Advertisement
ಶ್ರೀದೇವಿಯ ಬದುಕಿನ ಬಗ್ಗೆ ಎಷ್ಟೊಂದು ಮಂದಿ ಬರೆದರು ! “ನಾವು ಮಾತ್ರ ಸಾಚಾ’ ಎಂದು ಭಾವಿಸುವ ಕೆಲವರು ಫೇಸ್‌ಬುಕ್‌ನಲ್ಲಿಯೂ ಬರೆದರು. ಸೆಲೆಬ್ರಿಟಿಯಾದದ್ದರಿಂದಾಗಿ ಶ್ರೀದೇವಿ ಸಾವಿನ ಬಳಿಕವೂ ಇಷ್ಟೊಂದು “ಬೆಲೆ’ ತೆರಬೇಕಾಯಿತು ಎಂದು ಹೇಳಬಹುದು. ಆದರೂ ನೈತಿಕ-ಅನೈತಿಕತೆಗಳ ಸವಾಲು ಇರುವುದು ಮಹಿಳಾ ಕಲಾವಿದರಿಗೆ ಮಾತ್ರ ಎಂಬಂಥ ಸಮಾಜದ ಮನೋಸ್ಥಿತಿಗೆ ಶ್ರೀದೇವಿ ಕನ್ನಡಿಯಾಗಿದ್ದಾರೆ. ಶ್ರೀದೇವಿ ತನ್ನ ಬಾಲ್ಯದ ಸವಾಲಿನ ಬದುಕನ್ನು ಉತ್ತರಿಸಿ ಬಾಲಿವುಡ್‌ನಲ್ಲಿ ಪ್ರತಿಭೆಯನ್ನು ಮೆರೆಸಿದ ಸಾಮರ್ಥ್ಯವನ್ನು ಅಭಿಮಾನದಿಂದ ನೋಡಬೇಕೇ ಹೊರತು ಆಕೆಯ ಖಾಸಗಿ ಬದುಕಿನ ಬಗ್ಗೆ ಯಾಕೆ ಕುತೂಹಲ ತಳೆಯಬೇಕು?
Related Articles
Advertisement
ಮೊದಲು ಸೀರೆಯುಟ್ಟಳಾ ವೈಯಾರಿ !ವಯಸ್ಸು ಮನಸ್ಸು ಮಾಗಿ ಸಂಬಂಧವೆಂದರೇನು, ಸಮಾಜವೆಂದರೇನು, ಶಿಕ್ಷಣವೆಂದರೇನು, ಜಗತ್ತಿನ ನಡೆವಳಿಕೆಗಳೇನು ಇತ್ಯಾದಿ ಅನುಭವ ಆಲೋಚನೆಗಳು ಪಕ್ವವಾಗಿ ಒಂದು ವ್ಯಕ್ತಿತ್ವ ರೂಪುಗೊಳ್ಳುವ ಮೊದಲೇ ಆಕೆ ಬಣ್ಣದಲೋಕದೊಳಗೆ ಮಿಳಿತಳಾದ ಅತಿಲೋಕಸುಂದರಿಯಾಗಿ ಕಂಗೊಳಿಸಿದ್ದಳು. ವಾರಿಗೆ ಹುಡುಗಿಯರಂತೆ ಕಾಡಿಬೇಡಿ ಏಟು ತಿನ್ನುತ್ತ, ಅಮ್ಮನಿಂದ ಮುದ್ದಿಸಿಕೊಳ್ಳುವ ಹೊತ್ತಿನಲ್ಲಿ ಆಕೆ ಶೂಟಿಂಗ್ ಸೆಟ್ ನ ಕಠಿಣ ದುಡಿಮೆಯಲ್ಲಿರುತ್ತಿದ್ದಳು. ಗೆಳತಿಯರು ತಮ್ಮ ನೆಚ್ಚಿನ ನಾಯಕ ನಟರುಗಳ ಚಿತ್ರಪಟಗಳನ್ನಿಟ್ಟುಕೊಂಡು ಆರಾಧಿಸುವ ಹೊತ್ತಿನಲ್ಲಿ, ಆಕೆ ಅದೇ ನಾಯಕರುಗಳೊಂದಿಗೆ ಏಕಕಾಲಕ್ಕೆ ಎರಡು ಮೂರು ಚಿತ್ರಗಳಲ್ಲಿ ಅದೇ ನಾಯಕರುಗಳೊಂದಿಗೆ ರಾತ್ರಿ ಹಗಲೆನ್ನದೆ ಅಭಿನಯಿಸಿ ಮನೆಮಾತಾಗಿದ್ದಳು. ಟಿವಿ ಸಂದರ್ಶನವೊಂದರಲ್ಲಿ ಆಕೆಯೇ ನೆನಪಿಸಿಕೊಂಡಂತೆ-
…
