ಮೇಲುಕೋಟೆ: ಶ್ರೀಚೆಲುವನಾರಾಯಣ ಸ್ವಾಮಿ ಬ್ರಹ್ಮೋತ್ಸವಗಳಲ್ಲಿ ನಾಲ್ಕೂ ಸ್ಥಾನೀಕರು ಜಿಲ್ಲಾ ಖಜಾನೆಯಿಂದ ವಾರ್ಷಿಕ ಸರದಿ ಮೇಲೆ ತಿರುವಾಭರಣ ಪೆಟ್ಟಿಗೆ ತರುವ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಐತಿಹಾಸಿಕ ತೀರ್ಮಾನ ಮಾಡಿದ್ದು, 4 ದಶಕಗಳ ವಿವಾದಕ್ಕೆ ತೆರೆ ಬಿದ್ದಿದೆ.
ಈವರೆಗೆ ವಿವಿಧ ಬ್ರಹ್ಮೋತ್ಸವಗಳ ವೇಳೆ ವೈರಮುಡಿ- ರಾಜಮುಡಿ -ಕೃಷ್ಣರಾಜಮುಡಿ ಬ್ರಹ್ಮೋತ್ಸವ ವೇಳೆ (ಜಾತ್ರಾ ಮಹೋತ್ಸವ) ಜಿಲ್ಲಾ ಖಜಾನೆಯಿಂದ ಕಿರೀಟ ತರುವ ಹಕ್ಕು ತಮಗೊಬ್ಬರಿಗೆ ಸೇರಿದ್ದೆಂದು ಉತ್ಸವದ ವೇಳೆ ಗೊಂದಲ ಸೃಷ್ಟಿಸಿ ಲಾಬಿ ಮಾಡಿ, ದೇಗುಲದ ಕಚೇರಿಯಿಂದಲೂ ಜ್ಞಾಪನ ಪತ್ರ ಪಡೆಯದೆ ತಾವೊಬ್ಬರೇ ಕಿರೀಟ ತರುತ್ತಿದ್ದ ಪ್ರಥಮ ಸ್ಥಾನೀಕರಿಗೆ ಮುಖಭಂಗವಾಗಿದೆ.
ರೂಢಮೂಲ ಪದ್ಧತಿ ಜಾರಿ: ಜಿಲ್ಲಾಧಿಕಾರಿ ಡಾ.ಎಚ್.ಎನ್‌ಗೊàಪಾಲಕೃಷ್ಣ ನೀಡಿರುವ 20 ಪುಟಗಳ ಸುದೀರ್ಘ ಆದೇಶದಲ್ಲಿ ಕೈಪಿಡಿಯ ನಿಯಮಾವಳಿಗಳು, ದಾಖಲೆಗಳು ಹಾಗೂ ಘನ ಉತ್ಛ ನ್ಯಾಯಾಲಯಗಳು ನೀಡಿರುವ ತೀರ್ಪುಗಳೆಲ್ಲವನ್ನೂ ಅವಲೋಕಿಸಿ, ರೂಢ ಮೂಲ ಪದ್ಧತಿಯನ್ನು ಜಾರಿಗೊಳಿಸಿದ್ದಾರೆ. ಧಾರ್ಮಿಕ ದತ್ತಿ ಕಾಯ್ದೆಯ ನಿಯಮಾವಳಿ ಯಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಹಕ್ಕಿನ ತೀರ್ಮಾನ ಮಾಡಲು ಅವಕಾಶವಿತ್ತಾದರೂ, ಯಾವೊಬ್ಬ ಜಿಲ್ಲಾಧಿಕಾರಿಯೂ ಈ ಬಗ್ಗೆ ಕಾಳಜಿ ವಹಿಸದ ಕಾರಣ ಪ್ರಕರಣ ವಿವಾದವಾಗಿಯೇ ಉಳಿದು ಬ್ರಹ್ಮೋತ್ಸವಕ್ಕೆ ಕಪ್ಪುಚುಕ್ಕೆಯಾಗಿತ್ತು.
