Advertisement

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು: 81 ವರ್ಷಗಳ ಸನ್ಯಾಸ, 6 ವರ್ಷ ಉಪವಾಸ!

12:00 AM Dec 12, 2019 | mahesh |

ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಇದುವರೆಗೆ ಒಟ್ಟು ಆರು ವರ್ಷ ಉಪವಾಸ ಮಾಡಿರುವುದು ಒಂದು ವಿಶೇಷವೇ ಸರಿ. 1931ರ ಎ. 27ರಂದು ಜನಿಸಿದ ಇವರು ಸನ್ಯಾಸಾಶ್ರಮ ಸ್ವೀಕರಿಸಿದ್ದು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಮಾಸದ ದಶಮಿಯಂದು (1938ರ ಡಿ.3). ಅದರ ಮರುದಿನವೇ ಏಕಾದಶಿ. ಸನ್ಯಾಸಾಶ್ರಮದ ಮರುದಿನವೇ ಇವರಿಗೆ ಏಕಾದಶಿ ಉಪವಾಸ ಅಭ್ಯಾಸ ಶುರುವಾಯಿತೆನ್ನಬಹುದು. ಸನ್ಯಾಸಾಶ್ರಮ ಸ್ವೀಕರಿಸಿ 81 ವರ್ಷಗಳು ಸಂದಿವೆ.

Advertisement

ಪ್ರತಿ 15 ದಿನಗಳಿಗೊಮ್ಮೆ ಬರುವ ಏಕಾದಶಿಯಂತೆ ವರ್ಷಕ್ಕೆ 24 ಏಕಾದಶಿ, ವರ್ಷದಲ್ಲಿ ಎರಡು ಗ್ರಹಣ, ಒಂದು ಕೃಷ್ಣಾಷ್ಟಮಿ- ಇವುಗಳನ್ನು ಸೇರಿಸಿದರೆ ವರ್ಷಕ್ಕೆ ಕನಿಷ್ಠ 27 ದಿನ ನಿರ್ಜಲ ಉಪವಾಸ ಮಾಡುತ್ತಾರೆ. ಅವರ ಇತ್ತೀಚೆಗಿನ ಏಕಾದಶಿ ಉಪವಾಸವೆಂದರೆ ಗೀತಾ ಜಯಂತಿಯಂದು.

27 ದಿನ * 81 ವರ್ಷ = ಒಟ್ಟು 2,187 ದಿನಗಳಾಗುತ್ತವೆ. ಇದು 5 ವರ್ಷಗಳು ಮತ್ತು 362 ದಿನಗಳಿಗೆ ಸಮನಾಯಿತು. ಅಂದರೆ ಸ್ವಾಮೀಜಿ ಸುಮಾರು 6 ವರ್ಷ ಉಪವಾಸ ಮಾಡಿ ದ್ದಾರೆ. ಇದರಲ್ಲಿ ಅಧಿಕ ಮಾಸದ ಏಕಾದಶಿ ಲೆಕ್ಕ, ಶ್ರವಣೋಪವಾಸಗಳು ಸೇರಿಲ್ಲ. 27 ದಿನಗಳಿಗೊಮ್ಮೆಯ ಚಾಂದ್ರಮಾನ ತಿಂಗಳನ್ನು ಸೌರಮಾಸದ 30 ದಿನಗಳ ತಿಂಗಳಿಗೆ ಸರಿಹೊಂದಿಸಲು 4 ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ. ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಎರಡು ಏಕಾದಶಿಗಳು ಪ್ರತ್ಯೇಕ. ಏಕಾದಶಿಯ ಮರುದಿನ ಸೂರ್ಯೋದಯದ ವೇಳೆ ಶ್ರವಣ ನಕ್ಷತ್ರವಿದ್ದರೆ ದ್ವಾದಶಿಯಂದೂ ಉಪವಾಸ ಕೈಗೊಳ್ಳುತ್ತಾರೆ – ಇದು ಶ್ರವಣೋಪವಾಸ. ಇದು ವರ್ಷಕ್ಕೆ ಒಂದೆರಡು ಬಾರಿ ಬರುತ್ತದೆ. ಇದು ಸತತ ಎರಡು ದಿನಗಳ ಉಪವಾಸ.

ಮೊದಲ 8 ವರ್ಷ ಬಾಲ್ಯವಾಯಿತು. ಒಟ್ಟು 81 ವರ್ಷಗಳ ಸನ್ಯಾಸದಲ್ಲಿ ಉಪವಾಸದ ದಿನಗಳೇ 6 ವರ್ಷಗಳಾದವು. ಇಷ್ಟೊಂದು ದಿನ ಉಪವಾಸ ಮಾಡಿದವರು ಬೇರೆ ಯಾರಾದರೂ ಇರುವುದು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾರಾದರೂ ಗಿನ್ನೆಸ್‌ ದಾಖಲೆಗೆ ಸೇರಿಸುವುದಾದರೆ ಇದೊಂದು ದಾಖಲೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next