Advertisement

ಜ್ಞಾನಭಂಡಾರಿ ಸುಬುಧೇಂದ್ರ ಶ್ರೀ

08:27 PM Aug 16, 2019 | mahesh |

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಕಾಂಡ ಪಂಡಿತರು. ಅವರ ಜ್ಞಾನ ಭಂಡಾರ, ತತ್ವಸಾರ ಎಷ್ಟು ಓದಿದರೂ ಕಡಿಮೆಯೇ. ಅಂಥ ಮಹನೀಯರ ಮಠ ಮುನ್ನಡೆಸುವುದು ಹುಡುಗಾಟವಲ್ಲ. ಅಂಥ ಜ್ಞಾನ ಪಾಂಡಿತ್ಯ, ಘನ ವ್ಯಕ್ತಿತ್ವವುಳ್ಳ ಶ್ರೀ ಸುಬುಧೇಂದ್ರ ತೀರ್ಥರು ಇಂದು ಮಂತ್ರಾಲಯ ಮಠದ ಚುಕ್ಕಾಣಿ ಹಿಡಿದಿದ್ದು, ಮಠದ ಪ್ರಭೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

Advertisement

ವಿದ್ವತ್‌ಗೆ ಪರ್ಯಾಯ ಎಂದರೆ ಮಂತ್ರಾಲಯ ಎನ್ನುವಷ್ಟರ ಮಟ್ಟಿಗೆ ಮಾತು ಜನಜನಿತವಾಗಿದೆ. ಅದಕ್ಕೆ ಪೀಠಾಧಿ ಪತಿಗಳ ಜ್ಞಾನ ಪಾಂಡಿತ್ಯವೇ ಕಾರಣ. ಭಕ್ತರು ಗುರು ರಾಘವೇಂದ್ರರನ್ನು ಹೇಗೆ ಪೂಜಿಸುವರೋ, ಮಠದ ಪೀಠಾ ಧಿಪತಿಗಳನ್ನು ಅಷ್ಟೇ ಭಕ್ತಿಯಿಂದ ಕಾಣುತ್ತಾರೆ. ಅಪಾರ ಜ್ಞಾನ ದೈವ ಶಕ್ತಿಯಿಂದ ಶ್ರೀ ಕ್ಷೇತ್ರದ ಮಹಿಮೆ ಪಸರಿಸುತ್ತಿರುವ ಶ್ರೀಮಠದ ಪೀಠಾಧಿಪತಿ ಕಾರ್ಯ ಅನನ್ಯ, ಅಪ್ರತಿಮ.

ಮಂತ್ರಾಲಯ ಪೀಠಾಧ್ಯಕ್ಷ ಸ್ಥಾನ ಅಂತಿಂಥವರಿಗೆ ಸಿಗುವುದಲ್ಲ. ಘನ ಪಾಂಡಿತ್ಯ ಜತೆಗೆ ದೈವಾಂಶ ಸಂಭೂತರಿಗೆ ಒಲಿದು ಬರುತ್ತದೆ. ಅಂಥ ಸ್ಥಾನ ಅಲಂಕರಿಸಿದ ಶ್ರೀ ಸುಬುಧೇಂದ್ರ ತೀರ್ಥರು ತಮ್ಮ ವಾಗ್ಝರಿ, ಪಾಂಡಿತ್ಯದಿಂದ ಇಡೀ ವಿಶ್ವಕ್ಕೆ ಮಠದ ಮಹತ್ವ ಸಾರುತ್ತಿದ್ದಾರೆ.

ಸಣ್ಣ ಪ್ರಾಯದಲ್ಲೇ ಅಪಾರ ಜ್ಞಾನ ಸಂಪಾದಿಸಿದ ಶ್ರೀ ಸುಬುಧೇಂದ್ರ ತೀರ್ಥರು ವಿದ್ವಾಂಸರು, ಪಂಡಿತರು. ಶ್ರೀಮಠದ ಉಸ್ತುವಾರಿ ಹೊತ್ತಾಗಿನಿಂದ ಶ್ರೀಮಠದ ಏಳ್ಗೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ವೇದ, ಶಾಸ್ತ್ರಗಳ, ಗ್ರಂಥಗಳ ಪಾಂಡಿತ್ಯ ಗಳಿಸಿರುವ ಶ್ರೀ ಸುಬುಧೇಂದ್ರ ತೀರ್ಥರು, ಧಾರ್ಮಿಕ ಚೌಕಟ್ಟಿನೊಳಗೆ ಪ್ರಗತಿಗೆ ನಾಂದಿ ಹಾಡಿದ್ದು, ಆಧುನಿಕತೆಗೆ ತಕ್ಕಂತೆ ಮಠ ಬೆಳೆಸುತ್ತಿದ್ದಾರೆ.

