ಶಿರ್ವ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವದೊಂದಿಗೆ ಸೋಮವಾರ ಷಷ್ಠಿ ಮಹೋತ್ಸವ ಮತ್ತು ಹಗಲು ರಥೋತ್ಸವ ಸಂಪನ್ನಗೊಂಡಿತು.
ಉಡುಪಿ ಪುತ್ತೂರು ವೇ|ಮೂ| ಶ್ರೀಶ ತಂತ್ರಿ ಅವರ ನೇತೃತ್ವದಲ್ಲಿ ಅರ್ಚಕ ವೇ|ಮೂ| ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಮುಂಜಾನೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ಡಿ. 1ರಂದು ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು , ಡಿ. 2ರಂದು ಮುಂಜಾನೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಬಲಿ, ಮಹಾಪೂಜೆ, ಷಷ್ಠಿ ಮಹೋತ್ಸವದ ರಥೋತ್ಸವ ನೆರವೇರಿತು. ಮಧ್ಯಾಹ್ನ ನಡೆದ ಮಹಾ ಅನ್ನ ಸಂತರ್ಪಣೆಯಲ್ಲಿ 25 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಡಿ. 5ರಂದು ಶ್ರೀ ಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ ಜರಗಲಿದೆ.
ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಗಣ್ಯರಾದ ಶಿರ್ವ ಕೋಡು ಬಾಲಕೃಷ್ಣ ಹೆಗ್ಡೆ, ಕುಕ್ಕೆಹಳ್ಳಿ ದೊಡ್ಡಬೀಡು ಸುಧಾಕರ ಹೆಗ್ಡೆ,ಪ್ರಶಾಂತ್ ಶೆಟ್ಟಿ ಸೂಡ, ಶಿರ್ವ ಕೋಡು ದಿನೇಶ್ ಹೆಗ್ಡೆ, ರಿತೇಶ್ ಶೆಟ್ಟಿ, ಶಂಕರ ಕುಂದರ್ ಸೂಡ, ಪ್ರಕಾಶ್ ಶೆಟ್ಟಿ ಶಿರ್ವ, ಸೋಮನಾಥ ಹೆಗ್ಡೆ,ಭಾಸ್ಕರ ಆಚಾರ್ಯ, ಶ್ರೀನಿವಾಸ ಭಟ್, ಗಣೇಶ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಕಳ ಎಎಸ್‌ಪಿ ಕೆ. ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಎಸ್‌ಐ ನಾಸಿರ್ ಹುಸೇನ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.