Advertisement

ಮಠದ ಚೆಂಬೂರು ಶಾಖೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠಾಧೀಶರ ಆಗಮನ

02:23 PM Jul 05, 2017 | |

ಮುಂಬಯಿ: ಸ್ವಧರ್ಮಕ್ಕಿಂತ ಮಾನವೀಯ ಧರ್ಮ ಮನುಕುಲಕ್ಕೆ ಶ್ರೇಷ್ಠವಾದದ್ದು. ಮಾನವನಿಗೆ ಸಾಮರಸ್ಯದ ಬದುಕೇ ಸಮೃದ್ಧಿ ಕರುಣಿಸಬಲ್ಲದು. ಸಂಸ್ಕಾರ ಮತ್ತು ಸಾಂಸ್ಕೃತಿಕ ಬದುಕಿಗಾಗಿ ಸ್ವಧರ್ಮಗಳು ಎಷ್ಟು ಪ್ರಧಾನವೋ ಸಾಮರಸ್ಯದ ಬಾಳಿಗೆ ಮಾನವೀಯ ಧರ್ಮ ಅಷ್ಟೇ ಮುಖ್ಯವಾಗಿದೆ.  ಇದಕ್ಕಾಗಿ ಮಾನವೀಯ ಧರ್ಮವನ್ನು ಮೈಗೂಡಿಸುವ ಆವಶ್ಯಕತೆ ವಿಶೇಷವಾಗಿ ಭಾರತೀಯರಿಗಿದೆ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್‌ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ  ನುಡಿದರು.

Advertisement

ಜು. 2ರಂದು ಮಧ್ಯಾಹ್ನ ಚೆಂಬೂರು ಪಶ್ಚಿಮದಲ್ಲಿನ ಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ಶಾಖೆಗೆ ಆಗಮಿಸಿ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪೂಜೆಗಳನ್ನು ನೆರವೇರಿಸಿ ಮಹಾ ಆರತಿಗೈದ‌ು ನೆರೆದ ಭಕ್ತರಿಗೆ ಮಂತ್ರಾಕ್ಷತೆ, ಪ್ರಸಾದ ವಿತರಿಸಿ ಹರಸಿದ ಅವರು, ಯಾವುದೇ ಸಾರ್ವತ್ರಿಕ ಜೀವನದಲ್ಲಿ ಯಾವುದೇ ಧಾರ್ಮಿಕ ಭೇದ ಸಲ್ಲದು. ಸರ್ವರೂ ಒಬ್ಬನೇ ಭಗವಂತನ ಭಕ್ತರು. ಸನಾತನ ಧರ್ಮ ಸಂಸ್ಕೃತಿಯ ಉಳಿವು ನಮ್ಮ ಉದ್ದೇಶವಾಗಬೇಕು. ಭಾರತೀಯರು ಸನಾತನ ಧರ್ಮದ ಉಳಿವಿಗಾಗಿ ಶ್ರಮಿಸಿದಾಗಲೇ ನಮ್ಮ ಪರಂಪರೆ, ಸಂಸ್ಕೃತಿಗಳು ಬದುಕಿ ಭವಿಷ್ಯತ್ತಿನ ಜನಾಂಗಕ್ಕೆ ಉಳಿಯಬಲ್ಲವು.  ಸುಬ್ರಹ್ಮಣ್ಯ ಮಠಕ್ಕೆ ಎಲ್ಲ ವರ್ಗದ ಭಕ್ತರಾಗಿದ್ದಾರೆ. ಯಾವುದೇ ಜಾತಿಮತ ಭೇದವಿಲ್ಲದೆ ಆಗಮಿಸುವ ಅವರೆಲ್ಲರಿಗೂ ಕೂಡಾ ಸಾಮರಸ್ಯದ ಸಂದೇಶ ನೀಡುವುದು ನನ್ನ ಈ ಬಾರಿಯ ಚಾತುರ್ಮಾಸ್ಯದ ಉದ್ದೇಶವಾಗಿಸಿದ್ದೇನೆ. ಮುಂಬಯಿಗರು ನಮಗೆ ತುಂಬಾ ಪ್ರಿಯವಾದವರು. ಸುಬ್ರಹ್ಮಣ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿತ ಬಹುತೇಕ ಮುಂಬಯಿಗರು ಇಲ್ಲಿಗೆ ಬರುತ್ತಾರೆ. ಅವರಿಗೆಲ್ಲರಿಗೂ ಒಳ್ಳೆಯ ಹಿತವನ್ನು ಶುಭ ಹಾರೈಸುತ್ತೇವೆ. ಈ ಬಾರಿ ತಾನು 21ನೇ ವಾರ್ಷಿಕ‌ ಚಾತುರ್ಮಾಸ್ಯ ವ್ರತ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲೇ ಕೈಗೊಳ್ಳಲಿದ್ದೇನೆ. ಇದೇ ಜು. 16ರ ಕರ್ಕಾಟಕ ಸಂಕ್ರಮಣದ ಸಪ್ತಮಿಯ ಭಾನುವಾರದಿಂದ ಸೆ. 7ರ ಭಾದ್ರಪದ ಕೃಷ್ಣ ಪಕ್ಷದ  ತನಕ ಈ ಬಾರಿಯೂ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲೇ ಚಾತುರ್ಮಾಸ್ಯ ವೃತ ಆಚರಿಸಲಿದ್ದು, ಚಾತುರ್ಮಾಸ್ಯವಾಧಿಯಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಸಂಗೀತ, ಯಕ್ಷಗಾನ ಹಾಗೂ ಕಲಾರಾಧನಾ ಜ್ಞಾನೋದಯ ಬಗ್ಗೆ ವಿಶೇಷ ಉಪನ್ಯಾಸ, ಪಾಠ ಪ್ರವಚನ, ಉಪನ್ಯಾಸ, ಚರ್ಚಾಗೋಷ್ಠಿ ನಡೆಸಲು ಉದ್ದೇಶಿಸಿರುವುದಾಗಿ ಶ್ರೀಗಳು ತಿಳಿಸಿದರು.

