುತ್ತಾನೆ . ದೇವಲೋಕದ ಸುವಸ್ತುವನ್ನು ಧರೆಗೆ ಕಳುಹಿಸಲು ದೇವೇಂದ್ರನು ನಿರಾಕರಿಸಿದಾಗ ಯುದ್ಧವಾಗಿ ದೇವೇಂದ್ರನು ಸೋತು ಪಾರಿಜಾತದ ಗಿಡ ನೀಡುತ್ತಾನೆ .ಪಾರಿಜಾತದ ಸಸಿಯನ್ನು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟರೂ ಅದರ ಪುಷ್ಪ ಸನಿಹದಲ್ಲಿರುವ ಸವತಿ ರುಕ್ಮಿಣಿಯ ಅಂಗಳದಲ್ಲಿ ಬೀಳುತ್ತದೆ .

ಖನ್ನಳಾದ ಸತ್ಯಭಾಮೆಯ ಮನೆಗೆ ಬಂದ ನಾರದನು ಇದೆಲ್ಲಾ ಶ್ರೀಕೃಷ್ಣನ ತಂತ್ರವೆಂದೂ , ಕೃಷ್ಣನಿಗೆ ರುಕ್ಮಿಣಿಯ ಮೇಲೆಯೇ ಹೆಚ್ಚಿನ ಪ್ರೀತಿ ಎಂದು ಹೇಳಿದಾಗ ಸತ್ಯಭಾಮೆಯು ಕೃಷ್ಣನು ಸದಾ ತನ್ನ ಮನೆಯಲ್ಲೇ ಇರಬೇಕಾದರೆ ಏನು ಉಪಾಯ ಎಂದು ಕೇಳುತ್ತಾಳೆ. ಪತಿದಾನ ವ್ರತ ಮಾಡಿ ಪತಿಯನ್ನು ಯೋಗ್ಯ ಬ್ರಾಹ್ಮಣನಿಗೆ ದಾನ ನೀಡಿದರೆ , ಪತಿಯು ಸದಾ ನಿನ್ನಲ್ಲೇ ಇರುತ್ತಾನೆ ಎಂದು ಸೂಚಿಸುತ್ತಾನೆ . ಯಾವ ಬ್ರಾಹ್ಮಣನೂ ಸ್ವಯಂ ದೇವರಾದ ಶ್ರೀಕೃಷ್ಣನನ್ನು ದಾನವಾಗಿ ಸ್ವೀಕರಿಸಲು ನಿರಾಕರಿಸಿದಾಗ ನಾರದರೆ ದಾನವಾಗಿ ಸ್ವೀಕರಿಸಿ ಕರೆದೊಯ್ಯುತ್ತಾರೆ . ಶ್ರೀಕೃಷ್ಣನು ತಮಗೂ ಪತಿಯೇ ಆದ ಕಾರಣ , ದಾನ ನೀಡಲು ನಿನಗೇನು ಅಧಿಕಾರವಿದೆ ಎಂದು ತರ ಪತ್ನಿ ಯರು ತರಾಟೆಗೆ ತೆಗೆದುಕೊಂಡಾಗ , ಸತ್ಯಭಾಮೆ ನಾರದರಲ್ಲಿ ಶ್ರೀಕೃಷ್ಣನನ್ನು ಹಿಂದೆ ಕೊಡಲು ಕೇಳುತ್ತಾಳೆ . ನಾರದನು ಶ್ರೀಕೃಷ್ಣನ ತೂಕದಷ್ಟೇ ಸುವಸ್ತು ನೀಡಿದರೆ ಹಿಂದೆ ಕೊಡಲು ಒಪ್ಪುತ್ತಾನೆ.

ಸಿರಿತನದ ಅಹಂಕಾರ ತಲೆಗೇರಿದ ಸತ್ಯಭಾಮೆ ಶ್ರೀಕೃಷ್ಣನನ್ನು ತಕ್ಕಡಿಯ ಒಂದು ಬಟ್ಟಲಲ್ಲಿರಿಸಿ ತನ್ನಲ್ಲಿರುವ ಸಮಸ್ತ ಬಂಗಾರದ ರಾಶಿಯನ್ನೆಲ್ಲಾ ಇನ್ನೊಂದು ತಟ್ಟೆಲ್ಲಿಟ್ಟರೂ ಶ್ರೀಕೃಷ್ಣನ ತೂಕಕ್ಕೆ ಸರಿಯಾಗದಾದಾಗ ಪಶ್ಚಾತ್ತಾಪದಿಂದ ಅಳುತ್ತಾಳೆ .ಆಗ ರುಕ್ಮಿಣಿಯು ಬಂದು ಶ್ರೀಕೃಷ್ಣನಿಗೆ ಪ್ರಿಯವಾದ ತುಳಸಿದಳವನ್ನು ಭಕ್ತಿಯಿಂದ ತಕ್ಕಡಿಯಲ್ಲಿಟ್ಟಾಗ ಬಟ್ಟಲು ಮೇಲೆ ಬಂದು ಶ್ರೀಕೃಷ್ಣನು ಮರಳಿ ದೊರಕುತ್ತಾನೆ .ಇವಿಷ್ಟು ಘಟನಾವಳಿಯಿಂದ ಪ್ರಸಂಗವು ಚೆನ್ನಾಗಿ ಪ್ರದರ್ಶನಗೊಂಡಿತು .

