Advertisement
– ಬೇಡಿದವರಿಗೆ ಇಷ್ಟಾರ್ಥವನ್ನು ಕರುಣಿಸುವ ಕಲ್ಪವೃಕ್ಷವಾಗಿ, ಪ್ರತಿಪಕ್ಷಿಗಳೆಂಬ ಆನೆಗಳಿಗೆ ಸಿಂಹಸ್ವರೂಪವಾಗಿರುವ ವ್ಯಾಸತೀರ್ಥಗುರುಗಳು ನಮ್ಮ ಪ್ರಾರ್ಥನೆಗಳನ್ನು ಈಡೇರಿಸಲಿ ಎಂದು ಗುರುವಂದನ ಶ್ಲೋಕದ ಪಾಠ.
Related Articles
Advertisement
ತಿರುಪತಿಯಲ್ಲಿ ಪೂಜೆ ಮತ್ತು ಬದಲಾವಣೆ :
ತಿರುಪತಿ ವೆಂಕಟೇಶ್ವರ ಸನ್ನಿಧಿಯಲ್ಲಿ ಶ್ರೀವೈಷ್ಣವ ಪೂಜಾರಿಗಳ ಅವ್ಯವಹಾರದಿಂದ ಬೇಸತ್ತ ಚಂದ್ರಗಿರಿಯ ಅರಸ ನರಸಿಂಹನು ಮುಳಬಾಗಿಲು ಮಠದ ಶ್ರೀಪಾದರಾಜರನ್ನು ತಿರುಪತಿ ದೇವಾಲಯ ಪೂಜೆಗೆ ಸಹಕಾರ ವನ್ನು ಕೋರಿದ ಮೇರೆಗೆ ಶ್ರೀಪಾದರಾಜರು ವ್ಯಾಸತೀರ್ಥರನ್ನು ಅಲ್ಲಿಗೆ ಕಳುಹಿಸಿದರು. ವ್ಯಾಸತೀರ್ಥರು 12 ವರ್ಷ ಪೂಜೆಗೈದರು. ವೈಖಾನಸ ಪೂಜಾ ಪದ್ಧತಿಯನ್ನು ಬದಲಿಸಿ ಪಂಚರಾತ್ರಾ ಕ್ರಮವನ್ನು ಆರಂಭಿಸಿದರು. ತನ್ನ ಅವಧಿ ಮುಗಿದು ಶ್ರೀವೈಷ್ಣವರಿಗೇ ಪೂಜೆಯನ್ನು ಒಪ್ಪಿಸಿ ತೆರಳಿದರು.
ಶ್ರೀವ್ಯಾಸರಾಜರು ಮತ್ತು ದ್ವೈತ ತಣ್ತೀಜ್ಞಾನ :
ವ್ಯಾಸರಾಜರು ದ್ವೈತ ವಿಭಾಗದ ತರ್ಕ ಚತುರರ ರಾಜಕುಮಾರ ಎಂದು ಖ್ಯಾತ ವಿದ್ವಾಂಸ ಬಿ. ಎನ್. ಕೆ. ಶರ್ಮರು ಹೇಳುತ್ತಾರೆ. ವ್ಯಾಸತೀರ್ಥರು ಶ್ರೀ ಮಧ್ವಾಚಾರ್ಯರು ಮತ್ತು ಜಯತೀರ್ಥರು ಬಿಟ್ಟು ಹೋದ ಜ್ಞಾನ ಪರಂಪರೆಯನ್ನು ಮುಂದುವರಿಸಿದರು. ಡಾ| ದಾಸಗುಪ್ತರು ವ್ಯಾಸತೀರ್ಥರಿಗೆ ಗರಿಷ್ಠ ಗೌರವವನ್ನು ನೀಡು ತ್ತಾರೆ. ಅವರ ಕೃತಿಗಳಾದ ನ್ಯಾಯಾಮೃತ, ತಾತ್ಪರ್ಯಚಂದ್ರಿಕಾ, ತರ್ಕತಾಂಡವ, ಮಂದಾರ ಮಂಜರಿ ಸಂಸ್ಕೃತ ಸಾಹಿತ್ಯದ ಮುತ್ತುಗಳು, ಮಧ್ವ ತಣ್ತೀಜ್ಞಾನದ ಸ್ತಂಭಗಳೆಂದು ಪರಿಗಣಿಸಲ್ಪಟ್ಟಿವೆ. ಸುಮಾರು 21 ಗ್ರಂಥಗಳನ್ನು ಅವರು ರಚಿಸಿದ್ದಾರೆ. ಆಚಾರ್ಯ ಮಧ್ವರ ಸಿದ್ಧಾಂತವು ಕರಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಂಡಿದ್ದ ಕಾಲವದು. 16 ನೇ ಶತಮಾನದ ಕಾಲಘಟ್ಟದಲ್ಲಿ ದ್ವೈತ ಚಿಂತನಾ ಶಾಲೆಯು ಒಂದು ಪ್ರಮುಖ ಸಾಮಾಜಿಕ, ಭೌದ್ಧಿಕ, ರಾಜಕೀಯ ಶಕ್ತಿಯಾಗಿ ದಕ್ಷಿಣ ಭಾರತದಲ್ಲೆಲ್ಲ ವ್ಯಾಪಿಸಿತು. ಇದು ವ್ಯಾಸತೀರ್ಥರ ತರ್ಕ, ಚರ್ಚೆ ಮತ್ತು ವಿಜಯನಗರ ಅರಸರ ಆಶ್ರಯ ಕಾರಣ ಎಂದಿದ್ದಾನೆ ಇತಿಹಾಸಕಾರ ಪ್ರವಾಸಿಗ ವೆಲೆರಿ ಸ್ಟೋಕರ್.
