Advertisement
ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಥಾಯ್ಲೆಂಡ್‌ನ ಖೊಶಿಟ್ ಫೆಟ್‌ಪ್ರಾದಬ್ ವಿರುದ್ಧ 21-11, 21-15 ಅಂತರದ ಸುಲಭ ಜಯ ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಕೊರಿಯಾದ ಚೆನ್ ಲಾಂಗ್ ವಿರುದ್ಧ ಸೆಣಸಲಿದ್ದಾರೆ. ಇದು ಶ್ರೀಕಾಂತ್‌ಗೆ ಕಠಿನ ಸ್ಪರ್ಧೆಯಾಗುವ ಸಾಧ್ಯತೆ ಇದೆ. ಶ್ರೀಕಾಂತ್ ವಿರುದ್ಧ ಲಾಂಗ್ 5-1 ಗೆಲುವಿನ ದಾಖಲೆ ಹೊಂದಿದ್ದಾರೆ. ಶ್ರೀಕಾಂತ್ ಅವರ ಏಕೈಕ ಗೆಲುವು 2017ರ “ಆಸ್ಟ್ರೇಲಿಯನ್ ಓಪನ್’ನಲ್ಲಿ ದಾಖಲಾಗಿತ್ತು. ಈ ಕೂಟದಲ್ಲಿ ಶ್ರೀಕಾಂತ್ ಭಾರತದ ಏಕೈಕ ಭರವಸೆಯಾಗಿದ್ದಾರೆ.
ವನಿತಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಏಕೈಕ ಆಶಾಕಿರಣವಾಗಿದ್ದ ಸಿಂಧು ದ್ವಿತೀಯ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಸುಂಗ್ ಜಿ ಯುನ್ ವಿರುದ್ಧ 18-21, 7-21 ಗೇಮ್‌ಗಳಿಂದ ಸೋತರು. “ಆಲ್ ಇಂಗ್ಲೆಂಡ್’ ಕೂಟದ ಸೋಲಿನ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಸಿಂಧು ಇಲ್ಲಿಯೂ ಯುನ್ ವಿರುದ್ಧ ಹೀನಾಯವಾಗಿ ಸೋತರು. ಮಿಕ್ಸೆಡ್ ಡಬಲ್ಸ್ 2ನೇ ಸುತ್ತಿನಲ್ಲಿ ಭಾರತದ ಪ್ರಣವ್ ಚೆರ್ರಿ ಜೋಪ್ರಾ-ಸಿಕ್ಕಿ ಎನ್. ರೆಡ್ಡಿ ಜೋಡಿ ಅತಿಥೇಯ ನಾಡಿನ ತಾನ್ ಕಿಯಾನ್ ಮೆಂಗ್-ಲಾಯಿ ಪೈ ಜಿಂಗ್ ಜೋಡಿ ವಿರುದ್ಧ 21-15, 17-21, 13-21 ಗೇಮ್‌ಗಳಿಂದ ಪರಾಭವಗೊಂಡಿತು.