ಒಂದು ದಿನ ನಿರ್ಮಾಪಕ-ನಿರ್ದೇಶಕ-ಛಾಯಾಗ್ರಾಹಕ ಬಾಲು ಮಹೇಂದ್ರ ನಮ್ಮನೆಗೆ ಬಂದವರೇ,””ನಿಮ್ಮ ಮಗಳನ್ನು ಸೀರೆಯಲ್ಲಿ ನೋಡಬೇಕು. ಒಮ್ಮೆ ಉಡಿಸುವಿರಾ?” ಎಂದು ಕೇಳಿದರು. ಏನೊಂದೂ ಹೊಳೆಯದೆ, ನಾನು ಅಮ್ಮ ಮುಖಮುಖ ನೋಡಿಕೊಂಡೆವು. ಅಮ್ಮ ತಮ್ಮ ಸೀರೆಯೊಂದನ್ನು ನನಗೆ ಉಡಿಸಿದರು. ಬಾಲು ಒಮ್ಮೆ ನನ್ನೆಡೆ ನೋಡಿ ಹೊರಟರು. ಮರುದಿನ ಬಂದು,””ಅಭಿನಂದನೆ! ನಿಮ್ಮ ಮಗಳು ನಮ್ಮ ಸಿನೆಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ” ಎಂದು ತಿಳಿಸಿದಾಗ ನನಗೂ ಅಮ್ಮನಿಗೂ ಆಶ್ಚರ್ಯ, ಸಂತೋಷ! ಕೇವಲ ಹತ್ತೂವರೆ ವಯಸ್ಸಿಗೆ ನಾನು ನಾಯಕಿಯಾಗಿ ಪದಾರ್ಪಣೆ ಮಾಡಿದೆ-
…
ಹೀಗಿರುವಾಗ ಆಕೆಗೆ ಸಹಜವಾಗಿಯೇ ಪೆನ್ನು, ಪುಸ್ತಕ, ಶಾಲೆ ಮತ್ತು ಸುತ್ತಮುತ್ತಲ ಸಾಮಾಜಿಕ ಜನಜೀವನದೊಂದಿಗೆ ಅಂತರ ಸೃಷ್ಟಿಯಾಯಿತು. ಸ್ವಂತ ವಿವೇಚನೆಯ ಶಕ್ತಿ ಪಕ್ಕಕ್ಕೆ ಸರಿಯಿತು. ಪ್ರತಿಕ್ರಿಯೆ ಎಂಬುದು ಸ್ಟಾರ್ಟ್-ಕಟ್ ಪದಗಳಿಗೆ ಸೀಮಿತಗೊಂಡಿತು. ನಿಜ ಬದುಕಿನ ಏರಿಳಿತಗಳು, ನೋವು ನಲಿವುಗಳು, ಕಷ್ಟ ಕಣ್ಣೀರು, ಕೃತ್ರಿಮಗಳು, ಅನಾಚಾರ, ಆಷಾಢಭೂತಿತನಗಳನ್ನು ಹೇಗೆ ಗ್ರಹಿಸಬೇಕು, ಸ್ಪಂದಿಸಬೇಕು ಎನ್ನುವ ತಿಳಿವಳಿಕೆ, ತರ್ಕ ದಕ್ಕದೆ ಹೋಯಿತು. ಆದರೆ, ಅಮೋಘ ನಟನಾ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಪಾತ್ರಗಳನ್ನು ಪ್ರವೇಶಿಸುವ ಅಸಾಧಾರಣ ತನ್ಮಯತೆ ಆಕೆಯನ್ನು ಸಿನಿಜಗತ್ತಿನ ಉತ್ತುಂಗಕ್ಕೇರಿಸಿತು. ಆದರೂ ಎದೆಯÇÉೇನೋ ಭಣಭಣ ಖಾಲೀತನ… ಪ್ರೀತಿ ಸಾಂತ್ವನಕ್ಕೆ ಭಾವನಾ ಭದ್ರತೆಗೊಬ್ಬ ಸಂಗಾತಿ ಬೇಕೆಂಬ ಹೆಣ್ಣಿನ ಸಹಜ ಆಸೆ, ನಿರೀಕ್ಷೆ ಅವಳಲ್ಲೂ ಇತ್ತು. ಆದರೆ, ಎಷ್ಟೋ ಸಲ ಗಂಡು ಕಾಮದಾಸೆಗಾಗಿ ಪ್ರೀತಿಯನ್ನು ನಟಿಸುತ್ತಾನೆ, ಹೆಣ್ಣು ಪ್ರೀತಿಗಾಗಿ ಕಾಮವನ್ನು ನಟಿಸುತ್ತಾಳೆ ಎನ್ನುವುದು ಈಕೆಯ ವಿಷಯದಲ್ಲೂ ಬಹುಬಾರಿ ಸಾಬೀತಾಗಿ ಪ್ರೀತಿ ಎನ್ನುವುದು ಮರೀಚಿಕೆಯಾಯಿತು. ಅಭದ್ರತೆ ನಿರಂತರ ಕೈಹಿಡಿಯಿತು. ಶೃಂಗಾರರಸದ ಸ್ಥಾತೀಭಾವ
ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಪ್ರತಿಭೆ ಮತ್ತು ಅಭಿನಯ ಚಾತುರ್ಯದಿಂದಲೇ ತನ್ನ ಸಾಮರ್ಥ್ಯವನ್ನು, ಅಸ್ತಿತ್ವವನ್ನು ಮೆರೆದರೂ, ಹಿಂದೀ ಚಿತ್ರರಂಗ ಅವಳನ್ನು ಅತ್ಯಂತ ಶೃಂಗಾರಮಯ ಸರಕಾಗಿಯೇ ತೆರೆಯ ಮೇಲೆ ತೋರಿಸಿತು, ಅಂತೆಯೇ ಆರಂಭದ ದಿನಗಳಲ್ಲಿ ಬಾಲಿವುಡ್ ಅವಳನ್ನು “ಥಂಡರ್ ಥೈಸ್’ ಎಂದು ಸ್ವಾಗತಿಸಿದ್ದು. ಬಾಲಿವುಡ್‌ನ ನಿರೀಕ್ಷೆಗೆ ತಕ್ಕಂತೆ ದೈಹಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಟ್ಟಳು. ಬಿಳಿ ಮೈಬಣ್ಣ, ಸಪೂರ ಕಾಯವನ್ನು ಕಾದುಕೊಳ್ಳಲು ನಿರಂತರ ಮುಳ್ಳಿನ ಕಿರೀಟ ಧರಿಸಿಯೇ ಬದುಕಿದಳು. ತನ್ನ ಅಸ್ತಿತ್ವಕ್ಕಾಗಿ, ಅಭಿಮಾನಿಗಳ ಪ್ರೀತಿಗಾಗಿ ಎಷ್ಟೆಲ್ಲ ನೋವು ನುಂಗಿಯೂ ಕೊನೆತನಕ ಮಿನುಗಿದವು ಆ ಕೊಳದಂಥ ಕಂಗಳು, ಹಲ್ಲು ಕಚ್ಚಿಕೊಂಡೂ ಸೂಸಿದಳು ಬೆಳದಿಂಗಳಂಥ ನಗುವನ್ನು. ಬಣ್ಣದ ನಂಟಿಗಾಗಿಯೋ, ಹಣದ ಆಸೆಗಾಗಿಯೋ ಪೋಷಕ ಅಥವಾ ಇತರೇ ಪಾತ್ರಗಳನ್ನು ಒಪ್ಪದೆ, ನಾಯಕಿ ಪಾತ್ರಗಳನ್ನಷ್ಟೇ ನೆಚ್ಚಿನಿಂತಳು, ಅವಳಿಗೆ ತೊಡಕಾದ ವ್ಯಕ್ತಿಗಳು ಮತ್ತು ಸಂದರ್ಭಗಳ ಕುರಿತು ಚಕಾರ ಎತ್ತದೆ ಸಹಿಸಿದಳು. ಆಕ್ರೋಶ ಹತಾಶೆಗಳನ್ನು ಆಳಕ್ಕೆ ತುಳಿದು ಅದುಮಿಟ್ಟುಕೊಂಡಳು. ಸಾಮಾಜಿಕ ಭದ್ರತೆಗೆಂದು ಎರಡನೇ ಮದುವೆ ಮತ್ತು ಮಕ್ಕಳಾದ ಬಳಿಕವೂ ಗೃಹಿಣಿ ಪಟ್ಟ ಮತ್ತು ತಾರಾಮೌಲ್ಯ ಉಳಿಸಿಕೊಳ್ಳಲು ಏಕಕಾಲದÇÉೇ ಸಂಘರ್ಷಕ್ಕಿಳಿದಳು. ಎಷ್ಟು ಮದುವೆಯಾದರೇನು? ಎಷ್ಟನೇ ಹೆಂಡತಿಯಾದರೇನು? ಮಕ್ಕಳು ಅಂತಾಗಿ, ತಮ್ಮದೇ ಗೂಡು ಕಟ್ಟಿಕೊಂಡ ಮೇಲೆ ಕೌಟುಂಬಿಕ ಚೌಕಟ್ಟಿನ ನಿಯಮಕ್ಕೆ ಒಗ್ಗಿಕೊಳ್ಳಲೇಬೇಕು ಎಂಬ ಪರಂಪರಾಗತ ಜವಾಬ್ದಾರಿ ಇವಳನ್ನೂ ಹೊರತಾಗಿರಿಸಲಿಲ್ಲ. ಜುದಾಯಿ ನಂತರ ದೀರ್ಘವಿರಾಮ ತೆಗೆದುಕೊಂಡು ಮತ್ತೆ ಇಂಗ್ಲಿಶ್ ವಿಂಗ್ಲಿಶ್‌ನ ಪ್ರೌಢ ಮತ್ತು ಮುಗ್ಧ ಅಭಿನಯದ ಮೂಲಕ ರಸಿಕರೆದೆಯನ್ನು ಮೀಟಿಯೇ ಬಿಟ್ಟಳು. ಅದಾದ ನಂತರ, “ಮಕ್ಕಳಿಗೆ ಅರ್ಥ ಮಾಡಿಸಲು ಹೋಗಬೇಡ, ನೀನೇ ಅವರನ್ನು ಅರ್ಥ ಮಾಡಿಕೋ’ ಎಂಬ ಸಂದೇಶದೊಂದಿಗೆ ಮಾಮ…ನಲ್ಲಿ ಮಾಡರ್ನ್ ಅಮ್ಮನಾಗಿ ಮಿಂಚಿದಳು. ಆಕಾಶದಾಚೆಗೇನಿದೆ ಎಂದು ಬಗೆಯ ನೋಡದೆ ಅದರ ಅಸೀಮ ಹರವನ್ನು, ತಿಳಿಯನ್ನು, ದಟ್ಟೈಸುವ ಮೋಡಗಳು ಸುರಿಸುವ ವರ್ಷಾಧಾರೆಯನ್ನು, ಮಿನುಗಿಸುವ ತಾರೆಗಳ ದೈವಿಕ ಸೌಂದರ್ಯವನ್ನಷ್ಟೇ ಆರಾಧಿಸಬೇಕು. ಈ ಮಾತು ಕಲಾವಿದರ ವಿಷಯದಲ್ಲೂ ಸತ್ಯ. ಬದುಕಿದ ಐವತ್ತನಾಲ್ಕು ವರ್ಷಗಳಲ್ಲಿ ಐವತ್ತು ವರ್ಷಗಳವರೆಗೆ ನಾಯಕಿ ಪಾತ್ರದಲ್ಲೇ ಮಿಂಚಿದ ಜಗತ್ತಿನ ಏಕೈಕ ಕಲಾವಿದೆ ಶ್ರೀದೇವಿ. ಸಾಂಪ್ರದಾಯಿಕ ನೆರಳಿನ ಕುಟುಂಬವೊಂದಕ್ಕೆ ಸೊಸೆ ಕಾಲಿರಿಸಿದರೆ ಅತ್ತೆಯ ಬೇರುಗಳು ಇಂದಿನ ದಿನಮಾನಗಳಲ್ಲೂ ಅಲ್ಲಾಡಿ ಹೋಗುವ ದಿನಮಾನಗಳಿವು. ಎಷ್ಟೇ ಮುಂದುವರಿದಿದೆ ಅಥವಾ ಬದಲಾಗಿದೆ ಎಂದು ಹೇಳಿದರೂ ಅಡುಗೆ ಮನೆಯೆನ್ನುವುದು ಹೆಣ್ಣಿಗೆ ಅಸ್ತಿತ್ವದ ಸಂಕೇತವಾಗಿ ಉಳಿಸಿ ಬೆಳೆಸಿರುವಾಗ ಪಾತ್ರೆ ಪಗಡಗಳು ಸದ್ದು ಮಾಡದೆ ಇರವು. ಇದನ್ನೇ ಅವಕಾಶವೆಂಬಂತೆ ಗಂಡಸರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳದೇ ಇರರು. ಹೀಗಿರುವಾಗ, ಸದಾ ಸಾಲಂಕೃತ ದೀಪಗಳೊಂದಿಗೆ ಉನ್ಮತ್ತತೆಯಿಂದ ತೇಲುತ್ತಲೇ ಇರುವ ಈ ಥಳಕುಬಳುಕಿನ ಜಗತ್ತಿನಲ್ಲಿ ಪೈಪೋಟಿಗೇನು ಕಡಿಮೆಯೇ? ನಾಯಕಿಯೆಂದರೆ ಇಲ್ಲಿ ಚಿಟ್ಟೆ ಚಿಟ್ಟೆಯಿದ್ದಂತೆ. ತನ್ನ ವೈಯಕ್ತಿಕ ಜೀವನದ ಏರುಪೇರುಗಳ ಛಾಯೆಯನ್ನು ತೋರ್ಪಡಿಸದೆ ಸದಾ ರಂಗು ಬಳಿದುಕೊಂಡು, ಪಕ್ಕ ಬಡಿದುಕೊಂಡೇ ಇರಬೇಕು ಮತ್ತದರಿಂದ ತನ್ನ ಸುತ್ತಮುತ್ತಲಿನವರನ್ನು ಮೆಚ್ಚಿಸುತ್ತಿರಲೇಬೇಕು ಎನ್ನುವುದು ನೆರಳಿನಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿಕೊಂಡು ಕುಹಕವಾಡಿದಷ್ಟು ಸುಲಭವೆ? ಚಿತ್ರವಿಚಿತ್ರ ಪಿಟಿಸಿ, ಗ್ರಾಫಿಕ್ ಸೃಷ್ಟಿಸಿ, ರೋಚಕವಾಗಿ ಸ್ಕ್ರಿಪ್ಟ್ ಬರೆದು ಸುದ್ದಿ ಪ್ರಸಾರ ಮಾಡಿ ಟಿಆರ್ಪಿ ಹೆಚ್ಚಿಸಿಕೊಂಡು, ಮೀಟಿಂಗ್ ನಲ್ಲಿ ಬೆನ್ನುತಟ್ಟಿಸಿಕೊಂಡರೆ ಅದೇನು ಮಾನವೀಯತೆಯೇ, ಕರ್ತವ್ಯ ನಿಷ್ಠೆಯೇ? ತನ್ನ ಸರೀಕ ನಾಯಕಿಯರನ್ನು ಎಲ್ಲಾ ವಿಧದಲ್ಲೂ ಏಕಾಂಗಿಯಾಗಿ ಮೀರಿ ನಿಲ್ಲಬೇಕೆಂದರೆ ಅದೆಷ್ಟು ಕಸರತ್ತುಗಳಿಗೆ ತನ್ನ ತಾ ಬಗ್ಗಿಸಿಕೊಳ್ಳಬೇಕು, ಒಗ್ಗಿಸಿಕೊಳ್ಳಬೇಕು? ಆಗ ಉಂಟಾಗುವ ಕುಸಿತಗಳಿಂದ ಹೇಗೆ ಸಾವರಿಸಿ ಎದ್ದು ನಿಲ್ಲಬೇಕು? ಸೆಲೆಬ್ರಿಟಿಯಂತಾದ ಮೇಲೆ ಕುಂತರೂ ಸುದ್ದಿಯೇ, ನಿಂತರೂ ಸುದ್ದಿಯೇ. ಪಾತ್ರಗಳಂತೆ ಬಂದು ಹೋಗುವವರಲ್ಲಿ ಯಾರು ಮಿತ್ರರು ಯಾರು ಆಪ್ತರು? ಅತ್ತು ಹಗೂರವಾಗಲು ಎದೆಯೋ ತೋಳ್ಳೋ ಸಿಕ್ಕೀತೆ? “ನಾನಿದ್ದೀನಿ’ ಎಂಬ ಅಭಯ ನೀಡುವ ನಿಷ್ಕಲ್ಮಶ ಮನಸ್ಸಿನ ಗಂಡಸು ಸಿಕ್ಕಾನೆಯೆ? ಒಂಟಿ ನಕ್ಷತ್ರ !
ಅದರಲ್ಲೂ ಅಭಿನೇತ್ರಿಯರು ಎಂದಿಗೂ ಒಂಟಿನಕ್ಷತ್ರಗಳೇ. ಮಾಧುರಿ ದೀಕ್ಷಿತ್ ಆಗಷ್ಟೇ ಸಿನೆಮಾ ರಂಗಕ್ಕೆ ಕಾಲಿಟ್ಟಾಗ, ಇಲ್ಲಸ್ಟ್ರೇಟೆಡ್ ವೀಕ್ಲಿಯು, ಶ್ರೀದೇವಿ ಈಸ್ ಔಟ್ ಮಾಧುರಿ ಈಸ್ ಇನ್ ಎಂಬ ಶೀರ್ಷಿಕೆಯಡಿ ಕವರ್ ಸ್ಟೋರಿ ಮಾಡಿದ ಸಂದರ್ಭದಲ್ಲಿ ಶ್ರೀದೇವಿ, ವಿಲವಿಲ ಒದ್ದಾಡಿ ಹೋಗಿದ್ದಳು. ಆದರೂ ಧೃತಿಗೆಡಲಿಲ್ಲ, ತನ್ನ ಅನನ್ಯ ಅಭಿನಯ ಮತ್ತು ಅಪೂರ್ವ ಸೌಂದರ್ಯದ ಮೂಲಕ ತನ್ನ ಅಭಿಮಾನಿಗಳನ್ನು ಕಾಯ್ದುಕೊಂಡಳು. ಇವೆಲ್ಲದರ ಜತೆಗೆ ವೈಯಕ್ತಿಕ ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವುಗಳನ್ನು ಬಂದಹಾಗೆಯೇ ಸ್ವೀಕರಿಸಿದಳು. ಮಿಥುನ್ ಚಕ್ರವರ್ತಿಯೊಂದಿಗೆ ಮೊದಲ ಮದುವೆ ಮುರುಗಡೆಯಾಗಿ, ಬೋನಿ ಕಪೂರ್ ಕೈಹಿಡಿದ ಮಾತ್ರಕ್ಕೆ ಸಾಂಸಾರಿಕ ಬದುಕು ಹೂಪಕಳೆಯ ಸುಪ್ಪತ್ತಿಗೆಯಾದೀತು ಎಂಬ ಭ್ರಮೆಯಯಲ್ಲೇ ಅವಳಿರಲಿಲ್ಲ. ಬೋನಿ ಮದುವೆಯಾಗಿದ್ದಕ್ಕೆ, ಮನೆಮುರುಕಿ ಎಂದು ಸಮಾಜ ಮತ್ತು ಚಿತ್ರರಂಗ ಅವಳನ್ನೇ ದೂರಿತೇ ವಿನಾ ಬೋನಿಯನ್ನು ದೂರಲಿಲ್ಲ ಎನ್ನುವುದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು. ಅತ್ತ ಬೋನಿಯ ಮೊದಲ ಹೆಂಡತಿಗೂ ಅನ್ಯಾಯ ಇತ್ತ ಶ್ರೀದೇವಿಗೂ! ಆಗ ಶ್ರೀದೇವಿ ತನ್ನ ಅಸ್ತಿತ್ವಕ್ಕಾಗಿ ಬೋನಿಯ ಮೊದಲ ಹೆಂಡತಿ ಮತ್ತು ಅವಳ ಬೆಳೆದ ಮಕ್ಕಳೊಂದಿಗೆ ನಿರಂತರ ಸಂಘರ್ಷಕ್ಕಿಳಿಯುತ್ತಲೇ ಇರಬೇಕಾಗಿತ್ತು. ಏತನ್ಮಧ್ಯೆ ಮಡಿಲಿಗೆ ಎರಡು ಹೆಂಗೂಸುಗಳು ಬಂದು ಅವೆರಡು ಎದೆಯೆತ್ತರ ಬೆಳೆದು ನಿಂತ ಮಾತ್ರಕ್ಕೆ ಅವಳೊಳಗಿನ ನಾಯಕಿಗೆ ಮಂಕು ಕವಿಯಲಿಲ್ಲ. ತಾನಿನ್ನೂ ಚಿರಯೌವ್ವನೆ ಎಂದು ಸಾಬೀತುಪಡಿಸಿಕೊಳ್ಳಲು, ದೆಹಲಿಯಲ್ಲಿ ಮಗಳೊಂದಿಗೆ ರ್‍ಯಾಂಪ್ ಮೇಲೆ ಈ ಚಾಂದನಿ ಆತ್ಮವಿಶ್ವಾಸದ ಹೆಜ್ಜೆ ಹಾಕಿದ್ದೇ ಸಾಕ್ಷಿ. ಆದರೆ, ನಮ್ಮ ಬಾಲಿವುಡ್ ಗೆ ಕೇವಲ ಆತ್ಮವಿಶ್ವಾಸವನ್ನು ಎಂದು ಲೆಕ್ಕಿಸಿತ್ತು? ಅರವತ್ತು ದಾಟಿದ ಪುರುಷರನ್ನು ನಾಯಕರನ್ನಾಗಿ ಒಪ್ಪುತ್ತ ಬಂದಿದೆಯಾದರೂ ಮೂವತ್ತು ದಾಟಿದ ನಾಯಕಿಯರನ್ನು ಮೂಲೆಗೆ ಸರಿಸುತ್ತ ಬಂದಿದೆ. ಇದು ಕಲಾವಂತಿಕೆ ಮತ್ತು ಹೆಣ್ಣಿನ ದೃಷ್ಟಿಯಿಂದ ಅನ್ಯಾಯವೇ. ಆದರೆ ಹಾಲಿವುಡ್‌ನಲ್ಲಿ ನಾಯಕಿಯರ ವಿಷಯವಾಗಿ ಪರಿಸ್ಥಿತಿ ಹೀಗಿಲ್ಲ. ತಾ ನೆಚ್ಚಿದ ಕ್ಷೇತ್ರ ತನ್ನಿಂದ ಏನು ನಿರೀಕ್ಷಿಸುತ್ತದೆ ಎಂಬುದನ್ನು ಚಿಕ್ಕಂದಿನಿಂದಲೂ ಚೆನ್ನಾಗಿ ಬಲ್ಲ ಶ್ರೀದೇವಿ ನಿರುಪಾಯರಾಗಿ, ಮತ್ತೆ ಮತ್ತೆ ದೇಹಸೌಂದರ್ಯ ಕಾಯ್ದುಕೊಳ್ಳುವ ಚಿಕಿತ್ಸೆಗಳಿಗೆ ಶರಣಾದದ್ದು ನೋಡಿದರೆ, ಹೆಣ್ಣನ್ನು ಸರಕಾಗಿ ಕಾಣುವ ಗಂಡಾಳಿಕೆಯ ಬಗ್ಗೆ ಮನಸ್ಸು ಕುದಿಯತೊಡಗುತ್ತದೆ. ತನಗಾಗಿ ತನ್ನತನಕ್ಕಾಗಿ ಸ್ವತಂತ್ರವಾಗಿ ಆಕೆ ಅನ್ಯಮಾರ್ಗಗಳಲ್ಲಿ ಬದುಕು ಕಟ್ಟಿಕೊಳ್ಳಲು ಆಕೆ ಕಲಿಯಲೇ ಇಲ್ಲವಲ್ಲ ಎಂಬ ಬೇಸರವೂ ಮೂಡುತ್ತದೆ. ಅವಳೇ ಅನೇಕ ಕಡೆ ಹೇಳಿಕೊಂಡಂತೆ ತಾನು ಡೈರೆಕ್ಟರ್ಸ್ ಆ್ಯಕ್ಟರ್! ಒಂದು ಸಂದರ್ಶನದಲ್ಲಿ ಆಕೆ ಹೇಳುತ್ತಾರೆ- “”ಶಾಲಾ-ಕಾಲೇಜು ದಿನಗಳಲ್ಲಿ ಸಾಮಾನ್ಯ ಹುಡುಗಿಯರಂಥ ಬದುಕು ನನ್ನದಾಗಿರಲಿಲ್ಲ ನಿಜ. ಆದರೆ, ಸಾಮಾನ್ಯ ಹುಡುಗಿ ಯರು ಕಾಣುವ ಕನಸುಗಳೆಲ್ಲವೂ ನನ್ನ ಜೀವನದಲ್ಲಿ ನಿಜವೇ ಆಗುತ್ತ ಬಂದವು. ಹೀಗಾಗಿ ನನ್ನ ಬದುಕು ನನಗೆ ವಿಶೇಷವೇ”
ನಿಜ. ಅವಕಾಶಗಳೆಲ್ಲವನ್ನೂ ಅಂಗೈನಕ್ಷತ್ರಗಳನ್ನಾಗಿಸಿ ಕೊಳ್ಳುವ ತಾಕತ್ತು ಮತ್ತದಕ್ಕೆ ಬೇಕಾದ ಕಸರತ್ತಿಗೆ ಒಗ್ಗಿಕೊಳ್ಳುವ ಮನೋಭಾವ ಆಕೆಯಲ್ಲಿತ್ತು. ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳಲೇಬೇಕು ಎನ್ನುವುದು ಅವಳ ಅನೇಕ ಸಂದರ್ಶನಗಳಲ್ಲಿ, ಪ್ರಸ್ ಮೀಟ್‌ಗಳಲ್ಲಿ ಕೇಳಿಬಂದ ಪುನರಾವರ್ತಿತ ಸಾಲು. ಅವಳ ಬದುಕಿನ ಮಜಲುಗಳನ್ನು ಗಮನಿಸಿದಾಗ ಅನಿವಾರ್ಯವಾಗಿ ಅದನ್ನೇ ಆಕೆ ತನ್ನ ಜೀವನಮಂತ್ರವೆಂಬಂತೆ ಸ್ವೀಕರಿಸಿದ್ದಳೆನ್ನಿಸುತ್ತದೆ. ತುತ್ತತುದಿ ತಲುಪಿದಷ್ಟೂ ಮನುಷ್ಯ ಒಂಟಿಯೇ ಎನ್ನುವುದು ಇಲ್ಲಿ ಖರೇ. ಹಾಗೆ ನೋಡಿದರೆ, ಮೀನಾಕುಮಾರಿ, ಪರ್ವೀನ್ ಬಾಬಿ, ಸ್ಮಿತಾ ಪಾಟೀಲ್, ಶೋಭಾ, ಸಿಲ್ಕ್ ಸ್ಮಿತಾ, ಕಲ್ಪನಾ, ಆರತಿ ಈ ಎಲ್ಲರ ದುರಂತ ಬದುಕುಗಳ ನೆರಳು ಹೆಬ್ಟಾವಿನಂತೆ ಶ್ರೀದೇವಿಯೊಳಗೂ ಸುತ್ತುಹಾಕಿಕೊಂಡಿದೆ. ಅಂದರೆ ನಮ್ಮ ನಮ್ಮ ಹಿನ್ನೆಲೆಗೆ ತಕ್ಕಂತೆ ನಮ್ಮ ನಡೆ-ನುಡಿಗಳಿರುತ್ತವೆ. ಆಸೆ-ಆಕಾಂಕ್ಷೆ-ಅಭಿವ್ಯಕ್ತಿಗಳಿರುತ್ತವೆ. ಇದಕ್ಕೆ ಪೂರಕವಾಗಿ ನಮ್ಮ ಬದುಕನ್ನು ಆಯಾ ಕ್ಷೇತ್ರದ ನಿರೀಕ್ಷೆಗೆ ತಕ್ಕಂತೆ ಕಟ್ಟಿಕೊಳ್ಳಲು ಹೆಣಗಾಡುತ್ತಿರುತ್ತೇವೆ. ಆದರೂ ನಾವು ವ್ಯಕ್ತಿಯನ್ನು ಆಕೆಯ ಅಥವಾ ಆತನ ಸಂದರ್ಭದಿಂದ ಕಿತ್ತು ಶೂನ್ಯದಲ್ಲಿರಿಸಿ ನೋಡುವ ಕೆಟ್ಟ ಕ್ರಮವನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದೇವೆ, ಅದಕ್ಕೇ ಎಡವುತ್ತೇವೆ. ಶೇ. 98 ಪುರುಷರಿರುವ ಸಿನೆಮಾ ಸೆಟ್