ಕನಕ, ಪುರಂದರರನ್ನು ನೀಡಿದ ಮುನಿವರ್ಯ! :
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಪುರಂದರದಾಸ ( ಕ್ರಿ.ಶ. 1484-1564) ಎಂಬ ಹೆಸರನ್ನು ಶ್ರೀನಿವಾಸ ನಾಯಕನಿಗೆ ಇಟ್ಟವರೇ ಶ್ರೀ ವ್ಯಾಸತೀರ್ಥರು. ಪುರಂದರದಾಸರು ಸುಮಾರು ನಾಲ್ಕೂವರೆ ಲಕ್ಷಕ್ಕೂ ಮಿಕ್ಕಿ ಕೀರ್ತನೆಗಳನ್ನು ರಚಿಸಿದ್ದಾರೆ. ಅದರಲ್ಲಿ 700 ಮಾತ್ರ ಲಭ್ಯ. “ದಾಸರೆಂದರೆ ಪುರಂದರ ದಾಸರಯ್ಯ’ ಎಂದು ತನ್ನ ಶಿಷ್ಯನನ್ನೇ ವ್ಯಾಸತೀರ್ಥರು ಕೀರ್ತನರೂಪದಲ್ಲಿ ಹೊಗಳಿದ್ದಾರೆ. ವ್ಯಾಸತೀರ್ಥರ ಮತ್ತೋರ್ವ ಶಿಷ್ಯ ಕುರುಬ ಸಮಾಜದ ಕನಕದಾಸರು (ಕ್ರಿ.ಶ. 1509-1609). ಕನಕನ ಭಕ್ತಿಗೆ ಒಲಿದ ಉಡುಪಿ ಶ್ರೀಕೃಷ್ಣನ ಕಥೆಯನ್ನು ಕೇಳದ ವರಿಲ್ಲ. ಸುಮಾರು 240 ಕೀರ್ತನೆಗಳನ್ನು ಕನಕರು ರಚಿಸಿದ್ದಾರೆ. ವ್ಯಾಸಕೂಟ ದಾಸ ಕೂಟವನ್ನು ಸ್ಥಾಪಿಸಿದವರೇ ವ್ಯಾಸತೀರ್ಥರು. ದ್ವೆ„ತ ಸಂಪ್ರದಾಯದಲ್ಲಿ ಹರಿದಾಸ ಚಳವಳಿಯನ್ನು ಸ್ಥಾಪಿಸಿದವರು ಶ್ರೀಪಾದರಾಯರು.(ಲಕ್ಷ್ಮೀನಾರಾಯಣತೀರ್ಥ) ಮುಳಬಾಗಿಲು. ಅವರ ಶಿಷ್ಯ ವ್ಯಾಸತೀರ್ಥರ ಕಾಲದಲ್ಲಿ ಚಳವಳಿ ವೇಗವನ್ನು ಪಡೆಯಿತು. ವಾದಿರಾಜರು, ಪುರಂದರ, ಕನಕರಿಂದಾಗಿ ಹರಿದಾಸ ಪರಂಪರೆ ಶ್ರೀಮಂತಗೊಂಡಿತು.