ಅಧಿಕಾರ ಸ್ವೀಕಾರ:
ಹಾವೇರಿ ಜಿಲ್ಲೆ ಹೊಸರಿತ್ತಿಯಲ್ಲಿ ಸುಬುಧೇಂದ್ರರು ಬೃಂದಾವನ ಸನ್ನಿಧಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳಂತೆ ಮೇ 25, 2013ರಂದು ಶ್ರೀಮಠದ ಉತ್ತರಾಧಿಕಾರಿಗಳಾಗಿ ಅ ಧಿಕಾರ ಸ್ವೀಕರಿಸಿದರು. ಪೂರ್ವಾಶ್ರಮದಲ್ಲಿ ಶ್ರೀಗಳು ವೇದ, ಶಾಸ್ತ್ರಾಧ್ಯಯನ ನಡೆಸುವುದರ ಜತೆಗೆ ಶ್ರೀಮಠದ ದಿವಾನರಾಗಿಯೂ ಕಾರ್ಯ ನಿರ್ವಹಿಸಿದ್ದರು. ಶ್ರೀಮಠದ 52ನೇ ಪೀಠಾಧಿ ಕಾರಿಗಳಾಗಿದ್ದ ಶ್ರೀ ಸುಜಯೀಂದ್ರ ತೀರ್ಥರ ಪೂರ್ವಾಶ್ರಮದ ಮೊಮ್ಮಗರಾಗಿರುವ ರಾಜಾ ಎಸ್‌.ಪವಮಾನಾಚಾರ್‌ (ಶ್ರೀಗಳ ಪೂರ್ವಾಶ್ರಮದ ಹೆಸರು) ಶ್ರೀಮಠದ ವಿದ್ವಾಂಸರಾಗಿರುವ ಶ್ರೀ ಗಿರಿಯಾಚಾರ್‌ ಹಾಗೂ ಮಂಜುಳಾಬಾಯಿ ಅವರ ಏಕೈಕ ಸುಪುತ್ರರು.

Advertisement

ಅಧ್ಯಯನ:
ಚಿಕ್ಕವರಿದ್ದಾಗ ಸುಜಯೀಂದ್ರ ತೀರ್ಥರಲ್ಲಿ ಸಂಸ್ಕೃತ ಪಾಠ ಹಾಗೂ ಗ್ರಂಥಗಳ ಅಧ್ಯಯನ ನಡೆಸಿರುವ ಶ್ರೀಗಳು, ಹಿರಿಯ ವಿದ್ವಾಂಸರಾಗಿರುವ ತಂದೆ ಗಿರಿಯಾಚಾರ್‌ ಹತ್ತಿರ ವೇದಾಧ್ಯಯನ, ವೇದ ವೇದಾಂತ, ಶಾಸ್ತ್ರಾಧ್ಯಯನ, ಶ್ರೀಮದ್‌ ಸುಧಾ ಮಂಗಳ ಪಾಠ ಹೇಳಿಸಿಕೊಳ್ಳುವ ಮೂಲಕ ಪಾಂಡಿತ್ಯ ಸಾಧಿಸಿದರು. ಶ್ರೀ ಸುಜಯೀಂದ್ರ ತೀರ್ಥರ ಅವ ಧಿಯಿಂದಲೂ ಶ್ರೀ ಮಠದ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಶ್ರೀಮಠದ ಗುರು ಪರಂಪರೆ, ಪೂಜಾ ವಿ ಧಿ ವಿಧಾನ, ಧಾರ್ಮಿಕ ಪದ್ಧತಿಗಳ ಬಗ್ಗೆ ಪರಿಪೂರ್ಣ ಜ್ಞಾನ ಪಡೆದರು.

