Advertisement

ಡೆನ್ಮಾರ್ಕ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌ ಫೈನಲ್‌ಗೆ

06:35 AM Oct 22, 2017 | Team Udayavani |

ನವದೆಹಲಿ: ಗೆಲುವಿನ ಅಭಿಯಾನ ಮುಂದುವರಿಸಿರುವ ಭಾರತದ ತಾರಾ ಬ್ಯಾಡ್ಮಿಂಟನ್‌ ಆಟಗಾರ ಕೆ.ಶ್ರೀಕಾಂತ್‌ ಡೆನ್ಮಾರ್ಕ್‌ ಓಪನ್‌ ಸೂಪರ್‌ ಸೀರೀಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಶ್ರೀಕಾಂತ್‌ ಇದೇ ಮೊದಲ ಬಾರಿಗೆ ವೃತ್ತಿಜೀವನದಲ್ಲಿ ಡೆನ್ಮಾರ್ಕ್‌ ಓಪನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದಂತಾಗಿದೆ.

Advertisement

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌ 21-18, 21-17 ರಿಂದ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕೀ ವಿರುದ್ಧ ಗೆಲುವು ಪಡೆದರು. ವಿಶ್ವ ನಂ.8ನೇ ಶ್ರೇಯಾಂಕಿತ ಭಾರತೀಯ ಆಟಗಾರ ನೇರ ಸೆಟ್‌ನಲ್ಲಿಯೇ ವಾಂಗ್‌ ವಿಂಗ್‌ಗೆ ಆಘಾತ ನೀಡಿದರು. ಎರಡೂ ಸೆಟ್‌ನಲ್ಲಿ ವಿಶ್ವ ನಂ.12ನೇ ಶ್ರೇಯಾಂಕಿತ ವಾಂಗ್‌ ವಿಂಗ್‌ ಎಷ್ಟೇ ದಾಳಿ ನಡೆಸಲು ಪ್ರಯತ್ನಿಸಿದರೂ ಭಾರತೀಯ ಆಟಗಾರ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ.

ಕ್ವಾರ್ಟರ್‌ನಲ್ಲಿ ವಿಶ್ವ ನಂ.1 ವಿಕ್ಟರ್‌ಗೆ ಆಘಾತ:
ಇದಕ್ಕೂ ಮುನ್ನ ನಡೆದ ಕ್ವಾರ್ಟರ್‌ ಪೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌ ವಿಶ್ವ ನಂ.1 ಶ್ರೇಯಾಂಕಿತ ವಿಕ್ಟರ್‌ ಆಕ್ಸೆಲ್ಸೆನ್‌ಗೆ ಭರ್ಜರಿ ಆಘಾತ ನೀಡಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದರು.ಶುಕ್ರವಾರ ತಡರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌ 14-21, 22-20, 21-7 ರಿಂದ ಹಾಲಿ ವಿಶ್ವ ಚಾಂಪಿಯನ್‌ ವಿಕ್ಟರ್‌ ಅವರನ್ನು ಸೋಲಿಸಿದರು. 

ಪಂದ್ಯದೂದ್ದಕ್ಕೂ ಅದ್ಭುತ ಸ್ಮ್ಯಾಷ್‌ಗಳನ್ನು ಸಿಡಿಸಿದ ಶ್ರೀಕಾಂತ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಲ್ಲಿಯೂ ಮೂರನೇ ಗೇಮ್‌ನಲ್ಲಿ ತೋರಿದ ಹೋರಾಟ ಅವಿಸ್ಮರಣೀಯ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಆಸ್ಟ್ರೇಲಿಯಾ ಓಪನ್‌, ಇಂಡೋನೇಷ್ಯಾ ಓಪನ್‌ ಗೆದ್ದಿರುವ ಶ್ರೀಕಾಂತ್‌ ಇದೀಗ ಮತ್ತೂಂದು ಸೂಪರ್‌ ಸೀರೀಸ್‌ ಗೆಲ್ಲುವ ಹಾದಿಯಲ್ಲಿದ್ದಾರೆ.

ಮೊದಲ ಗೇಮ್‌ನಲ್ಲಿ ಸೋಲು:
ಸ್ಥಳೀಯ ಆಟಗಾರ ವಿಕ್ಟರ್‌ ಪಂದ್ಯದ ಆರಂಭದಲ್ಲಿ ರೋಚಕ ಹೋರಾಟ ಪ್ರದರ್ಶಿಸಿದರು. ಇದರಿಂದಾಗಿ ಶ್ರೀಕಾಂತ್‌ ಅಂಕಗಳಿಕೆಯಲ್ಲಿ ಹಿನ್ನಡೆ ಪಡೆದರು. ಅಂತಿಮವಾಗಿ ವಿಕ್ಟರ್‌ 21-14ರಿಂದ ಗೆದ್ದು ಮೇಲುಗೈ ಸಾಧಿಸಿದ್ದರು.

Advertisement

2ನೇ ಗೇಮ್‌ನಲ್ಲಿ ರೋಚಕ ಹೋರಾಟ:
1ನೇ ಗೇಮ್‌ನಲ್ಲಿ ಸೋತ ಶ್ರೀಕಾಂತ್‌ 2ನೇ ಗೇಮ್‌ನಲ್ಲಿ ಲಯ ಕಂಡುಕೊಂಡರು. ಇದರಿಂದ ಇಬ್ಬರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ವಿಕ್ಟರ್‌ಗೆ ಶ್ರೀಕಾಂತ್‌ ಕಠಿಣ ಸವಾಲು ಒಡ್ಡಿದರು. ಅಂತಿಮವಾಗಿ ಶ್ರೀಕಾಂತ್‌ 22-20ರಿಂದ ಗೆದ್ದು ತಿರುಗೇಟು ನೀಡಿದರು. ಹೀಗಾಗಿ ಪಂದ್ಯ 1-1ರಿಂದ ಸಮಬಲವಾಯಿತು.

3ನೇ ಗೇಮ್‌ನಲ್ಲಿ ಶ್ರೀಕಾಂತ್‌ ಪಾರುಪತ್ಯ:
ಮೊದಲ ಎರಡು ಗೇಮ್‌ನಲ್ಲಿ ಉಭಯ ಆಟಗಾರರು ತಲಾ ಒಂದು ಗೇಮ್‌ ಗೆದ್ದಿರುವ ಹಿನ್ನೆಲೆಯಲ್ಲಿ 3ನೇ ಗೇಮ್‌  ನಿರ್ಣಾಯಕವಾಗಿತ್ತು. ಈ ಸಂದರ್ಭದಲ್ಲಿ ಶ್ರೀಕಾಂತ್‌ ಏಕಮುಖ ಹೋರಾಟ ಪ್ರದರ್ಶಿಸಿದರು. ನಿರಂತರವಾಗಿ ಅಂಕಗಳಿಕೆಯಲ್ಲಿ ಭಾರತೀಯ ಆಟಗಾರ ಮುನ್ನಡೆ ಪಡೆಯುತ್ತಾ ಸಾಗಿದರೆ, ಅತ್ತ ವಿಕ್ಟರ್‌ ಕಕ್ಕಾಬಿಕ್ಕಿಯಾದರು. ಅಂತಿವಾಗಿ ಶ್ರೀಕಾಂತ್‌ 21-7 ರಿಂದ ಭಾರೀ ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next