ಹೊಸದಿಲ್ಲಿ: ಭಾರತೀಯ ಕ್ರಿಕೆಟಿನ ಮಾಜಿ ನಾಯಕ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ವನಿತಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ 2019ನೇ ಸಾಲಿನ ಪ್ರತಿಷ್ಠಿತ ಸಿ.ಕೆ. ನಾಯ್ಡು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ. ಜ. 14ರಂದು ಮುಂಬಯಿಯಲ್ಲಿ ನಡೆಯಲಿರುವ ಬಿಸಿಸಿಐ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
60ರ ಹರೆಯದ ಶ್ರೀಕಾಂತ್ ತಮಿಳುನಾಡು ಕ್ರಿಕೆಟಿನ ಬಹು ದೊಡ್ಡ ಹೆಸರಾಗಿದ್ದು, 1981-1992ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಲೆಜೆಂಡ್ರಿ ಬ್ಯಾಟ್ಸ್‌ಮನ್ ಸುನೀಲ್ ಗಾವಸ್ಕರ್ ಜತೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಶ್ರೀಕಾಂತ್, ಸ್ಫೋಟಕ ಬ್ಯಾಟಿಂಗಿಗೆ ಹೆಸರುವಾಸಿಯಾಗಿದ್ದರು.
43 ಟೆಸ್ಟ್‌ಗಳಿಂದ 2,062 ರನ್ ಗಳಿಸಿದ ಸಾಧನೆ ಇವರದ್ದಾಗಿದೆ (2 ಶತಕ, 12 ಅರ್ಧ ಶತಕ). 1983ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಸರದಿಯ ಟಾಪ್ ಸ್ಕೋರರ್ ಎಂಬುದು ಕೂಡ ಶ್ರೀಕಾಂತ್ ಪಾಲಿನ ಹೆಗ್ಗಳಿಕೆ (38 ರನ್). 1989ರ ಪಾಕ್ ಪ್ರವಾಸದ ವೇಳೆ ಅವರು ಭಾರತ ತಂಡದ ನಾಯಕರಾಗಿದ್ದರು.
ಶ್ರೀಕಾಂತ್ ನಾಯಕತ್ವದ ಅವಧಿಯಲ್ಲೇ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದು ವಿಶೇಷ. ಬಳಿಕ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರೂ ಆದರು.
42ರ ಹರೆಯದ ಅಂಜುಮ್ ಚೋಪ್ರಾ 12 ಟೆಸ್ಟ್ ಮತ್ತು 127 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.