ಮಹಾನಗರ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಅಸೋಸಿಯೇಶನ್ ಆಫ್ ಫಾರ್ಮಸುಟಿಕಲ್ ಟೀಚರ್ ಆಫ್ ಇಂಡಿಯಾ ಸಹಯೋಗದೊಂದಿಗೆ ಫಾರ್ಮಸಿ ಅಧ್ಯಾಪಕ ವೃಂದದವರಿಗೆ ಬೇಸಿಕ್ ಕೋರ್ಸ್ ಇನ್ ಎಜುಕೇಶನ್ ಮೆಥಡಾಲಜಿ ಕುರಿತು ಕಾರ್ಯಾಗಾರ ಶ್ರೀದೇವಿ ಫಾರ್ಮಸಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ| ಎ.ಆರ್. ಶಬರಾಯ ಮಾತನಾಡಿ, ಅಧ್ಯಾಪಕರನ್ನು ವಿದ್ಯಾರ್ಥಿಗಳು ಅನುಸರಿಸುವುದರಿಂದ ಅಧ್ಯಾಪಕರ ನಡವಳಿಕೆ ಬಲು ಮುಖ್ಯ. ಬೋಧನೆಯಲ್ಲಿ ನೂತನ ವಿಧಾನಗಳನ್ನು ಅಳವಡಿಸಿ ಕೊಳ್ಳುವುದರಿಂದ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಆಸಕ್ತಿ ಬರುವಂತೆ ಮಾಡಬಹುದು ಎಂದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ ಉದ್ಘಾಟಿಸಿದರು.
ಬೆಂಗಳೂರು ಸಪ್ತಗಿರಿ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ| ಆಶಾಕಿರಣ್, ಕೊಡಗು ಮೆಡಿಕಲ್ ಕಾಲೇಜು ಅಸೋಸಿಯೇಟ್ ಪ್ರೊಫೆಸರ್ ಡಾ| ರವಿಕಿರಣ್ ಕಿಸನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಕಾಲೇಜು ಪ್ರಾಂಶುಪಾಲ ಡಾ| ಜಗದೀಶ್ ವಿ. ಕಾಮತ್ ಪ್ರಸ್ತಾವನೆ ಗೈದರು. ಕಾರ್ಯಗಾರದ ಸಂಚಾಲಕಿ ಅಮಿತಾ ಶೆಟ್ಟಿ ವಂದಿಸಿದರು. ಅಧ್ಯಾಪಿಕೆ ತೋನ್ಸೆ ರೆಹಬ್ ನಿರೂಪಿಸಿದರು.