ಶ್ರೀಗಳನ್ನು ಮಠದ ಪುರೋಹಿತರು ಶಾಸ್ತ್ರೋಕ್ತವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಗೋಪಾಲ ಜೋಯಿಸ, ಶ್ರೀಧರ ಭಟ್‌, ಪುರಂದರ ಜೋಯಿಸ, ಶ್ರೀಕರ ಭಟ್‌, ಕೃಷ್ಣ ಭಟ್‌, ಜನಾರ್ದನ ಭಟ್‌, ದೇವಿ ಪ್ರಸನ್ನ ಸೇರಿದಂತೆ ಅನೇಕ ಪುರೋಹಿತರು ಹಾಜರಿದ್ದರು. ನೂರಾರು ಭಕ್ತಾಭಿಮಾನಿಗಳು ಶ್ರೀಗಳನ್ನು ಭೇಟಿಗೈದು ಶ್ರೀಗಳಿಂದ ಪ್ರಸಾದ ಪಡೆದರು.

ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯಲ್ಲಿ ಎಂದಿನಂತೆ ಈ ಬಾರಿಯೂ ಜು. 27ರಂದು ಚೆಂಬೂರು ಛೆಡಾ ನಗರದ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಶ್ರೀಗಳ ಆಶೀರ್ವಾದ, ಮಾರ್ಗದರ್ಶನದೊಂದಿಗೆ ಧಾರ್ಮಿಕ ವಿಧಿಗಳೊಂದಿಗೆ ನಾಗರ ಪಂಚಮಿಯನ್ನು  ಆಚರಿಸಲಾಗುವುದು.  ಅಂದು  ಬೆಳಗ್ಗೆಯಿಂದ   ಅಭಿಷೇಕ, ಸಾಮೂಹಿಕ ಆಶ್ಲೇಷಾ ಬಲಿ, ಸರ್ಪಕೋಪ, ಶಾಪ ಪರಿಹಾರರ್ಥ ಸರ್ಪತ್ರಯ ಮಂತ್ರ ಹೋಮ, ಮಹಾಭಿಷೇಕ, ಸರ್ವ ಐಶ್ವರ್ಯ ಸಿದ್ಧಿಗಾಗಿ ಅಷ್ಟಕುಲ ನಾಗಪೂಜೆ ಇತ್ಯಾದಿ ಧಾರ್ಮಿಕ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದ್ದು ಸದ್ಭಕ್ತರ‌ು ಆಗಮಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾಗುವಂತೆ ಶಾಖಾ ವ್ಯವಸ್ಥಾಪಕ ವಿಷ್ಣು ಕಾರಂತ್‌ ತಿಳಿಸಿದರು. 

 ಚಿತ್ರ -ವರದಿ: ರೋನ್ಸ್‌  ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next