ಭಾಷಾ ಪ್ರವೀಣರು:
ಸಂಸ್ಕೃತ, ಕನ್ನಡ, ಇಂಗ್ಲಿಷ್‌, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿರುವ ಶ್ರೀಗಳು, ಸುಲಲಿತವಾಗಿ ಗಂಟೆಗಟ್ಟಲೇ ಪ್ರವಚನ ನೀಡಬಲ್ಲರು. ಶ್ರೀಗಳು ಶ್ರೀಗುರು ಸಾರ್ವಭೌಮ ವಿದ್ಯಾಪೀಠದಲ್ಲಿ ಶಿಕ್ಷಕರಾಗಿ, ಶ್ರೀ ಗುರುಸಾರ್ವಭೌಮ ಮಾಸ ಪತ್ರಿಕೆ ಸಂಪಾದಕೀಯ ಮಂಡಳಿ ಸದಸ್ಯರಾಗಿ ಸಂಸ್ಕೃತ, ಕನ್ನಡ ಹಾಗೂ ತೆಲುಗಿನಲ್ಲಿ ಹಲವಾರು ವಿದ್ವತ್‌ಪೂರ್ಣ ಲೇಖನಗಳನ್ನು ಪ್ರಕಟಿಸಿದ್ದಾರೆ. ಆಧುನಿಕತೆಯಿಂದ ಧರ್ಮ ಹಾಳಾಗದು ಎಂಬ ನಿಲುವು ಹೊಂದಿರುವ ಶ್ರೀಗಳು 21ನೇ ಶತಮಾನದಲ್ಲೂ ಧರ್ಮಕಾರ್ಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.

ಅದ್ಬುತ ಕಾರ್ಯ:
ಅಧಿಕಾರ ವಹಿಸಿದ 7 ವರ್ಷಗಳಲ್ಲೇ ದೂರದೃಷ್ಟಿ, ವೈಚಾರಿಕ ನಿಲುವುಗಳನ್ನು ಎಲ್ಲರನ್ನು ಸೆಳೆದಿವೆ. ಅವರ ಯೋಜನೆಗಳು ಅಬ್ಟಾ ಎನ್ನುವಂತಿವೆ. ಮಠವನ್ನು ಹೈಟೆಕ್‌ನತ್ತ ಹೊರಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಲೇಖನಿ ಹಿಡಿದು ಮಂತ್ರವೂ ಬರೆಯುತ್ತಾರೆ, ಸ್ವಚ್ಛತೆಗಾಗಿ ಟೊಂಕ ಕಟ್ಟಿ ಕಸವನ್ನೂ ಗುಡಿಸುತ್ತಾರೆ. ಏನೇ ಬದಲಾವಣೆ ಆದರೂ ನನ್ನಿಂದಲೇ ಶುರುವಾಗಲಿ ಎಂಬ ಹೃದಯ ವೈಶಾಲ್ಯತೆವುಳ್ಳ ವ್ಯಕ್ತಿತ್ವ. ಅಂಗವಿಕಲರಿಗೆ, ನಿರ್ಗತಿಕರಿಗೆ, ದೀನ ದಲಿತರಿಗೆ ಶ್ರೀಮಠದ ಅಭಯ ಚಾಚುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಆಶ್ರಯ ನೀಡಿದ್ದಲ್ಲದೇ, ವ್ಯಾಸಂಗದ ವ್ಯವಸ್ಥೆ ಮಾಡಿಸಿದ್ದಾರೆ. ಕಷ್ಟ ಎಂದ ಕಡೆ ಸ್ವತಃ ಧಾವಿಸಿ ನೆರವಿನ ಹಸ್ತ ಚಾಚುತ್ತಿದ್ದಾರೆ.

ಕೇವಲ ಶ್ರೀಮಠದ ಆಚರಣೆಗಳಲ್ಲಿ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ಹತ್ತು ಹಲವು ಜನೋಪಯೋಗಿ ವಿಚಾರಗಳ ಬಗ್ಗೆ ಶ್ರೀಗಳು ಚಿಂತಿಸುತ್ತಿದ್ದಾರೆ. ಧರ್ಮದ ಬಗ್ಗೆ ಬಹು ಒಲವು ಹೊಂದಿರುವ ಶ್ರೀಗಳು, ಎಂಥ ಸಂದಿಗ್ಧ ಸ್ಥಿತಿಯಲ್ಲೂ ನಮ್ಮ ಧರ್ಮ ಬಿಡಬಾರದು, ಅನ್ಯ ಧರ್ಮ ಟೀಕಿಸಬಾರದು ಎಂಬ ಸಿದ್ಧಾಂತದವರು. ಹಿಂದು ಧರ್ಮ ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದಾರೆ.