ವಿಜಯನಗರ ಅರಸರ ಕುಲದೇವರು! :
ಸಾಳುವ ನರಸಿಂಹದೇವರಾಯ(1431-1491) ಕರ್ನಾಟಕ ಸಾಮ್ರಾಜ್ಯದ ಅಧಿಪತಿಯಾಗಿದ್ದ ಕಾಲದಲ್ಲೇ ಗುರುಗಳ ಆದೇಶದ ಮೇರೆಗೆ ಚಂದ್ರಗಿರಿಗೆ ವ್ಯಾಸತೀರ್ಥರ ಪ್ರವೇಶವಾಯಿತು. ಅನಂತರ ಬಂದುಹೋದ ಎಲ್ಲ ರಾಜರಿಗೂ ಗುರು ಸ್ಥಾನದಲ್ಲಿ ನಿಂತರು ವ್ಯಾಸರಾಯರು. ತುಳುವ ನರಸ ನಾಯಕನ ಕಾಲದಲ್ಲಿ (1491-1503) ವ್ಯಾಸತೀರ್ಥರು ಹೊಸ ರಾಜಧಾನಿ ವಿಜಯನಗರದ ಹಂಪಿಗೆ ಆಗಮಿಸಿದರು. ತನ್ನುಳಿದ ಸಮಯವನ್ನು ಆಧ್ಯಾತ್ಮಿಕ ಸಲಹೆಗಾರರಾಗಿ, ಗಾರ್ಡಿಯನ್ ಸೈಂಟ್ ಆಫ್ ದಿ ಸ್ಟೇಟ್ ಎಂಬ ಪಟ್ಟದೊಂದಿಗೆ ಅಲ್ಲೇ ಕಳೆದರು. ವೀರ ನರಸಿಂಹನಾಯಕನ ಮರಣಾನಂತರ ಕೃಷ್ಣದೇವರಾಯ(1509-1529) ಸಿಂಹಾಸನವೇರಿದ ಮೇಲೆ ವಿಜಯನಗರ ಸಾಮ್ರಾಜ್ಯ ಪರಮ ವೈಭವವನ್ನು ಕಂಡಿತು. “ಬಿಸ್ನಗದ ರಾಜನು ಪ್ರತೀ ದಿನ ಬ್ರಾಹ್ಮಣ ವಿದ್ವಾಂಸನಿಂದ ಬೋಧನೆ ಯನ್ನು ಕೇಳುತ್ತಿದ್ದನು. ಆ ಬ್ರಾಹ್ಮಣನು ಅವಿವಾಹಿತನಾಗಿದ್ದು ಸ್ತ್ರೀಯರನ್ನು ಮುಟ್ಟುತ್ತಿರಲಿಲ್ಲ’ ಎಂದು ಪೋರ್ಚುಗೀಸ್ ಪ್ರವಾಸಿಗ ಫೆರ್ನೋ ನುನಿಜ್ ವ್ಯಾಸತೀರ್ಥರನ್ನು ಕುರಿತು ದಾಖಲಿಸಿದ್ದಾನೆ. ಕೃಷ್ಣದೇವರಾಯನಿಗೆ ಅಪಾಯವನ್ನುಂಟುಮಾಡಬಹುದಾದ ಕುಹು ಯೋಗದಿಂದ ಪಾರು ಮಾಡಲು ವ್ಯಾಸತೀರ್ಥರು ಒಂದು ಮಹೂರ್ತ ಕಾಲ ಸಿಂಹಾಸನಾರೂಢರಾಗಿ ಮೆರೆದರು.
