Advertisement

ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಜಯಂತ್ಯುತ್ಸವ

02:04 AM Apr 02, 2019 | Sriram |

ತುಮಕೂರು: ಶತಾಯುಷಿ ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು 111 ವಸಂತಗಳನ್ನು ಪೂರೈಸಿ ಲಿಂಗೈಕ್ಯರಾಗಿದ್ದು, ಶ್ರೀಗಳ 112ನೇ ವರ್ಷದ ಜಯಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಸೋಮವಾರ ಶ್ರೀಮಠದಲ್ಲಿ ಸಿದ್ದಲಿಂಗ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು.

Advertisement

ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ 112ನೇ ವರ್ಷದ ಜಯಂತಿ ಹಿನ್ನೆಲೆಯಲ್ಲಿ ಈ ವರ್ಷವೂ ಭಕ್ತರು ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಬಂದಿದ್ದರು. ಆದರೆ ಶ್ರೀಗಳಿಲ್ಲದ ಮಠದಲ್ಲಿ ಶ್ರೀಗಳಿದ್ದಾರೆ ಎನ್ನುವ ಭಾವ ಆವರಿಸಿತ್ತು.

ಮೊದಲ ಬಾರಿಗೆ ಮೂರ್ತ ಶ್ರೀಗಳಿಲ್ಲದ ಜಯಂತ್ಯುತ್ಸವದಲ್ಲಿ ಗುರುವಂದನೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಗಳ ಹರಗುರುಚರಮೂರ್ತಿಗಳು ವಿಶೇಷ ಪಾದಪೂಜೆ, ಆರತಿ ಮಾಡಿ ಭಕ್ತಿ ಸಮರ್ಪಿಸಿದರು. ಶಿವಕುಮಾರ ಶ್ರೀಗಳು ಈವರೆಗೆ ಬೆಳಗಿನಜಾವ 3 ಗಂಟೆಗೆ ಎದ್ದು 5 ಗಂಟೆಯೊಳಗೆ ಶಿವಪೂಜೆ ಮಾಡುತ್ತಿದ್ದರು. ಆದರೆ ಶ್ರೀಗಳು ಲಿಂಗೈಕ್ಯರಾಗಿರುವ ಹಿನ್ನೆಲೆ ಶ್ರೀ ಸಿದ್ಧಗಂಗ ಸ್ವಾಮಿಗಳು ಹಿರಿಯ ಶ್ರೀಗಳ ಗದ್ದುಗೆಗೆ ಸೋಮವಾರ ಬೆಳಗ್ಗೆ 4 ಗಂಟೆಗೆ ಹಳೇ ಮಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಅಲ್ಲಿ ನೂರಾರು ಮಂದಿ ಲಿಂಗಪೂಜೆಯನ್ನು ಸಾಕ್ಷೀಕರಿಸಿದರು. ನಂತರ ಇಡೀ ದಿನ ಭಕ್ತರಿಗೆ ದರ್ಶನ ನೀಡದರು. ಅಧಿಕಾರಿಗಳು ಸೇರಿ ಅನೇಕ ಗಣ್ಯರು, ಭಕ್ತರು ಸರತಿಯಲ್ಲಿ ಶಿವಕುಮಾರಸ್ವಾಮಿಗಳ ಗದ್ದುಗೆಗೆ ನಮಿಸಿದರು.

ಭಕ್ತರಿಗೆ ಸಿಹಿ ಊಟ
ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ 112ನೇ ವರ್ಷದ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಭಕ್ತರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 5.30 ರಿಂದಲೇ ಬಿಸಿ ಬಿಸಿ ಉಪ್ಪಿಟ್ಟು, ಕೇಸರಿಬಾತ್‌ ವಿತರಿಸಲಾಯಿತು. ಜತೆಗೆ ಇಡ್ಲಿ ಕೂಡ ನೀಡಲಾಯಿತು. ಮಧ್ಯಾಹ್ನ ಊಟದಲ್ಲಿ ಅನ್ನ ಸಾಂಬಾರ್‌, ಪಾಯಸ, ತುಪ್ಪ, ಸಿಹಿಬೂಂದಿ, ಖಾರಬೂಂದಿ, ಕೋಸಂಬರಿ, ತರಕಾರಿ ಕೂಟು ಬಡಿಸಿದರು. 5 ಕಡೆಗಳಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಠದಲ್ಲಿಯೂ ರಾತ್ರಿವರೆಗೆ ನಿರಂತರ ದಾಸೋಹ ನಡೆಯಿತು.

ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು
ತ್ರಿವಿದ ದಾಸೋಹಿ, ಅಭಿನವ ಬಸವಣ್ಣ ಎಂದೆಲ್ಲ ಭಕ್ತರಿಂದ ಕರೆಸಿಕೊಳ್ಳುತ್ತಿದ್ದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 112ನೇ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಡೆವೋಟೀಸ್‌ ಅಸೋಸಿಯೇಷನ್‌ನಿಂದ 112 ಮಕ್ಕಳಿಗೆ ಶ್ರೀಗಳ ಹೆಸರನ್ನು ನಾಮಕರಣ ಮಾಡಿ ಮಕ್ಕಳಿಗೆ ತೊಟ್ಟಿಲು ನೀಡಿದರು. ಜತೆಗೆ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಪರಿಸರ ಜಾಗೃತಿ ಹಿನ್ನೆಲೆಯಲ್ಲಿ 112 ಹೊಂಗೆ ಸಸಿಗಳನ್ನು ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next