ಶ್ರೀಕೃಷ್ಣನಾಗಿ ವಾಸುದೇವ ರಂಗಾ ಭಟ್ಟರು ಪ್ರಸಂಗದ ಆಶಯವನ್ನು ಅರ್ಥೈಸಿಕೊಂಡು , ಕಪಟ ನಾಟಕ ಸೂತ್ರಧಾರಿ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಚೆನ್ನಾಗಿ ನಿರೂಪಿಸಿದರು . ಸಂತೋಷ ಹಿಲಿಯಾಣರು ಸತ್ಯಭಾಮೆಯ ಗರ್ವ , ಅಹಂಕಾರವನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿ ಯಾದರು . ಕೆಲವೊಂದು ಪಂಚಿಂಗ್‌ ಡೈಲಾಗ್‌ ನಿಂದ ಪ್ರೇಕ್ಷಕರನ್ನು ರಂಜಿಸಿದರು . ದೇವೇಂದ್ರನ ಪಾತ್ರದಲ್ಲಿ ಪೆರ್ಲ ಜಗನ್ನಾಥ ಶೆಟ್ಟರದ್ದು ಅತ್ಯುತ್ತಮ ನಿರ್ವಹಣೆ . ನಾರದನಾಗಿ ಜಯಪ್ರಕಾಶ ಶೆಟ್ಟರು ಸತ್ಯಭಾಮೆಯ ಅಹಂಕಾರ ಇಳಿಸುವ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು . ಭೋಜನಕ್ಕೆಂದು ಬಂದ ತನಗೆ ಶ್ರೀಕೃಷ್ಣನನ್ನೇ ದಾನವಾಗಿ ನೀಡಲು ಬಂದ ಸತ್ಯಭಾಮೆಯ ಅಹಂಕಾರ ಇಳಿಸುವ ಬ್ರಾಹ್ಮಣನಾಗಿ ಸೀತಾರಾಮ ಕುಮಾರ್‌ರವರ ಪ್ರಸ್ತುತಿ ಗಮನಾರ್ಹ . ಕೊನೆಗೆ ಶ್ರೀಕೃಷ್ಣನ ಸಹಸ್ರ ನಾಮಾವಳಿಯನ್ನು ಹೇಳಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು . ಮಡದಿಯರಾಗಿ ಪ್ರಸಾದ್‌ ಸವಣೂರು ಹಾಗೂ ಅಕ್ಷಯ ಮೂಡಬಿದಿರೆಯವರದ್ದು ಸಂದಭೋìಚಿತವಾದ ಹಿತಮಿತ ಸಂಭಾಷಣೆ. ರುಕ್ಮಿಣಿಯಾಗಿ ರಕ್ಷಿತ್‌ ಪಡ್ರೆ ಸೀಮಿತ ಅವಕಾಶದಲ್ಲಿ ಭಾವನಾತ್ಮಕ ಅಭಿನಯದಿಂದ ಮಿಂಚಿದರು .

Advertisement

ಭಾಗವತಿಕೆಯಲ್ಲಿ ಚಿನ್ಮಯ ಕಲ್ಲಡ್ಕರು ತಮ್ಮ ಸುಶ್ರಾವ್ಯವಾದ ಕಂಠದಿಂದ ಪ್ರಸಂಗದ ಯಶಸ್ಸಿಗೆ ಕಾರಣರಾದರು .ಕೆಲವೊಂದು ಪದ್ಯಗಳಂತೂ ಮತ್ತೂಮ್ಮೆ ಕೇಳಬೇಕೆನಿಸುವಷ್ಟು ಹಿತವಾಗಿತ್ತು . ಚೆಂಡೆ – ಮದ್ದಲೆ ವಾದನದಲ್ಲಿ ಹಿರಿಯ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್‌ ಹಾಗೂ ಪದ್ಯಾಣ ಜಯರಾಮ ಭಟ್ಟರು ಆಖ್ಯಾನ ಯಶಸ್ವಿಯಾಗಲು ಸಫ‌ಲರಾದರು . ಚಕ್ರತಾಳದಲ್ಲಿ ವಸಂತ ವಾಮದಪದವು ಸಹಕರಿಸಿದರು . ರುಕ್ಮಿಣಿಯು ತುಳಸೀದಳವನ್ನು ತಕ್ಕಡಿಯಲ್ಲಿಡುವ ಮೊದಲು , ಬಟ್ಟಲಲ್ಲಿ ಇದ್ದ ಬಂಗಾರದ ಮೂಟೆಯೆಲ್ಲಾ ತೆಗೆದು ಕೇವಲ ತುಳಸೀದಳ ಮಾತ್ರ ಇಟ್ಟು ತೂಕವು ಸಮವಾಯಿತೆಂದು ತೋರಿಸಿದರೆ , ಔಚಿತ್ಯಪೂರ್ಣವಾಗುತ್ತಿತ್ತು .

ಎಂ.ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next