ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದ ಆವರಣದಲ್ಲಿ ನೂತನ ವಾಗಿ ನಿರ್ಮಿಸಿದ ಸಭಾಭವನವು ಮೇ 13ರಂದು ಲೋಕಾರ್ಪಣೆಗೊಳ್ಳಲಿದೆ.
ಅಪರಾಹ್ನ 2ಕ್ಕೆ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಗಮಿಸಲಿದ್ದು, 2.15ಕ್ಕೆ ನೂತನ ಸಭಾಭವನ ಲೋಕಾರ್ಪಣೆಗೈದು, ಆಶೀರ್ವಚನ ನೀಡಲಿದ್ದಾರೆ. 4ಕ್ಕೆ ಡಿವಿಜಿ ಅವರ ಕಗ್ಗದ ಬೆಳಕು ಕುರಿತು ಕವಿತಾ ಅಡೂರು ವ್ಯಾಖ್ಯಾನ ನೀಡಲಿದ್ದಾರೆ ಎಂದು ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ. ಗೋಪಾಲಕೃಷ್ಣ ಭಟ್ ಮತ್ತು ಅಧ್ಯಕ್ಷ ರಾಕೋಡಿ ಈಶ್ವರ ಭಟ್ ತಿಳಿಸಿದ್ದಾರೆ.
ಮೇ 12ರಂದು ಸಂಜೆ 6ಕ್ಕೆ ಸಪ್ತಶುದ್ಧಿ, ಪುಣ್ಯಾಹ ವಾಚನ, ರಾತ್ರಿ 7ಕ್ಕೆ ವಾಸ್ತು ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, 13ರಂದು ಬೆಳಗ್ಗೆ 7.08ಕ್ಕೆ ಪ್ರವೇಶ, 7.30ಕ್ಕೆ ಗಣಪತಿ ಹವನ, 8.30ಕ್ಕೆ ಶ್ರೀದೇವರಿಗೆ ಏಕಾದಶರುದ್ರ ಶಿವಪೂಜೆ, 9.30ಕ್ಕೆ ಪುರುಷಸೂಕ್ತ ಹವನ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, 12.30ಕ್ಕೆ ಅನ್ನಸಂತರ್ಪಣೆ ನಡೆಯಿತು.
ಶ್ರೀ ಉಮಾಶಿವ ಕ್ಷೇತ್ರ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರವು ಮಂಗಳೂರು- ಬೆಂಗಳೂರು ರಾ.ಹೆ.ಯ ಕಲ್ಲಡ್ಕದ ಸಮೀಪದಲ್ಲಿದೆ. ಈ ದೇಗುಲದ ಆರಾಧ್ಯ ದೇವರು ಮುಷ್ಟಿ ಗಾತ್ರದ ಲಿಂಗರೂಪಿ. ಹುಣ್ಣಿಮೆಯಿಂದ ಅಮಾವಾಸ್ಯೆಗೆ ಕಪ್ಪು ಛಾಯೆಗೆ ಬದಲಾಗಿ ಮತ್ತೆ ಹುಣ್ಣಿಮೆಗೆ ಶುಭ್ರವಾಗುವುದು ಇಲ್ಲಿನ ಶಿವಲಿಂಗದ ವೈಶಿಷ್ಟé. ದೇವಾಲಯದ ಎದುರುಗಡೆ ಬಂಡೆಗಳಿಂದ ಕೂಡಿದ ಶಂಖಾಕೃತಿ ಯಲ್ಲಿರುವ ಶಂಖತೀರ್ಥ ಪುಷ್ಕರಣಿ ನೀರು ಚರ್ಮರೋಗ ನಿವಾರಕವೆಂದು ಪ್ರತೀತಿ. ದೇವಾಲಯದ ಈಶಾನ್ಯದಲ್ಲಿರುವ ಬಂಡೆಯ ಮೇಲ್ಭಾಗದಲ್ಲಿ ಹಳೆಯ ಗರ್ಭಗುಡಿಯ ಸಾಮಗ್ರಿಗಳನ್ನು ಉಪಯೋಗಿಸಿ ರಚಿಸಲಾದ ಧ್ಯಾನ ಮಂಟಪದಲ್ಲಿ ಶ್ರೀ ದಕ್ಷಿಣಾಮೂರ್ತಿಯ ಆಲಂಕಾರಿಕ ಕಾಷ್ಠಶಿಲ್ಪದ ಮೂರ್ತಿಯನ್ನು ಇಡಲಾಗಿದೆ. ಬ್ರಹ್ಮಕಲಶದ ಬಳಿಕ ನೂತನವಾಗಿ ರಚಿಸಿದ ಸೇವಾ ಸಮಿತಿಯ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ವರ ಸಹಕಾರದೊಂದಿಗೆ ಉಮಾಶಿವನಿಗೆ ಸುಮಾರು 1.75 ಲಕ್ಷ ರೂ. ವೆಚ್ಚದಲ್ಲಿ ರಜತ ಕವಚ ಸಮರ್ಪಿಸಲಾಗಿದೆ. 10 ಲಕ್ಷ ರೂ.ಗಳ ವೆಚ್ಚದಲ್ಲಿ ಸನ್ಮತಿ ಸಭಾಭವನವನ್ನು ನಿರ್ಮಿಸಲಾಗಿದೆ.
ನೂತನ ಸಭಾಭವನ
ಕ್ಷೇತ್ರದ ಆವಶ್ಯಕತೆಗೆ ತಕ್ಕುದಾದ ಮತ್ತೂಂದು ಸಭಾಭವನ ನಿರ್ಮಿಸಲು ಸಮಿತಿ ತೀರ್ಮಾನ ಮಾಡಿ, ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಯವರ ಮಾರ್ಗದರ್ಶನದಲ್ಲಿ ಸಮಿತಿಯ ಪದಾಧಿಕಾರಿಗಳು ಸಭಾಭವನ ನಿರ್ಮಿಸಲು ಕಾರ್ಯಪ್ರವೃತ್ತರಾದರು. ಸರ್ವರ ಸಹಕಾರದಲ್ಲಿ ಈಗ 35 ಲಕ್ಷ ರೂ. ವೆಚ್ಚದಲ್ಲಿ ಸುಂದರ ಸಭಾಭವನ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಪ್ರಥಮ ಮಹಡಿಯಲ್ಲಿ ಸಭಾಭವನವನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ. ಜತೆಗೆ ಪುಷ್ಕರಿಣಿ ನವೀಕರಣ, ಸನ್ಮತಿ ಸಭಾಭವನ ವಿಸ್ತರಣೆ ಇತ್ಯಾದಿ ಯೋಜನೆಗಳನ್ನು ರೂಪಿಸಲಾಗಿದೆ.