ಭಕ್ತರ ಶ್ರೇಯೋಭಿವೃದ್ಧಿಗಾಗಿ ಹಲವು ಮಹತ್ತರ ಯೋಜನೆಗಳು ತಲೆಯೆತ್ತುವಲ್ಲಿ ಶ್ರೀ ಸುಬುಧೇಂದ್ರ ತೀರ್ಥರದ್ದು ಸಿಂಹಪಾಲೆಂದರೆ ತಪ್ಪಾಗಲಿಕ್ಕಿಲ್ಲ. ಕೆಲವೇ ವರ್ಷಗಳಲ್ಲಿ ಹೈಟೆಕ್‌ ಮಂತ್ರಾಲಯ ನಿರ್ಮಿಸುವ ಮಹದಾಸೆ ಹೊಂದಿದ್ದು, ಶ್ರೀಮಠಕ್ಕೆ ಭೇಟಿ ಕೊಟ್ಟವರಿಗೆ ಅದರ ಅನುಭವ ಆಗುತ್ತದೆ.

ಭಕ್ತಿಪೂರ್ಣ ಪರಿಮಳಾ
ಪ್ರಸಾದಕ್ಕೆ ತಿರುಪತಿ ಲಾಡು ಹೇಗೆ ಪ್ರಸಿದ್ಧಿಯೋ ಹಾಗೇ ಮಂತ್ರಾಲಯ ಎಂದರೆ ಪರಿಮಳಾ ಪ್ರಸಾದ ಪ್ರಸಿದ್ಧ. ಪರಿಶುದ್ಧ ತುಪ್ಪ ಬಳಸಿ ತಯಾರಿಸುವ ಪರಿಮಳಾ ಪ್ರಸಾದ ತಿಂದವರಿಗೆ ಗೊತ್ತು ಅದರ ಸವಿ. ಫೇಣೆ ರವಾ, ಸಕ್ಕರೆ, ಶುದ್ಧ ತುಪ್ಪ, ಗೋಂಡಬಿ, ದ್ರಾಕ್ಷಿ, ಏಲಕ್ಕಿ, ಜಾಯಿಕಾಯಿ, ಜಾಯಿಪತ್ರೆ, ಕೇಸರಿ ಬಣ್ಣ ಬಳಸಿ ಪರಿಮಳಾ ಪ್ರಸಾದ ತಯಾರಿಸಲಾಗುತ್ತದೆ. ಒಂದು ಪ್ರಸಾದಕ್ಕೆ 20 ರೂ.. ಒಂದರಲ್ಲಿ ನಾಲ್ಕು ಪೇಡೆ ಸಿಗುತ್ತದೆ.

ನಿತ್ಯ ಸಾವಿರಾರು ಪ್ಯಾಕೇಟ್‌ಗಳು ಖಾಲಿಯಾಗುತ್ತದೆ. ಆರಾಧನೆ ವೇಳೆ 5 ಲಕ್ಷಕ್ಕೂ ಅಧಿ ಕ ಪ್ಯಾಕೇಟ್‌ ತಯಾರಿಸುತ್ತೇವೆ ಎನ್ನುವುದು ಮಠದ ಅ ಧಿಕಾರಿಗಳ ಮಾತು. ಶ್ರೀಮನ್ಯಾಯಸುಧಾ’ಕ್ಕೆ ಟಿಪ್ಪಣಿ ಬರೆದು ಪರಿಮಳದ ಮೆರಗು ನೀಡಿದ ವೆಂಕಟನಾಥರಿಗೆ (ಶ್ರೀಗುರುರಾಜರ ಪೂರ್ವಾಶ್ರಮದ ಹೆಸರು), ಅವರ ಗುರುಗಳಾದ ಶ್ರೀಸುಧಿಧೀಂದ್ರರು ಆ ಟಿಪ್ಪಣಿಗೆ ಪರಿಮಳ ಎಂದೇ ನಾಮಕರಣ ಮಾಡಿದ್ದರು. ಗುರುರಾಜರನ್ನು ಪರಿಮಳಾಚಾರ್ಯರೆಂದು ಆಗ ಕರೆಯುತಿದ್ದರಂತೆ. ಅದೇ ಹಿನ್ನೆಲೆಯಲ್ಲಿ ಈ ಪ್ರಸಾದಕ್ಕೆ ಪರಿಮಳಾ ಪ್ರಸಾದ ಎಂಬ ಹೆಸರು ಬಂದಿತೆಂಬುದು ವಿದ್ವಾಂಸರ ಅಭಿಪ್ರಾಯ. ಆದರೆ, ಮಠಕ್ಕೆ ಬರುವ ಭಕ್ತರು ಮಾತ್ರ ಪರಿಮಳಾ ಪ್ರಸಾದವಿಲ್ಲದೇ ಹಿಂದಿರುಗುವ ಮಾತೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next