ಹರಿಹರ: ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಆದ್ಯಾತ್ಮಿಕ ಪ್ರವಚನ ಅತ್ಯಂತ ಶ್ರೇಷ್ಠ ವಿಚಾರಗಳು ಹಾಗೂ ಗರಿಷ್ಠ ಮೌಲ್ಯ ಹೊಂದಿರುತ್ತದೆ ಎಂದು ಐರಣಿ ಹೊಳೆಮಠದ ಬಸವರಾಜ ದೇಶೀಕೇಂದ್ರ ಶ್ರೀಗಳು ಶ್ಲಾಘಿಸಿದರು.
ನಗರದ ಗಿರಿಯಮ್ಮ ಮಹಿಳಾ ಕಾಲೇಜು ಆವರಣದಲ್ಲಿ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ ಸೇವಾಬಳಗ ಹಮ್ಮಿಕೊಂಡಿರುವ ಒಂದು ತಿಂಗಳ ಕಾಲದ ಅಧ್ಯಾತ್ಮ ಪ್ರವಚನ ಕಾರ್ಯಕ್ರಮಕ್ಕೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿಯ 84 ಲಕ್ಷಕ್ಕೂ ಅಧಿಕ ಜೀವರಾಶಿಗಳಲ್ಲಿ, ಮನುಷ್ಯನೇ ಅಪಾಯಕಾರಿ ಎನ್ನುವಂತ ಪರಿಸ್ಥಿತಿ ಇದ್ದು, ಇಂದಿನ ಜನರಲ್ಲಿ ಸನ್ಮಾರ್ಗ, ಸದ್ವಿಚಾರ ಬೆಳೆಸಲು ಇಂತಹ ಮಹಾತ್ಮರ ಪ್ರವಚನ, ಉಪದೇಶಗಳು ಅತ್ಯಗತ್ಯವಾಗಿವೆ ಎಂದರು. ವಿವೇಕಾನಂದಾಶ್ರಮದ ಶಾರದೇಶಾನಂದ ಶ್ರೀ ಮಾತನಾಡಿ, ಸಿದ್ದೇಶ್ವರ ಶ್ರೀಗಳು ತಮ್ಮ ಉಪದೇಶಗಳಿಂದ ನಡೆದಾಡುವ ದೇವರೆಂದೆ ಪ್ರಸಿದ್ಧರಾಗಿದ್ದಾರೆ.
ನಗರದಲ್ಲಿ ಶ್ರೀಗಳ ಪ್ರವಚನ ಆಯೋಜಿಸಿರುವುದು ನಮ್ಮೆಲ್ಲರ ಅದೃಷ್ಟ. ತಾಲೂಕಿನ ಜನತೆ ಕುಟುಂಬ ಸಮೇತರಾಗಿ ಬಂದು ಶ್ರೀಗಳು ಪ್ರಸ್ತುತಪಡಿಸುವ ಶ್ರೇಷ್ಠ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಯುವಜನತೆ ಶ್ರೀಗಳ ಚಿಂತನೆಯ ಪ್ರಸ್ತುತತೆ ಅರಿತು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಮನುಷ್ಯ ಎಷ್ಟೆ ಸಿರಿ-ಸಂಪತ್ತು ಗಳಿಸಬಹುದು, ಆದರೆ ಜ್ಞಾನ ಸಂಪತ್ತು, ಉತ್ತಮ ವಿಚಾರ ಗಳಿಸುವುದು ಸುಲಭವಲ್ಲ. ರಾಜ್ಯದ ದಕ್ಷಿಣದಲ್ಲಿ ದಾಸೋಹ, ಶಿಕ್ಷಣ ಸೇವೆ ಸಲ್ಲಿಸಿರುತ್ತಿರುವ ಸಿದ್ದಗಂಗಾ ಶ್ರೀಗಳನ್ನು, ಉತ್ತರದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳನ್ನು ನಡೆದಾಡುವ ದೇವರೆಂದು ಹೇಳಲಾಗುತ್ತಿದೆ ಎಂದರು.
ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು, ನಂದಿಗುಡಿ ಬೃಹನ್ಮಠದ ಸಿದ್ದರಾಮೇಶ್ವರ ಶ್ರೀ, ಗುತ್ತೂರು ಸಿದ್ದಾಶ್ರಮದ ಪ್ರಭುಲಿಂಗ ಶ್ರೀ, ಯಲವಟ್ಟಿಯ ಯೋಗಾನಂದ ಶ್ರೀ, ಕೋಡಿಯಾಲ ಹೊಸಪೇಟೆಯ ಜಗದೀಶ್ವರ ಶ್ರೀ ಉಪಸ್ಥಿತರಿದ್ದರು. ಸೇವಾ ಬಳಗದ ಅಧ್ಯಕ್ಷ ಶರದ್ ಕೊಣ್ಣೂರು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಬಿ.ಪಿ.ಹರೀಶ್, ಎಸ್.ರಾಮಪ್ಪ, ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್, ಸದಸ್ಯ ಶಂಕರ್ ಖಟಾವಕರ್, ಎಸ್.ಎಂ.ವೀರೇಶ್, ಬಿ.ಸಿ.ಉಮಾಪತಿ, ಮಠಪತಿ, ಎನ್.ಜಿ.ನಾಗನಗೌಡ, ಬಳಗದ ಎಸ್.ಎಚ್ .ಪ್ಯಾಟಿ, ಆರ್.ಆರ್.ಕಾಂತರಾಜ್, ಗಣೇಶಪ್ಪ ಕಂಚಿಕೇರಿ, ಎ.ಪ್ರಸನ್ನಕುಮಾರ್, ಗೌಡ್ರ ಪಾಪಣ್ಣಿ, ಸಿಪಿಐ ನ್ಯಾಮೆಗೌಡ, ಪಿಎಸ್‌ಐ ಸಿದ್ದನಗೌಡ ಮತ್ತಿತರರಿದ್ದರು.