ವಿಜಯನಗರ ಸಾಮ್ರಾಜ್ಯ ವ್ಯಾಸರಾಜರ ಕಾಲದಲ್ಲಿ ಶಿಕ್ಷಣ ರಂಗದಲ್ಲೂ ಪ್ರಸಿದ್ಧವಾಗಿತ್ತು. ಸೋಮನಾಥರ ಶ್ರೀವ್ಯಾಸಯೋಗಿ ಚರಿತಂ ನ ಮೇಲೆ ಬರೆದ ಭಾಷ್ಯದಲ್ಲಿ ವೆಂಕೋಬರಾಯರು ವ್ಯಾಸರಾಜರು ವಿಜಯನಗರ ಸಾಮ್ರಾಜ್ಯದ ಕೇಂದ್ರ ವಿವಿ ಯ ಕುಲಪತಿಗಳಾಗಿದ್ದರು. ಭಾರತದ ಎಲ್ಲ ಕಡೆಗಳಿಂದ ವಿದ್ಯಾರ್ಥಿಗಳು ಕಲಿಯಲು ಅಲ್ಲಿಗೆ ಬರುತ್ತಿದ್ದರು ಎಂದು ಬರೆದಿದ್ದಾರೆ. ವ್ಯಾಸರಾ ಯರು ನ್ಯಾಯಾಮೃತ ಪಾಠವನ್ನು ಕಲಿಸುತ್ತಿರುವಾಗ, ಸಾûಾತ್ ವಿಷ್ಣುವೇ ಶಿಕ್ಷಣ ಎಂಬ ಸಮುದ್ರದಿಂದ ದೊರೆತ ಅಮೃತವನ್ನು ಹಂಚುತ್ತಿದ್ದಂತೆ ಭಾಸವಾಗುತ್ತಿತ್ತು ಎಂದು ಸೋಮನಾಥ ಕವಿಯು ವರ್ಣಿಸುತ್ತಾನೆ. ಪುರಂದರ ಮತ್ತು ಹರಿದಾಸ ಚಳವಳಿಯ ಕಾಲ ದಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣಕ್ಕಾಗಿ ಹತ್ತಿರದ ಮಠಕ್ಕೆ ಕಳುಹಿಸುತ್ತಿದ್ದರು. ಆದರೆ ಅವರ ಮೊದಲ ಆಯ್ಕೆ ವ್ಯಾಸ ರಾಯ ಮಠವಾಗಿದ್ದಿತು ಎಂದು ಡಾ| ಕೃಷ್ಣರಾವ್ ಬರೆಯುತ್ತಾರೆ.
ಮುಖ್ಯಪ್ರಾಣ ಆರಾಧನೆ ಸಂಪ್ರದಾಯದ ಹರಿಕಾರ! :
15 ನೇ ಶತಮಾನದವರೆಗೆ ಶಿವ, ವಿಷ್ಣು, ದುರ್ಗಾ ಮತ್ತಿತರ ದೇವಾಲಯಗಳನ್ನು ಕಾಣಬಹುದಿತ್ತು. ಗೋಸ್ವಾಮಿ ತುಲಸೀದಾಸರು ಅದಕ್ಕೂ ಪೂರ್ವದಲ್ಲಿ ಮಧ್ವಾಚಾರ್ಯರು ವಾಯು ಮತ್ತದರ ಅವತಾರಗಳಾದ ಹನುಮ, ಭೀಮರ ವಿಶೇಷ ಆರಾಧಕರಾಗಿದ್ದರು. ಹಂಪಿಯ ಯಂತ್ರೋದ್ಧಾರ ಹನುಮ ಸಹಿತ ಸುಮಾರು 732 ಹನುಮ ದೇವಾಲಯಗಳನ್ನು ವ್ಯಾಸತೀರ್ಥರು ಸ್ಥಾಪಿಸಿದ್ದರು. 800 ವರ್ಷಗಳ ಮೊಘಲರ ಮತ್ತು 200 ವರ್ಷ ಬ್ರಿಟಿಷರ ಆಳ್ವಿಕೆಯ ಹೊರತಾಗಿಯೂ ಸನಾತನ ಹಿಂದೂ ಸಂಸ್ಕೃತಿ ಅಳಿಯದೇ ಉಳಿದಿದೆ ಎಂದರೆ ನಿಸ್ಸಂಶಯವಾಗಿ ವ್ಯಾಸತೀರ್ಥರಂತಹ ಮಹಾನ್ ಸಂತರು, ಮುನಿಗಳ ಸಂಚಯಿತ ತಪಸ್ ಶಕ್ತಿಯ ಧಾರೆಯೇ ಕಾರಣ. ಕ್ರಿ.ಶ 1539 ರ ವಿಳಂಬಿ ಸಂವತ್ಸರ ಪಾಲ್ಗುಣ ಕೃಷ್ಣ ಚತುರ್ಥಿಯಂದು ಶ್ರೀ ವ್ಯಾಸತೀರ್ಥರು ವೃಂದಾವನಸ್ಥರಾದರು. ಹಂಪಿಯ ಆನೆಗುಂದಿಯಲ್ಲಿ ಅವರ ಮೂಲ ಬೃಂದಾವನವಿದೆ. ಒಂಬತ್ತು ಯತಿಗಳ ವೃಂದಾವನವಿರುವ ಆ ಸ್ಥಳ ನವ ವೃಂದಾವನ ಎಂದೇ ಪ್ರಸಿದ್ಧ.
–ಜಲಂಚಾರು ರಘುಪತಿ ತಂತ್ರಿ, ಉಡುಪಿ