ಬೆಂಗಳೂರು: ಬಿಟ್‌ಕಾಯಿನ್ ಪ್ರಕರಣ ಚುರುಕುಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು, ಅಂತಾರಾಷ್ಟ್ರೀಯ ಹ್ಯಾಕರ್ಸ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಮಂಗಳವಾರ ಬಂಧಿಸಿದ್ದಾರೆ. ತುಮಕೂರಿನ ನ್ಯೂಎಕ್ಸ್‌ಟೆನ್ಶನ್ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಶ್ರೀಕಿಯನ್ನು ಬಳ್ಳಾರಿ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬಂಧಿಸಲಾಗಿದೆ.
ಯೂನೋಕಾಯಿನ್ ಟೆಕ್ನಾಲಜೀಸ್ ಪ್ರೈ ಲಿ.ಗೆ ಸೇರಿದ ಬಿಟ್ ಕಾಯಿನ್ ಕಳವು ಪ್ರಕರಣ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಶ್ರೀಕಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದರು.
ತುಮಕೂರಿನ ಜಯನಗರ ನಿವಾಸಿ ಬಿ.ವಿ.ಹರೀಶ್ ಎಂಬವರು 2017ರಲ್ಲಿ ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿ ಯೂನೊಕಾಯಿನ್ ಟೆಕ್ನಾಲಜಿಸ್ ಪ್ರೈ.ಲಿ. ಕಂಪನಿ ತೆರೆದು ಡಿಜಿಟಲ್ ಕರೆನ್ಸಿ ವ್ಯವಹಾರ ನಡೆಸುತ್ತಿದ್ದು, ಅದರ ನಿರ್ದೇಶಕರಾಗಿದ್ದಾರೆ. ಈ ನಡುವೆ 2017ರ ಜೂನ್ 23ರಂದು ಕಚೇರಿ ಕಂಪ್ಯೂಟರ್‌ನಲ್ಲಿದ್ದ ಡೇಟಾ ಬೇಸ್ ಹ್ಯಾಕ್ ಮಾಡಿ ವ್ಯಾಲೆಟ್‌ನಿಂದ 60.6 ಬಿಟ್ ಕಾಯಿನ್ ವರ್ಗಾವಣೆ ಮಾಡಿಕೊಂಡಿದ್ದಾರೆ. ಅದರ ಮೂಲ್ಯ 1 ಬಿಟ್‌ಕಾಯಿನ್ 1.67 ಲಕ್ಷ ರೂ. ಅಂತೇ 1.14 ಕೋಟಿ ರೂ. ಆಗಿತ್ತು. ಈ ಬಗ್ಗೆ 2017ರ ಜೂನ್‌ನಲ್ಲಿ ತುಮಕೂರಿನ ಎಕ್ಸ್‌ಟೆನ್ಶನ್ ಠಾಣೆಗೆ ಹರೀಶ್ ದೂರು ನೀಡಿದ್ದರು.
ಈ ನಡುವೆ ಎಸ್‌ಐಟಿ ತನಿಖೆ ವೇಳೆ ಶ್ರೀಕಿ ಬಳಿ ಜಪ್ತಿ ಮಾಡಿದ್ದ ಲ್ಯಾಪ್‌ಟಾಪ್‌ಗ್ಳನ್ನು ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿತ್ತು. ಡಿಜಿಟಲ್ ಸಾಕ್ಷಾಧಾರಗಳಿಂದ ಆರೋಪಿಯೂ ಯೂನೋಕಾಯಿನ್ ಟೆಕ್ನಾಲಜೀಸ್ ಪ್ರೈ.ಲಿ. ಹೆಸರಿನ ಬಿಟ್ ಕಾಯಿನ್ ಎಕ್ಸ್‌ಚೇಂಜ್‌ನ ಡೇಟಾ ಬೇಸ್ ಅನ್ನು ಹ್ಯಾಕ್ ಮಾಡಿ ಅದರಲ್ಲಿನ 60.6 ಬಿಟ್‌ಕಾಯಿನ್‌ಗಳನ್ನು ಕಳವು ಮಾಡಿರುವುದು ಮೇಲ್ನೋಟಕ್ಕೆ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ಐಟ ಅಧಿಕಾರಿಗಳು ಮಾಹಿತಿ ನೀಡಿದರು.