ಸಮಾಜದ ಇತರೇ ವಲಯಗಳಲ್ಲಿರುವಂತೆ ಸಿನೆಮಾ ಕ್ಷೇತ್ರದಲ್ಲೂ ಗಂಡಾಳಿಕೆ ಇದ್ದೇ ಇದೆ. ಅಲ್ಲಿ ಪ್ರತಿಫಲಿತವಾಗುವ ಮೌಲ್ಯ, ಅಪಮೌಲ್ಯಗಳು ಅಲ್ಲಿಯೂ ಪ್ರತಿಫಲಿಸುತ್ತವೆ. ಇಂದಿಗೂ ಸೆಟ್‌ನಲ್ಲಿ ಶೇ. 98ರಷ್ಟು ಪುರುಷರೇ ತುಂಬಿರುತ್ತಾರೆಂದರೆ ಒಬ್ಬ ನಾಯಕಿ ಅಥವಾ ನಟಿ ಪ್ರಸ್ತುತ ಸಂದರ್ಭದಲ್ಲಿ ಎಂಥ ಛಾತಿ ಬೆಳೆಸಿಕೊಳ್ಳಬೇಕು ಎಂಬುದನ್ನು ನೀವೇ ಊಹಿಸಿಕೊಳ್ಳಿ. ನಮ್ಮ ಸಮಾಜ ಪುರುಷ ಕಲಾವಿದರನ್ನು ಮತ್ತು ಕಲಾವಿದೆಯರನ್ನು ನೋಡುವ ಕ್ರಮದಲ್ಲಿರುವ ವ್ಯತ್ಯಾಸ ಇನ್ನೂ ಹಾಗೇ ಇದೆ. ಪುರುಷನಿಗಾದರೆ ಅದು ಸಾಧನೆ, ಛಲ, ಯಶಸ್ಸು. ಮಹಿಳೆಗಾದರೆ ಇದು ಅಧಿಕಪ್ರಸಂಗ, ಅತಿರೇಕ. ಹುಚ್ಚು. ಗಂಡೇ ಆಗಲಿ ಹೆಣ್ಣೇ ಆಗಲಿ ಪ್ರದರ್ಶನ ಕಲೆಗಳ ಸಾಧನೆಗಾಗಿ ದೇಹ, ಮನಸ್ಸನ್ನು ದಂಡಿಸಲೇಬೇಕು ಎಲ್ಲಕ್ಕಿಂತ ಮುಖ್ಯವಾಗಿ ಬುದ್ಧಿಯನ್ನು ನಿರಂತರ ಸಾಣೆಹಿಡಿಯುತ್ತಿರಬೇಕು. ನಮ್ಮ ಮಿತಿ-ವಿಸ್ತಾರಗಳ ಬಗ್ಗೆ ಅರಿವಿಟ್ಟುಕೊಂಡು ಕಾಲಕ್ಕೆ ತಕ್ಕಂತೆ ನಮ್ಮನ್ನು ನಾವು ವಿವೇಚನೆಯಿಂದ ಹುರಿಗೊಳಿಸಿಕೊಳ್ಳುತ್ತಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮಗಾಗಿ ನಾವು ಘನತೆಯಿಂದ ಬದುಕಬೇಕು, ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಎನ್ನುವುದು ಗುರಿಯಾಗಬೇಕು. ಅದಕ್ಕಾಗಿ ಸಾಂಪ್ರದಾಯಿಕ ಪ್ರಭಾವಗಳು, ನಂಬಿಕೆಗಳ ಪೈಕಿ ಜೀವವಿರೋಧಿಯಾದವುಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ನಮ್ಮದೇ ಆದ ಹೊಸ ಮಾರ್ಗಗಳನ್ನು ಹುಟ್ಟುಹಾಕಬೇಕು. ನಮ್ಮ ರೆಕ್ಕೆಗಳು ಸೋತರೂ ನೆಲಕ್ಕಂಟದಂತೆ ಹಾರಬೇಕು. ಏಕೆಂದರೆ, ಮಡಿಲಿಗೆ ಕರೆದು ಆಶ್ರಯ ನೀಡುವ ಮರಗಳಿಗಿಂತ ಇಂದು ಬಾಯೆ¤ರೆದು ನಿಂತ ಕತ್ತರಿಗಳೇ ತಲೆಯೆತ್ತಿವೆ ಎಲ್ಲೆಲ್ಲೂ ! – ಶ್ರೀದೇವಿ ಕಳಸದ