Advertisement

ಅರ್ಹ ಬ್ರಾಹ್ಮಣರು ಸಿಎಂ ಆದರೆ ತಪ್ಪಲ್ಲ: ಸುಬುಧೇಂದ್ರ ತೀರ್ಥರು

09:58 PM Feb 07, 2023 | Team Udayavani |

ಬಾಗಲಕೋಟೆ: ಸಮಾಜಮುಖಿ ಕಾರ್ಯ ಮಾಡುತ್ತ ಬಂದಿರುವ ಬ್ರಾಹ್ಮಣ ಸಮಾಜದ ಅರ್ಹ ವ್ಯಕ್ತಿಗಳು ರಾಜ್ಯದ ಮುಖ್ಯಮಂತ್ರಿಗಳಾದರೆ ತಪ್ಪಿಲ್ಲ ಎಂದು ಮಂತ್ರಾಲಯದ ಶ್ರೀ ಮಠದ ಸುಬುಧೇಂದ್ರ ತೀರ್ಥರು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಸಮುದಾಯವಾಗಿರುವ ಬ್ರಾಹ್ಮಣ ಸಮುದಾಯದಿಂದ ಮುಖ್ಯಮಂತ್ರಿ ಆಗಬೇಕು ಎಂಬುದು ಸಹ ಸಂವಿಧಾನದ ಆಶಯಗಳಲ್ಲಿ ಒಂದಾಗಿದೆ. ಬ್ರಾಹ್ಮಣ ಸಮುದಾಯವನ್ನು ಯಾರಾದರೂ ತೆಗಳಿದರೆ ಅಥವಾ ಯಾವುದೇ ಸಮುದಾಯವನ್ನು ತೆಗಳಿದರೂ ಸಂವಿಧಾನಕ್ಕೆ ಅಗೌರವ ಉಂಟು ಮಾಡಿದಂತಾಗುತ್ತದೆ ಎಂದರು.

ಎಚ್‌.ಡಿ.ಕುಮಾರಸ್ವಾಮಿ ದೈವ ಭಕ್ತರಿದ್ದಾರೆ. ಅವರು ಬ್ರಾಹ್ಮಣ ಸಮುದಾಯ ಬಗ್ಗೆ ಎಂದಿಗೂ ಹಗುರವಾಗಿ ಮಾತನಾಡಿಲ್ಲ. ಆದರೆ ಈಗ ಮಾತನಾಡಿರುವುದು ನೋಡುತ್ತಿದ್ದರೆ ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಕುಮಾರಸ್ವಾಮಿ ಅವರು ಪ್ರಹ್ಲಾದ ಜೋಶಿ ಬಗ್ಗೆ ವ್ಯಕ್ತಿಗತವಾಗಿ ಮಾತನಾಡಿದ್ದು ತಪ್ಪು. ಯಾರು ಮುಖ್ಯಮಂತ್ರಿ ಆಗಬೇಕು, ಆಗಬಾರದು ಎಂಬುದನ್ನು ಮತದಾರರು ನಿರ್ಧರಿಸುತ್ತಾರೆ. ಪ್ರಹ್ಲಾದ ಜೋಶಿ ಬಗ್ಗೆ ಮಾತನಾಡಿರುವ ಎಚ್‌ಡಿಕೆ ಅವರ ಮಾತುಗಳು ಅರ್ಥಹೀನ. ಪೇಶ್ವೆ ಬ್ರಾಹ್ಮಣ ಮತ್ತು ರಾಜ್ಯದ ಬ್ರಾಹ್ಮಣರ ನಡುವೆ ಒಡಕು ತರುವ ಹೇಳಿಕೆ ಸರಿಯಲ್ಲ ಎಂದರು.

ಸಿದ್ದರಾಮಯ್ಯ ಹೇಳಿಕೆ ದ್ವಂದ್ವ: ಸಿದ್ದರಾಮಯ್ಯ ನಾನು ಹಿಂದೂ ಆದರೆ ಹಿಂದುತ್ವ ಒಪ್ಪಲ್ಲ ಎಂದು ಮಾತನಾಡಿದ್ದಾರೆ. ಅದನ್ನು ನೋಡುತ್ತಿದ್ದರೆ ಅವರು ದ್ವಂದ್ವ ಹೇಳಿಕೆ ನೀಡಿದ್ದಾರೆ. ಹಿಂದೂಗಳಲ್ಲಿ ಇರುವಂತಹದ್ದೇ ನಿಜವಾದ ಹಿಂದುತ್ವ. ಹಾಗಾಗಿ ಸಿದ್ದರಾಮಯ್ಯ ಹೇಳಿರುವ ಮಾತಿನಲ್ಲಿ ಅರ್ಥವಿಲ್ಲ. ನಾವು ಹಿಂದೂ ಎಂದ ಮೇಲೆ ಹಿಂದುತ್ವದ ಬಗ್ಗೆ ಗೌರವ ತೋರಿಸಲೇಬೇಕು. ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ವಿಚಾರ ವಿನಿಮಯ ಮಾಡಿ ಬಗೆಹರಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next