ಹಕ್ಕಿನ ಬಗ್ಗೆ ಹೋರಾಟ ಮಾಡಿರಲಿಲ್ಲ: ನಾಲ್ಲನೇ ಸ್ಥಾನೀಕ ಶ್ರೀನಿವಾಸನರಸಿಂಹನ್ ಗುರೂಜಿಯವರ ಹೋರಾಟದ ಫಲವಾಗಿ ದೇವಾಲಯದ ನಾಲ್ಕೂ ಸ್ಥಾನೀಕರಿಗೆ ಇದೀಗ ನ್ಯಾಯ ದೊರೆತಿದೆ. ದೇವಾಲಯದಲ್ಲಿ ನಾಲ್ಕು ಮಂದಿ ಸ್ಥಾನೀಕರಿದ್ದರೂ 4ನೇ ಸ್ಥಾನೀಕರ ಹೊರ ತಾಗಿ ಯಾರೂ ಸಹ ತಿರುವಾಭರಣ ಪೆಟ್ಟಿಗೆ ತರುವ ಹಕ್ಕಿನ ಬಗ್ಗೆ ಹೋರಾಟ ಮಾಡಿರಲಿಲ್ಲ. ಮಾಧ್ಯಮಗಳಲ್ಲೂ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ದಿವಂಗತ ಸ್ಥಾನೀಕಂ ನಾಗರಾಜಯ್ಯಂಗಾರ್ ಹೋರಾಟ ಮಾಡಿ, ಜಿಲ್ಲಾಧಿಕಾರಿಗಳಿಂದ ಮೂರು ಸಲ, ಹೈಕೋರ್ಟ್‌ನಿಂದ ಎರಡು ಸಲ ಆದೇಶ ಪಡೆದಿದ್ದರೂ ಪ್ರಥಮ ಸ್ಥಾನೀಕರ ಲಾಬಿ ಮುಂದೆ ಕಿರೀಟ ತರುವ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಅವರ ಪುತ್ರ ಶ್ರೀನಿವಾಸನ್ ಗುರೂಜಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಿ, ಸಮಗ್ರವಾದ ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಸಲ್ಲಿಸಿದ ಪರಿಣಾಮ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಐತಿಹಾಸಿಕ ಆದೇಶ ಹೊರಡಿಸಿದ್ದಾರೆ.
2023ರ ವೈರಮುಡಿಯಿಂದಲೇ ಪೂರ್ವಾ ನ್ವಯ ವಾಗು ವಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸರದಿಯ ಆದೇಶ ಜಾರಿಗೊಂಡಿದ್ದು, ಸರದಿಯಂತೆ ಸ್ಥಾನೀಕರು ತಿರುವಾಭರಣ ಪೆಟ್ಟಿಗೆ ತರುವ ಕರ್ತವ್ಯ ಮಾಡಲು ಆದೇಶಿಸಲಾಗಿದೆ. ಇನ್ನು ಮುಂದೆ ಮೇಲುಕೋಟೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಬ್ರಹ್ಮೋತ್ಸವದ ವೇಳೆಯೂ ಸಂಬಂಧಿಸಿದ ಸ್ಥಾನೀಕರಿಗೆ ಕಚೇರಿ ಜ್ಞಾಪನ ಪತ್ರ ನೀಡುವ ಮೂಲಕ ನ್ಯಾಯಾಲಯದ ಆದೇಶ ಅನುಷ್ಠಾನಗೊಳಿಸಬೇಕಿದೆ.
ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿರುವ ಆದೇಶವನ್ನು ನಾಲ್ಕನೇ ಸ್ಥಾನೀಕ ಶ್ರೀನಿವಾಸನರಸಿಂಹನ್ ಗುರೂಜಿ ಸ್ವಾಗತಿಸಿದ್ದು, ಈ ಐತಿಹಾಸಿಕ ಆದೇಶ ನೀಡಿದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.