ಮಲ್ಪೆ: ರಾಮ ಅಂದರೆ ನಮ್ಮ ರಾಷ್ಟ್ರ, ನಮ್ಮ ಧರ್ಮ, ನಮ್ಮ ಸಂಸ್ಕೃತಿ, ಜೀವನ ಮೌಲ್ಯಗಳು. ರಾಮನನ್ನು ಬಿಟ್ಟು ಬೇರೆ ಜೀವನ ಮೌಲ್ಯಗಳು ಜಗತ್ತಿನಲ್ಲಿ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಸೋಮವಾರ ಕಲ್ಯಾಣಪುರ ಸಂತೆಕಟ್ಟೆಗೆ ಆಗಮಿಸಿದ ರಾಮನ ದಿಗ್ವಿಜಯ ರಥಯಾತ್ರೆಯ ಸಂದರ್ಭದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ರಾಮಮಂದಿರವನ್ನು ನಿರ್ಮಿಸುವುದಷ್ಟೇ ನಮ್ಮ ಉದ್ದೇಶವಾಗಬಾರದು. ದೇಶವನ್ನು ರಾಮರಾಜ್ಯವಾಗಿಸುವ ನಿಟ್ಟಿನಲ್ಲೂ ಶ್ರಮಿಸಬೇಕು. ಮೊದಲು ನಾವು ರಾಮನಾಗಬೇಕು. ಹಿರಿಯರು ಕಿರಿಯರನ್ನು ಸರಿದಾರಿಯಲ್ಲಿ ನಡೆಸ ಬೇಕು. ನಮ್ಮೆಲ್ಲರ ಹೃದಯದಲ್ಲಿ ರಾಮಮಂದಿರದ ಉದಯವಾಗ ಬೇಕು ಎಂದರು.
ರಾಮ ಧರ್ಮದ ಸಾಕಾರ ಮೂರ್ತಿ
ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀರಾಮ ಧರ್ಮದ ಸಾಕಾರ ಮೂರ್ತಿ. ಯಾರನ್ನು ಶ್ರೀರಾಮ ಬದುಕಿನಲ್ಲಿ ಒಂದು ಬಾರಿಯೂ ನೋಡಿಲ್ಲವೋ ಯಾವ ವ್ಯಕ್ತಿ ಬದುಕಿನಲ್ಲಿ ರಾಮನನ್ನು ಒಂದು ಬಾರಿಯೂ ಕಂಡಿಲ್ಲವೋ ಅವರಿಬ್ಬರೂ ಕೂಡ ಲೋಕದಲ್ಲಿ ನಿಂದಿತರಾಗಿರುತ್ತಾರೆ. ಅವರ ಅಂತರಾತ್ಮವೇ ಅವರನ್ನು ನಿಂದಿಸುತ್ತದೆ. ವ್ಯಕ್ತಿ ಪ್ರಪಂಚದಲ್ಲಿ ತಾನೊಬ್ಬ ಮಾತ್ರ ಬದುಕದೆ ಎಲ್ಲರೂ ಸುಖದಿಂದ ಬದುಕಬೇಕು ಎಂದು ಬಯಸುತ್ತಾನೋ ಅದು ಧರ್ಮ. ರಾಮರಾಜ್ಯದ ಕನಸು ನನಸಾಗಬೇಕಾದರೆ ನಾವೆಲ್ಲರೂ ರಾಮನ ಆದರ್ಶವನ್ನು ಪಾಲಿಸಬೇಕು ಎಂದು ನುಡಿದರು.
Related Articles
ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶಕ್ತಿ ಶಾಂತಾನಂದ ಮೂರ್ತಿ ಮಾತನಾಡಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಈ ಹಿಂದೆ ಅಯೋಧ್ಯೆಯಲ್ಲಿ ಕರಸೇವಕರಾಗಿ ಕೆಲಸ ಮಾಡಿದ ಪ್ರಮುಖರನ್ನು ಗೌರವಿಸಲಾಯಿತು. ಗೌರವಾಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಮಹಿಳಾ ಪ್ರಮುಖ್ ತಾರಾ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.
ದಿಗ್ವಿಜಯ ರಥಯಾತ್ರ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ ಲಕ್ಷ್ಮೀ ನಗರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ಪ್ರಸ್ತಾವನೆಗೈದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಮೆಂಡನ್ ವಂದಿಸಿದರು.
ಮೂಡುಬಿದಿರೆಯಲ್ಲಿ ಸ್ವಾಗತ
ರಥಯಾತ್ರೆಯು ಸೋಮವಾರ ಸಂಜೆ ಮೂಡುಬಿದಿರೆಗೆ ಆಗಮಿಸಿದ್ದು ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸೋಲೂರು ಆರ್ಯ ಈಡಿಗ ಮಠದ ಶ್ರೀ ವಿದ್ಯಾನಂದ ಸ್ವಾಮೀಜಿ ಮತ್ತು ಸ್ಥಳೀಯ ಗಣ್ಯರು ಸ್ವಾಗತಿಸಿದರು.
ವಾಹನ ಜಾಥಾ
ವಾಹನ ಜಾಥಾದಲ್ಲಿ ಸಾವಿರಾರು ಬೈಕ್, ಕಾರುಗಳು ಪಾಲ್ಗೊಂಡಿದ್ದು ವಿವಿಧ ವೇಷ ಭೂಷಣಗಳು, ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗನ್ನು ನೀಡಿದವು. ರಸ್ತೆಯ ಪಕ್ಕದ ಕೆಲವು ಅಂಗಡಿ, ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸುಮಂಗಲಿಯರು ಶ್ರೀರಾಮನ ರಥಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ರಥಯಾತ್ರೆಯು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ವರೆಗೆ ಸಾಗಿ ಅಲ್ಲಿ ವಿಶೇಷ ಪೂಜೆ ನಡೆಯಿತು. ಡಾ| ಜಿ. ಶಂಕರ್ ನೇತೃತ್ವದಲ್ಲಿ ಸುಮಾರು 4,500 ಮಂದಿಗೆ ಅನ್ನ ಪ್ರಸಾದ ಸೇವೆ ಜರಗಿತು.