ಕುಷ್ಟಗಿ: ಇಲ್ಲಿನ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ಗುಗ್ಗಳೋತ್ಸವ ಹಾಗೂ ಅಗ್ನಿ ಹಾಯುವ ಧಾರ್ಮಿಕ ಕಾರ್ಯಕ್ರಮ ಭಕ್ತಿ ಭಾವದಿಂದ ಜರುಗಿತು.
ಪ್ರಾತಃಕಾಲದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸಹಸ್ರಾ ಬಿಲ್ವಾರ್ಚನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ಜರುಗಿದವು. ಇದೇ ವೇಳೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಪುರವಂತರು ಹಾಗೂ ಭಕ್ತರು ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿಭಾವ ಸಮರ್ಪಿಸಿದರು.
ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಗುಗ್ಗಳೋತ್ಸವದ ಮೆರವಣಿಗೆಯಲ್ಲಿ ಮಕ್ಕಳು ವೀರಭದ್ರೇಶ್ವರ ಮೂರ್ತಿಯೊಂದಿಗೆ ಹೆಜ್ಜೆ ಹಾಕಿದರು. ವಿಶೇಷ ಆಕರ್ಷಣೆ ಪುರವಂತರು ವೀರಾವೇಶದಿಂದ ಕತ್ತಿ ಝಳಪಿಸಿ ವೀರಭದ್ರ ದೇವರ ಒಡಪುಗಳನ್ನು ಹೇಳುವ ದೃಶ್ಯ ರೋಮಾಂಚನಕಾರಿಯಾಗಿತ್ತು.
ರಸ್ತೆಯುದ್ದಕ್ಕೂ ಮಹಿಳೆಯರು, ಮಕ್ಕಳು ಗಲ್ಲಕ್ಕೆ, ತುಟಿಗಳಿಗೆ ಶಸ್ತ್ರ ಹಾಕಿಸಿಕೊಂಡು ಭಕ್ತಿ ಹರಕೆ ತೀರಿಸಿದರು. ಯುವಕರು ತಮ್ಮ ಕೆನ್ನೆಗೆ ಶಸ್ತ್ರವನ್ನು ಹಾಕಿಸಿಕೊಂಡು ಭಕ್ತಿಯ ಸಂಕಲ್ಪವನ್ನು ಅರ್ಪಿಸಿದರು. ಯುವಕರು ದಾರವನ್ನು ಏಕ ಕಾಲಕ್ಕೆ ತಮ್ಮ ಕೆನ್ನೆಗೆ ಹಾಕಿಸಿಕೊಂಡು ಭಕ್ತಿಯನ್ನು ಸಮರ್ಪಿಸಿದರು. ನಂತರ ಅನ್ನಸಂತರ್ಪಣೆ ಸಂಜೆ ದೇವಸ್ಥಾನದಲ್ಲಿ ದೀಪೋತ್ಸವ ಬಾಣ ಬಿರುಸು ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು.